ರಾಜ್ಯದ ಬ್ಯಾಂಕುಗಳಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶಕ್ಕೆ ಆಂದೋಲನ

ಬೆಂಗಳೂರು : ಸಾರ್ವಜನಿಕ ಮತ್ತು ಖಾಸಗಿ ಬ್ಯಾಂಕುಗಳಲ್ಲಿ ಕನ್ನಡ ಭಾಷಿಕರಿಗೆ ಉದ್ಯೋಗ ನೀಡುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಹಮ್ಮಿಕೊಂಡಿರುವ `ನಮ್ಮ ಬ್ಯಾಂಕು, ಕನ್ನಡ ಬೇಕು’ ಆಂದೋಲನ ತೀವ್ರತೆ ಪಡೆದುಕೊಳ್ಳುತ್ತಿದ್ದು ಬೆಂಗಳೂರಿನ ಭಾರತೀಯ ಸ್ಟೇಟ್ ಬ್ಯಾಂಕ್  ಮುಖ್ಯಕಚೇರಿಯ ಎದುರು ಪ್ರತಿಭಟನೆ ನಡೆಸಲಾಗಿದೆ. ಸೇಂಟ್ ಮಾಕ್ರ್ಸ್ ರಸ್ತೆಯಲ್ಲಿರುವ ಎಸ್ ಬಿ ಐ ಕಚೇರಿಯ ಮುಂದೆ ನೆರೆದ ಪ್ರತಿಭಟನಾಕಾರರು ಬ್ಯಾಂಕಿನ ಕಡತಗಳಲ್ಲಿ ಹಿಂದಿ ಭಾಷೆಯನ್ನು ಬಳಸದಂತೆ ಆಗ್ರಹಿಸಿವೆ.

ಮಂಡ್ಯ ಮತ್ತು ಚಿಕ್ಕಬಳ್ಳಾಪುರದ ಕೆಲವು ಬ್ಯಾಂಕುಗಳಲ್ಲಿ ಉದ್ಯೋಗಿಗಳು ಕನ್ನಡದಲ್ಲಿ ವ್ಯವಹರಿಸಲು ನಿರಾಕರಿಸಿರುವುದೇ ಅಲ್ಲದೆ ಗ್ರಾಹಕರನ್ನು ಹಿಂದಿ ಮಾತನಾಡಲು ಆಗ್ರಹಿಸಿರುವುದು ಈ ಹೋರಾಟಕ್ಕೆ ಪ್ರೇರಣೆಯಾಗಿದೆ. ಈ ಹಿನ್ನೆಲೆಯಲ್ಲೇ ಕನ್ನಡ ಭಾಷಾಜ್ಞಾನ ಇರುವವರನ್ನೇ ಬ್ಯಾಂಕ್ ಹುದ್ದೆಗಳಿಗೆ ನೇಮಿಸುವಂತೆ ಕರವೇ ಎಲ್ಲ ಬ್ಯಾಂಕುಗಳನ್ನು ಆಗ್ರಹಿಸಿದೆ.

ನಿರುದ್ಯೋಗದಿಂದ ಬಳಲುತ್ತಿರುವ ಕನ್ನಡಿಗರಿಗೆ ಉದ್ಯೋಗಾವಕಾಶ ನೀಡಬೇಕು ಮತ್ತು ನಿತ್ಯ ಬ್ಯಾಂಕ್ ವ್ಯವಹಾರಗಳಲ್ಲಿ ಬಳಸಲಾಗುವ ಚಲನ್ಸ್, ಚೆಕ್ ಪುಸ್ತಕ ಮತ್ತಿತರ ದಾಖಲೆಗಳಲ್ಲಿ ಕಡ್ಡಾಯವಾಗಿ ಕನ್ನಡ ಬಳಸಬೇಕು ಎಂದು ಕರವೇ ಆಗ್ರಹಿಸಿದೆ.

ಒಂದು ತಿಂಗಳ ಅವಧಿಯಲ್ಲಿಸಮಸ್ಯೆ ಬಗೆಹರಿಯದೆ ಹೋದರೆ ಎಲ್ಲ 224 ವಿಧಾನಸಭಾ ಕ್ಷೇತ್ರಗಳಲ್ಲೂ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ ಎಂದು ಕರವೇ ಹೇಳಿದೆ.