ಎಂಡೋಸಲ್ಫಾನ್ ವರ್ಗಾವಣೆ ವಿಳಂಬ : ಆತಂಕದಲ್ಲಿ ಜನತೆ

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ನೂರಾರು ಮಂದಿಯನ್ನು ಬಲಿತೆಗೆದುಕೊಂಡ ಹಾಗೂ ಸಾವಿರಾರು ಮಂದಿಯನ್ನು ಮಾರಕ ರೋಗಗಳಿಗೆ ತುತ್ತಾಗಲು ಕಾರಣವಾದ ಮಾರಕ ಕೀಟನಾಶಕ ಎಂಡೋಸಲ್ಫಾನ್ ನಿಷ್ಕ್ರಿಯಗೊಳಿಸುವ ಪ್ರಕ್ರಿಯೆ ವಿಳಂಬವಾಗುತ್ತಿರುವುದರಿಂದ ಜನತೆಯಲ್ಲಿ ಆತಂಕ ಸೃಷ್ಟಿಯಾಗಿದೆ. ಕಾಸರಗೋಡು ಜಿಲ್ಲೆಯ ಗೋದಾಮುಗಳಲ್ಲಿರುವ ಎಂಡೋಸಲ್ಫಾನ್ ವೈಜ್ಞಾನಿಕ ರೀತಿಯಲ್ಲಿ ನಿಷ್ಕ್ರಿಯಗೊಳಿಸಬೇಕಿದೆ.

ತೋಟಗಾರಿಕಾ ನಿಗಮದ ಗೋದಾಮುಗಳಲ್ಲಿರುವ ಎಂಡೋಸಲ್ಫಾನ್ ಹೈಡೆನ್ಸಿಟಿ ಪೆÇೀಲಿ ಎಥೆಲಿನ್ (ಎಚ್ ಡಿ ಪಿ ಇ) ಬ್ಯಾರೆಲುಗಳ 5 ವರ್ಷಗಳ ಕಾಲಾವಧಿ ಅಂತ್ಯಗೊಂಡಿದೆ. ವಿಶ್ವ ಸಂಸ್ಥೆ ಅಂಗೀಕರಿಸಿರುವ 5 ವರ್ಷ ಕಾಲಾವಧಿ ಈಗಾಗಲೇ ಮುಕ್ತಾಯಗೊಂಡಿದೆ. ಕಾಲಾವಧಿ ಮುಗಿದಿರುವ ಬ್ಯಾರೆಲುಗಳಿಂದ ಇನ್ನೊಂದು ಬ್ಯಾರೆಲುಗಳಿಗೆ ವರ್ಗಾಯಿಸುವ ಅಥವಾ ನಿಷ್ಕ್ರಿಯಗೊಳಿಸುವ ಬಗ್ಗೆ ಸರಕಾರ ಇನ್ನೂ ಗಂಭೀರವಾಗಿ ಪರಿಗಣಿಸಿಲ್ಲ. ಜಿಲ್ಲೆ ಹಾಗೂ ಮಣ್ಣಾರಕಾಡ್ ತೋಟಗಾರಿಕಾ ನಿಗಮದ ವಿವಿಧ ಗೋದಾಮುಗಳಲ್ಲಿ ದಾಸ್ತಾನಿರಿಸಿದ್ದ ಒಟ್ಟು 1,900 ಲೀಟರ್ ಎಂಡೋಸಲ್ಫಾನ್ ಕೀಟನಾಶಕವನ್ನು 2012ರಲ್ಲಿ ಎಚ್ ಡಿ ಪಿ ಇ ಬ್ಯಾರೆಲುಗಳಿಗೆ ವರ್ಗಾಯಿಸಲಾಗಿತ್ತು. ಕಬ್ಬಿಣದ ಬ್ಯಾರೆಲುಗಳು ತುಕ್ಕು ಹಿಡಿದು ಎಂಡೋಸಲ್ಫಾನ್ ಸೋರಿಕೆ ಕೂಡಾ ಆರಂಭಗೊಂಡಿತು. ಎಂಡೋ ಸೋರಿಕೆಯಿಂದ ಮತ್ತೆ ತೀವ್ರ ದುಷ್ಪರಿಣಾಮ ಬೀರಬಹುದೆಂಬ ಕಾರಣಕ್ಕೆ ಎಚ್ ಡಿ ಪಿ ಇ ಬ್ಯಾರೆಲುಗಳಿಗೆ ಹಸ್ತಾಂತರಿಸಲಾಗಿತ್ತು.

2012ರಲ್ಲಿ ಎಚ್ ಡಿ ಪಿ ಐ ಬ್ಯಾರೆಲುಗಳಿಗೆ ಎಂಡೋಸಲ್ಫಾನ್ ವರ್ಗಾಯಿಸಲಾಗಿತ್ತು. ಹಳೆ ಬ್ಯಾರೆಲುಗಳಿಂದ ಸುರಕ್ಷಿತವಾಗಿ ಎಚ್ ಡಿ ಪಿ ಇ ಬ್ಯಾರೆಲುಗಳಿಗೆ ವರ್ಗಾಯಿಸುವ ಪ್ರಕ್ರಿಯೆಗೆ `ಆಪರೇಶನ್ ಬ್ಲಾಸಮ್’ ಎಂದು ಹೆಸರು ನೀಡಲಾಗಿತ್ತು.

ಬ್ಯಾರೆಲುಗಳನ್ನು ಬದಲಾಯಿಸಿ ನೀಡುವುದಾಗಿ ಕೊಚ್ಚಿಯ ಹಿಂದೂಸ್ತಾನ್ ಇನಸೆಕ್ಟಿಸೈಡ್ ಲಿಮಿಟೆಡ್ (ಎಚ್ ಐ ಎಲ್) ಅಧಿಕಾರಿಗಳು ಭರವಸೆ ನೀಡಿದ್ದರು. ಆದರೆ ಈ ಬಗ್ಗೆ ಜಿಲ್ಲಾಡಳಿತ ಇನ್ನೂ ಎಂಡೋಸಲ್ಫಾನ್ ವರ್ಗಾಯಿಸುವುದಕ್ಕೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ.

ಎಂಡೋಸಲ್ಫಾನನ್ನು ರಾಜ್ಯದಿಂದ ಹೊರಕ್ಕೆ ಸಾಗಿಸಿ ವೈಜ್ಞಾನಿಕ ರೀತಿಯಲ್ಲಿ ನಿಷ್ಕ್ರಿಯಗೊಳಿಸುವ ಬಗ್ಗೆ ಕರೆಯಲಾಗಿದ್ದ ಇ-ಟೆಂಡರಿಗೆ ಯಾವುದೇ ಪ್ರತಿಕ್ರಿಯೆ ಲಭಿಸಿರಲಿಲ್ಲ. ಪ್ರಸ್ತುತ ಕೊಚ್ಚಿಯ ಎಚ್ ಐ ಎಲ್ ಸಂಸ್ಥೆ ಎಂಡೋ ನಿಷ್ಕ್ರಿಯಗೊಳಿಸಲು ಗುತ್ತಿಗೆ ವಹಿಸಿಕೊಂಡಿದೆ. ನಿಷ್ಕ್ರಿಯಗೊಳಿಸಿದ ಎಂಡೋಸಲ್ಫಾನನ್ನು ನಾಶಗೊಳಿಸಲು ಕೇರಳ ಎನ್ವಿಯೋ ಇನಫ್ರಾಸ್ಟ್ರಕ್ಚರ್ ಲಿಮಿಟೆಡ್ (ಕೆಇಐಎಲ್) ಆಸಕ್ತಿ ವಹಿಸಿದ್ದರೂ ಜನರ ವಿರೋಧ ಕೇಳಿ ಬರುವ ಸಾಧ್ಯತೆಯ ಹಿನ್ನೆಲೆಯಲ್ಲಿ ಕೊಚ್ಚಿ ಜಿಲ್ಲಾಡಳಿತ ಇದಕ್ಕೆ ತನ್ನ ವಿರೋಧವನ್ನು ವ್ಯಕ್ತಪಡಿಸಿತ್ತು. ಈ ಕಾರಣದಿಂದ ಕಾಲಾವಧಿ ಮುಗಿದ ಎಚ್ ಡಿ ಪಿ ಇ ಬ್ಯಾರೆಲುಗಳಲ್ಲಿ ಎಂಡೋಸಲ್ಫಾನ್ ಉಳಿದುಕೊಂಡಿದೆ.