`ಜಲೀಲ್ ಕೊಲೆ ಕೇಸು ಸಿಒಡಿ ತನಿಖೆಗೆ ಒತ್ತಾಯ ಹಾಸ್ಯಾಸ್ಪದ’

ನಮ್ಮ ಪ್ರತಿನಿಧಿ ವರದಿ

ವಿಟ್ಲ : “ಜಲೀಲ್ ಕೊಲೆ ಆರೋಪಿಗಳನ್ನು ಬಂಧಿಸಿದ ಪೊಲೀಸ್ ಇಲಾಖೆಯನ್ನು ಅಭಿನಂದಿಸಬೇಕಿದ್ದ ಉಸ್ಮಾನ್ ಹಾಜಿಯವರು ಪೊಲೀಸ್ ತನಿಖೆ ನಮಗೆ ತೃಪ್ತಿ ತಂದಿಲ್ಲವೆಂದು ಹೇಳಿ ಸಿಒಡಿ ತನಿಖೆಗೆ ಒತ್ತಾಯಿಸುವುದು ಹಾಸ್ಯಾಸ್ಪದ, ವೈಯುಕ್ತಿಕ ಧ್ವೇಷ ತೀರಿಸಲು ರಾಜಕೀಯ ಒತ್ತಡ ಹಾಕಿ ನಿರಪರಾಧಿಗಳನ್ನು ಬಂಧಿಸಿದರೆ ಪ್ರತಿಭಟನೆ ನಡೆಸುತ್ತೇವೆ” ಎಂದು ಕರೋಪಾಡಿ ಗ್ರಾ ಪಂ ಮಾಜಿ ಅಧ್ಯಕ್ಷ ವಿಘ್ನೇಶ್ವರ ಭಟ್ ಅನೆಯಾಲಕೋಡಿ ಎಚ್ಚರಿಸಿದ್ದಾರೆ. “ಜಲೀಲ್ ಹತ್ಯೆ ನಡೆದ ಬಳಿಕ ಸಚಿವ ರೈಯವರು, ಸಚಿವ ಖಾದರ್ ಅಲ್ಲದೇ ಪಕ್ಷದ ಹಲವಾರು ಮುಖಂಡರು ಉಸ್ಮಾನ್ ಮನೆಗೆ ಭೇಟಿ ನೀಡಿದ್ದಾರೆ. ಇತ್ತೀಚೆಗೆ ಆಗಮಿಸಿದ ರಾಜ್ಯದ ಗೃಹ ಸಚಿವರು ಕೂಡಾ ಸಾಂತ್ವನ ಹೇಳಿ ಆರೋಪಿಗಳ ವಿರುದ್ಧ ಕಠಿಣ ಕ್ರಮದ ಭರವಸೆ ನೀಡಿದ್ದಾರೆ. ಹಲವು ವರ್ಷಗಳಿಂದ ಕಾಂಗ್ರೆಸ್ಸಿನಲ್ಲಿರುವ ಉಸ್ಮಾನ್ ಹಾಜಿಯವರು ಇದೀಗ ತನ್ನದೇ ಪಕ್ಷದ ಸಚಿವರ ಭೇಟಿಯಿಂದ ಏನೂ ಪ್ರಯೋಜನವಾಗಿಲ್ಲವೆಂದು ಹೇಳುತ್ತಿರುವುದು ಹಾಸ್ಯಾಸ್ಪದ. ಕಳೆದ ಕೆಲವು ವರ್ಷಗಳಿಂದ ಕನ್ಯಾನ, ಕರೋಪಾಡಿ ಗ್ರಾಮಗಳಲ್ಲಿ ಯಾವುದೇ ಘಟನೆಗಳು ನಡೆದರೂ ಇದೇ ರೀತಿ ಇಲಾಖೆಯ ಮೇಲೆ ಒತ್ತಡ ಹಾಕಿ ನಿರಪರಾಧಿಗಳ ಮೇಲೆ ಪ್ರಕರಣ ದಾಖಲಿಸಿ ವೈಯುಕ್ತಿಕ ಧ್ವೇಷ ತೀರಿಸುವುದು ಮಾಮೂಲಾಗಿದೆ. ಮತ್ತೆ ಇದೇ ಮುಂದುವರಿದರೆ ಗ್ರಾಮಸ್ಥರು ಸುಮ್ಮನಿರುವುದಿಲ್ಲ. ಉಗ್ರ ಪ್ರತಿಭಟನೆ ನಡೆಸುತ್ತೇವೆ” ಎಂದು ಎಚ್ಚರಿಸಿದ್ದಾರೆ.

“ಭೂಗತ ಡಾನ್ ವಿಕ್ಕಿ ಶೆಟ್ಟಿ 2 ವರ್ಷದ ಹಿಂದೆ ಇಂಟರ್ನೆಟ್ ಕರೆ ಮಾಡಿ ಬೆದರಿಕೆ ಹಾಕಿದ್ದಾನೆಂದು ಉಸ್ಮಾನ್ ಹಾಜಿ ಹೇಳುತ್ತಿದ್ದಾರೆ. ಯಾಕೆ ಅಂದೇ ಪೊಲೀಸರಿಗೆ ಆತನ ವಿರುದ್ಧ ದೂರು ನೀಡಿಲ್ಲ ? ಅಥವಾ ಇಂಟರ್‍ನೆಟ್ ಕರೆ ಮಾಡಿದ್ದು ವಿಕ್ಕಿ ಶೆಟ್ಟಿ ಎಂಬುದಕ್ಕೆ ಇವರಲ್ಲೇನಿದೆ ದಾಖಲೆ ?” ಎಂದು ಭಟ್ ಪ್ರಶ್ನಿಸಿದ್ದಾರೆ.

“ವೈಯುಕ್ತಿಕ ಧ್ವೇಷ ತೀರಿಸಲು ರಾಜಕೀಯ ಒತ್ತಡ ಹಾಕಿ ತನಿಖೆಯ ನೆಪದಲ್ಲಿ ಅಮಾಯಕರನ್ನು ಬಲಿಪಶು ಮಾಡಲು ಉಸ್ಮಾನ್ ಹಾಜಿ ಇಂತಹ ಹೇಳಿಕೆ ನೀಡುವುದು ಸರಿಯಲ್ಲ” ಎಂದು ಹೇಳಿರುವ ವಿಘ್ನೇಶ್ವರ ಭಟ್ ಕನ್ಯಾನದಲ್ಲಿ ಹೊರಠಾಣೆ ತೆರೆಯಬೇಕೆಂದು ಒತ್ತಾಯಿಸಿದ್ದಾರೆ.