ಪಶ್ಚಿಮ ಘಟ್ಟದ ಕಪ್ಪೆಗಳಲ್ಲಿ ಅಂಗವೈಕಲ್ಯ

ಸಂಶೋಧಕರಿಗೆ ಆತಂಕ

ಚೆನ್ನೈ : ವಿವಿಧ ಅಂಗವೈಕಲ್ಯ ಹೊಂದಿರುವ ಹಲವಾರು ಕಪ್ಪೆಗಳು ಇತ್ತೀಚೆಗೆ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಕಂಡು ಬರುತ್ತಿರುವುದು ವಿಜ್ಞಾನಿಗಳಲ್ಲಿ ಹಾಗೂ ಆರೋಗ್ಯ ತಜ್ಞರಲ್ಲಿ ಆತಂಕ ಮೂಡಿಸಿದ್ದು, ಪಶ್ಚಿಮಘಟ್ಟ ಪ್ರದೇಶದಲ್ಲಿನ ಹಾನಿಕಾರಕ ಅಂಶಗಳು ಹಾಗೂ ಕಪ್ಪೆಗಳ ಆಹಾರದಲ್ಲಿನ ವಿಷಕಾರಿ ವಸ್ತುಗಳೇ ಇದಕ್ಕೆ ಕಾರಣವೆಂದು ಶಂಕಿಸುತ್ತಿದ್ದಾರೆ.

“ಕಣ್ಣುಗಳಲ್ಲಿದ ಕಪ್ಪೆಗಳು, ಊನಗೊಂಡಿರುವ ಹಿಂಬದಿ ಕಾಲುಗಳು, ಕಾಲುಗಳೇ ಇಲ್ಲದಿರುವುದು, ಹೆಚ್ಚುವರಿ ಕಾಲುಗಳಿರವುದು ಹಾಗೂ ಸಪೂರ ಕಾಲುಗಳ ಕಪ್ಪೆಗಳು ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಕಾಣಸಿಗುತ್ತಿವೆ” ಎಂದು  ಸಲೀಂ ಅಲಿ ಸೆಂಟರ್ ಫಾರ್ ಆರ್ನಿಥಾಲಜಿ & ನ್ಯಾಚುರಲ್ ಹಿಸ್ಟರಿ ಇಲ್ಲಿನ ಇಕೋ ಟಾಕ್ಸಿಕಾಲಜಿ ವಿಭಾಗದ ಡಾ ಎಸ್ ಮುರಳೀಧರನ್ ಹೇಳುತ್ತಾರೆ.

ಕಪ್ಪೆಗಳು ತಮ್ಮ ವಾಸಸ್ಥಳದ ಬಗ್ಗೆ ಬಹಳಷ್ಟು ಸೂಕ್ಷ್ಮ ಸಂವೇದಿಯಾಗಿರುವುದರಿಂದ ಅವುಗಳಲ್ಲಿನ ಬದಲಾವಣೆಗಳನ್ನು ಅಧ್ಯಯನ ನಡೆಸುವ ಮೂಲಕ ಪಶ್ಚಿಮ ಘಟ್ಟದ ಪರಿಸರದ ಬಗ್ಗೆ ತಿಳಿಯಬಹುದು ಎಂದು ಹ್ಯದರಾಬಾದಿನ ಸೆಂಟರ್ ಫಾರ್ ಸೆಲ್ಲ್ಯುಲರ್ ಎಂಡ್ ಮಾಲಿಕ್ಯೂಲರ್ ಬಯಾಲಜಿ ಸಂಸ್ಥೆಯ ಡಾ ಕಾರ್ತಿಕೇಯನ್ ವಾಸುದೇವನ್ ವಿವರಿಸುತ್ತಾರೆ.

2000ರ ಅಸುಪಾಸಿನಲ್ಲಿ ಕೇರಳದ ಕೇಂದ್ರೀಯ ವಿಶ್ವವಿದ್ಯಾಲಯದ ಡಾ ಎಚ್ ಪಿ ಗುಣಶೇಖರ ಹಾಗೂ ಕರ್ನಾಟಕದ ಕುವೆಂಪು ವಿವಿಯ ಡಾ ಎಸ್ ವಿ ಕೃಷ್ಣಮೂರ್ತಿ ಅವರು ನಡೆಸಿದ ಅಧ್ಯಯನವೊಂದರಲ್ಲಿ ತಿಳಿದುಕೊಂಡಂತೆ ಭತ್ತದ ಗದ್ದೆಗಳಲ್ಲಿ ಕಂಡು ಬಂದಿರುವ ಹಲವಾರು ಕಪ್ಪೆಗಳಲ್ಲಿ ಅಂಗನ್ಯೂನತೆಗಳಿದ್ದವು. ಭತ್ತದ ಗದ್ದೆಗಳಲ್ಲಿ ನಿಲ್ಲುವ ನೀರಿನಲ್ಲಿ ಉಭಯಚರಗಳಾದ ಕಪ್ಪೆಗಳು ಸಂತಾನೋತ್ಪತ್ತಿ ಮಾಡುವುದರಿಂದ ಗದ್ದೆಗಳಿಗೆ ಬಳಸಲಾಗುವ ಕೀಟನಾಶಕಗಳೂ ಕಪ್ಪೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತವೆ ಎಂದು ಈ ಅಧ್ಯಯನ ಕಂಡುಕೊಂಡಿತ್ತು.

“ಕಪ್ಪೆಗಳಲ್ಲಿ ಕಂಡುಬಂದಿರುವ ಅಂಗವೈಕಲ್ಯ ನಿಜವಾದ ಸಮಸ್ಯೆಯ ಕೇವಲ ಶೇ 10ರಷ್ಟು ಚಿತ್ರಣ ನಮ್ಮ ಮುಂದಿಡುತ್ತಿದೆ. ಗದ್ದೆಗಳಲ್ಲಿ ಬಳಸಲಾಗುವ ಹಾನಿಕಾರ ಕೀಟನಾಶಕಗಳು ನೀರಿನ ಮೂಲಗಳನ್ನು ಸೇರಿ ಕಪ್ಪೆಗಳು ಮರಿ ಇಡುವ ಸ್ಥಳ ಸೇರುತ್ತವೆ” ಎಂದು ದಿಲ್ಲಿ ವಿಶ್ವವಿದ್ಯಾಲಯದ ಡಾ ಎಸ್ ಡಿ ಬಿಜು ಹೇಳುತ್ತಾರೆ.

“ಕೆಲ ದಶಕಗಳ ಹಿಂದೆ ಅಮೆರಿಕಾದಲ್ಲಿ ಡಿಡಿಟಿ ಉಪಯೋಗದಿಂದಾಗಿ ಬಾಲ್ಡ್ ಈಗಲ್ ಸಂಖ್ಯೆ ಕುಸಿತಗೊಂಡಿತು.್ತ ಅದೇ ತಪ್ಪು ನಾವು ಮಾಡಬಾರದು” ಎಂದು ತಜ್ಞರೊಬ್ಬರು ಹೇಳುತ್ತಾರೆ.