ಬಾಲಕಿಯರನ್ನು ಮಹಡಿ ಮೇಲೆ ಕರೆದೊಯ್ದು ಮಜಾಮಾಡುತ್ತ, ಕಟ್ಟಡದಿಂದ ಕೆಳದೂಡುವುದಾಗಿ ಬೆದರಿಸುತ್ತಿದ್ದ 600 ಬಾಲೆಯರ ಸರಣಿ ರೇಪಿಸ್ಟ್

ಸುನಿಲ್ ರಸ್ತೋಗಿ

ನವದೆಹಲಿ : ರಾಜಧಾನಿಯಲ್ಲಿ ಇತ್ತೀಚೆಗೆ ಬಂಧನಕ್ಕೊಳಗಾಗಿರುವ ಸರಣಿ ರೇಪಿಸ್ಟ್  ಸುನಿಲ್ ರಸ್ತೋಗಿ (38) ಕಳೆದ ಹಲವಾರು ವರ್ಷಗಳಿಂದ ಸುಮಾರು 600 ಮಂದಿ ಅಪ್ರಾಪ್ತೆಯರ  ಮೇಲೆ ಲೈಂಗಿಕ ಹಲ್ಲೆ ನಡೆಸಲು ಯತ್ನಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಯು ಮುಗ್ಧ ಬಾಲಕಿಯರನ್ನು ಕಟ್ಟಡಗಳ ಟೆರೇಸಿಗೆ ಕರೆದುಕೊಂಡು ಹೋಗಿ ತನ್ನೆದುರು ಹೊಸ ಬಟ್ಟೆ ಧರಿಸುವಂತೆ ಹೇಳುತ್ತಿದ್ದ, ಅವರು ಆತ ಹೇಳಿದಂತೆ ಕೇಳಲು ನಿರಾಕರಿಸಿದಾಗ ಕಟ್ಟಡದಿಂದ ಕೆಳಕ್ಕೆ ನೂಕಿ ಜೀವನಪರ್ಯಂತ ಅಂಗವಿಕಲರಾಗಿರುವಂತೆ ಮಾಡುತ್ತೇನೆಂದು ಬೆದರಿಸುತ್ತಿದ್ದನೆಂದು ಆತನಿಂದ 2006ರಲ್ಲಿ ಹಲ್ಲೆಗೊಳಗಾಗಿದ್ದ ಮೂವರು ಯುವತಿಯರು ಪೊಲೀಸರ ಮುಂದೆ ಬಾಯ್ಬಿಟ್ಟದ್ದಾರೆ.

ಘಟನೆ ನಡೆದಾಗ ಮೂವರೂ ಅಪ್ರಾಪ್ತೆಯರಾಗಿದ್ದರು.  ತಮ್ಮ ಕುಟುಂಬಗಳ ಹಾಗೂ ತಮ್ಮ ಜೀವಕ್ಕೆ ಅಪಾಯವಾಗಬಹುದೆಂದು ಹೆದರಿ ತಾವು ಈ ಬಗ್ಗೆ ಪೊಲೀಸರ ದೂರು ದಾಖಲಿಸಿರಲಿಲ್ಲವೆಂದೂ ಅವರು ತಿಳಿಸಿದ್ದಾರೆ.

ಆತನಿಂದ ದೌರ್ಜನ್ಯಕ್ಕೊಳಗಾದ ಇತರ ಇಬ್ಬರು ಬಾಲಕಿಯರ ಪ್ರಕಾರ ಆತ ಅವರನ್ನು ಕತ್ತಲೆ ಕೋಣೆಯೊಂದಕ್ಕೆ ಕರೆದೊಯ್ದು ಅಲ್ಲಿ ಅವರ ಮೈಮುಟ್ಟಿದಾಗ ಅವರು ಭಯದಿಂದ ಹೊರಗೋಡಿ ಬಂದು ದಾರಿಹೋಕರೊಬ್ಬರ ಸಹಾಯ ಯಾಚಿಸಿದ್ದರು.

ರಸ್ತೋಗಿ ಸಾಮಾನ್ಯವಾಗಿ ತನ್ನ ಕಾರ್ಯ ಸಾಧಿಸಲು ಹಳೆ ಕಟ್ಟಡಗಳು, ನಿರ್ಮಾಣ ಹಂತದ ಕಟ್ಟಡಗಳನ್ನು ಉಪಯೋಗಿಸುತ್ತಿದ್ದ. ಕೆಲವೊಮ್ಮೆ ವಿದ್ಯಾರ್ಥಿಗಳು ಉಳಕೊಳ್ಳುವ ಕಟ್ಟಡಗಳತ್ತ ಹೋಗಿ ಅಪರಾಹ್ನದ ಹೊತ್ತು ಹೆಚ್ಚಿನವರು ಅಲ್ಲಿರದೇ ಇರುವುದರಿಂದ ತನ್ನ ಕೆಲಸ ಮುಗಿಸಿ ಪರಾರಿಯಾಗುತ್ತಿದ್ದ.

ಈತ ಮೊದಲ ಬಾರಿ ಉತ್ತರಾಖಂಡದ ರುದ್ರಾಪುರದಲ್ಲಿ 2006ರಲ್ಲಿ ಹುಡುಗಿಯೊಬ್ಬಳಿಗೆ ಕಿರುಕುಳ ನೀಡಿದ ಆರೋಪದಲ್ಲಿ ಬಂಧಿತನಾಗಿದ್ದರೂ ಜಾಮೀನಿನ ಮೇಲೆ ಹೊರಬಂದಿದ್ದ. ದೆಹಲಿಯಲ್ಲಿ ಆತ 2004ರಿಂದ  ಹಲವು ಅಪ್ರಾಪ್ತೆಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದರೂ ಯಾರೂ ದೂರು ನೀಡಲು ಮುಂದೆ ಬಂದಿರಲಿಲ್ಲ. ಕಳೆದ ವರ್ಷ ಅಪ್ರಾಪ್ತೆಯೊಬ್ಬಳ ಮೇಲೆ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಆತನನ್ನು ಬಂಧಿಸಲಾಗಿದ್ದರೂ ಆರು ತಿಂಗಳಲ್ಲಿ  ಆತನಿಗೆ ಜಾಮೀನು ದೊರೆತಿತ್ತು. ನಂತರ ವಿಚಾರಣೆಗೆ ಕೋರ್ಟಿಗೆ ಹಾಜರಾಗದ ತಪ್ಪಿಸಿಕೊಂಡಿದ್ದ.

ಡಿಸೆಂಬರ್ 13, 2016ರಂದು ಈತನ ವಿರುದ್ಧ ದೂರು ನೀಡಲು ಒಬ್ಬಳು ಬಾಲಕಿ ಮುಂದೆ ಬಂದಿದ್ದರೆ ಈ ವರ್ಷದ ಜನವರಿ 12ರಲ್ಲಿ ಇಬ್ಬರು ದೂರು ನೀಡಿದ್ದರು. ತಮ್ಮ ತಂದೆಯ ಸ್ನೇಹಿತನೆಂದು ಹೇಳಿಕೊಂಡಿದ್ದ ಕೆಂಪು ಜಾಕೆಟ್ ಧರಿಸಿದ ವ್ಯಕ್ತಿ ತಮಗೆ ಕಿರುಕುಳ ನೀಡಿದ್ದಾಗಿ ಅವರು ಹೇಳಿದ್ದರು. ಮೂವರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದವನು ಒಬ್ಬನೇ ಎಂದು ತಿಳಿದ ಪೊಲೀಸರು ಕೊನೆಗೂ ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು ಆತ ಈಗ ನ್ಯಾಯಾಂಗ ಕಸ್ಟಡಿಯಲ್ಲಿದ್ದಾನೆ.