ದಲಿತ ಬಣಗಳ ರಾಜಕೀಯ ಉಲ್ಬಣ : ಆಂಜನೇಯ ರಾಜೀನಾಮೆಗೆ ಪಟ್ಟು

ಬೆಂಗಳೂರು : ದಲಿತರಲ್ಲಿ ಒಳಮೀಸಲಾತಿ ಕಲ್ಪಿಸುವ ಸಂಬಂಧ ಎಡಗೈ ಹಾಗೂ ಬಲಗೈ ಸೇರಿದ ದಲಿತ ನಾಯಕರ ಕಾದಾಟ ತಾರಕಕ್ಕೇರಿದೆ. ಅದೀಗ ಸಮಾಜ ಕಲ್ಯಾಣ ಸಚಿವ ಆಂಜನೇಯ ಅವರ ರಾಜೀನಾಮೆಯನ್ನೂ ಡಿಮಾಂಡ್ ಮಾಡುತ್ತಿದೆ.

ಎಡಗೈ ಹಾಗೂ ಬಲಗೈ ಸೇರಿದ ದಲಿತ ನಾಯಕರ ಮುಸುಕಿನ ಗುದ್ದಾಟ ವಿಚಾರ ಕಾಂಗ್ರೆಸ್ ಹೈಕಮಾಂಡ್ ಅಂಗಳ ತಲುಪಿದ್ದು, ಬಲಗೈ ನಾಯಕರು, ಎಡಗೈ ಗುಂಪಿಗೆ ಸೇರಿದ ಸಮಾಜ ಕಲ್ಯಾಣ ಸಚಿವ ಎಚ್ ಆಂಜನೇಯ ಅವರ ರಾಜೀನಾಮೆಗೆ ಪಟ್ಟು ಹಿಡಿದಿದ್ದಾರೆ.

2011ರಲ್ಲಿ ಬಿಜೆಪಿ ಸರಕಾರದ ಅವಧಿಯಲ್ಲಿ ಒಳಮೀಸಲಾತಿ ಕಲ್ಪಿಸುವ ಸಂಬಂಧ ಅಧ್ಯಯನ ನಡೆಸಿದ್ದ ನ್ಯಾಯಮೂರ್ತಿ ಸದಾಶಿವ ಅವರು ಸರಕಾರಕ್ಕೆ ವರದಿ ಸಲ್ಲಿಸಿದ್ದರು. ಈ ವರದಿಯಲ್ಲಿನ ಅಂಶಗಳನ್ನು ಸಚಿವ ಆಂಜನೇಯ ಅವರು ತಮ್ಮ ಬಣದವರಿಗೆ ಮಾತ್ರ ಅನುಕೂಲ ಒದಗಿಸಲುಲ ಬಳಸಿಕೊಂಡಿದ್ದಾರೆ ಎಂಬುದು ಎರಡೂ ಬಣಗಳ ನಾಯಕರ ಗುದ್ದಾಟಕ್ಕೆ ಕಾರಣವಾಗಿದೆ.

ಬಿಜೆಪಿ ಸರಕಾರದಲ್ಲಿ ಸಮಾಜ ಕಲ್ಯಾಣ ಸಚಿವರಾಗಿದ್ದ ಎ ನಾರಾಯಣ ಸ್ವಾಮಿ ವರದಿಯಲ್ಲಿನ ಸಾಧಕ ಬಾಧಕಗಳ ಬಗ್ಗೆ ಅವರ ಸಮುದಾಯಕ್ಕೆ ತಿಳಿಸುವ ಮೂಲಕ ವರದಿ ಸೋರಿಕೆ ಮಾಡಿದ್ದಾರೆಂಬ ಟೀಕೆಗಳು ಕೇಳಿ ಬಂದಿವೆ. ಎಡಗೈ ಸಮುದಾಯಕ್ಕೆ ಏನೆಲ್ಲ ಅನುಕೂಲ ಮತ್ತು ಅನಾನುಕೂಲವಾಗಲಿದೆ ಎಂಬ ವಿಚಾರವನ್ನು ಸಚಿವ ಆಂಜನೇಯ ಅವರಿಗೆ ತಿಳಿದಿದ್ದು, ಇದೇ ವಿಚಾರವನ್ನು ಪ್ರಮುಖ ನಾಯಕರ ಗಮನಕ್ಕೆ ತಂದಿದ್ದಾರೆಂಬುದು ಅವರ ವಿರುದ್ಧ ಕೇಳಿ ಬರುತ್ತಿರುವ ಆರೋಪ. ಈ ಹಿನ್ನಲೆಯಲ್ಲಿ ಸಚಿವ ಆಂಜನೇಯ ಅವರ ರಾಜೀನಾಮೆ ಪಡೆಯಬೇಕು. ಮಾಜಿ ಸಚಿವ ನಾರಾಯಣ ಸ್ವಾಮಿ ವಿರುದ್ಧ ತನಿಖೆಗೆ ಆದೇಶ ನೀಡಬೇಕೆಂದು ಬಲಗೈ ನಾಯಕರು ಮುಖ್ಯಮಂತ್ರಿ ಸಿದ್ಧರಾಮಯ್ಯರನ್ನು ಒತ್ತಾಯಿಸಿದ್ದಾರೆ.