ಯು -ಟರ್ನ್ ಹೊಡೆದಿಲ್ಲ ಎಂದ ಕುಮಾರಸ್ವಾಮಿ

ಕುಮಾರಸ್ವಾಮಿ

`ದೀಪಕ್ ಸಾವಿಗೆ ಬಿಜೆಪಿ ಕಾರ್ಪೋರೇಟರ್ ಕಾರಣ’

 

ಮಡಿಕೇರಿ : ಕಾಟಿಪಳ್ಳದಲ್ಲಿ ಇತ್ತೀಚೆಗೆ ನಡೆದ ದೀಪಕ್ ರಾವ್ ಹತ್ಯೆಯ ಹಿಂದೆ ಬಿಜೆಪಿ ಕಾರ್ಪೊರೇಟರ್ ಒಬ್ಬರ ಕೈವಾಡವಿದೆವಿದೆಯೆಂದು ಆರೋಪಿಸಿ ತಾವು ನೀಡಿರುವ ಹೇಳಿಕೆಯಿಂದ ಹಿಂದೆ ಸರಿದಿಲ್ಲ ಎಂದು  ಹೇಳಿರುವ ಜೆಡಿ(ಎಸ್) ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ, ತಾನು ಈಗಲೂ ಅದೇ ಮಾತನ್ನು ಹೇಳುತ್ತಿದ್ದೇನೆ ಎಂದಿದ್ದಾರೆ.

ಮಡಿಕೇರಿಯಲ್ಲಿ ಸುದ್ದಿಗಾರರೊಡನೆ ಮಾತನಾಡಿದ ಕುಮಾರಸ್ವಾಮಿ ತಾನು ಯು-ಟರ್ನ್ ಹೊಡೆದಿದ್ದೇನೆಂದು ಮಾಧ್ಯಮಗಳಲ್ಲಿ ಬಂದ ವರದಿ ಸುಳ್ಳು ಎಂದಿದ್ದಾರಲ್ಲದೆ ತಮಗೆ ದೊರೆತ ಮಾಹಿತಿಯನ್ವಯ  ಹೇಳಿಕೆ ನೀಡಿದ್ದಾಗಿಯೂ ಹೇಳಿದ್ದಾರೆ. ತಮ್ಮ ಹಿಂದಿನ ಮಾತನ್ನೇ ತಾವು ಪುನರುಚ್ಛರಿಸುವುದಾಗಿ ಹೇಳಿದ ಕುಮಾರಸ್ವಾಮಿ ತಾವು ಯಾರದ್ದೇ ಹೆಸರು ಎತ್ತಿಲ್ಲದೇ ಇದ್ದರೂ ಬಿಜೆಪಿ ಕಾರ್ಪೊರೇಟರ್ ಒಬ್ಬರು ಮಾಧ್ಯಮದ ಮುಂದೆ ಮಾತನಾಡಿ ಧರ್ಮಸ್ಥಳ, ನಂಜನಗೂಡಿನಲ್ಲಿ ಆಣೆ ಪ್ರಮಾಣ ಮಾಡುವ ಬಗ್ಗೆ ಮಾತನಾಡಿರುವುದು ಆಶ್ಚರ್ಯ ಹುಟ್ಟಿಸಿದೆ ಎಂದಿದ್ದಾರೆ.

ಕರಾವಳಿ ಪ್ರದೇಶದಲ್ಲಿ ಶಾಂತಿ ನೆಲೆಸಬೇಕೆಂಬುದೇ ತಮ್ಮ ಆಶಯ ಎಂದು ಕುಮಾರಸ್ವಾಮಿ ಹೇಳಿದ್ದಾರಲ್ಲದೆ ಘಟನೆಯ ಬಗ್ಗೆ ಸೂಕ್ತ ತನಿಖೆಗೂ ಆಗ್ರಹಿಸಿದ್ದಾರೆ.


ಎಚ್ಡೀಕೆ ತಮ್ಮ ಹೇಳಿಕೆಗೆ

ಈಗಲೂ ಬದ್ಧ : ಜೆಡಿಎಸ್

ನಮ್ಮ ಪ್ರತಿನಿಧಿ ವರದಿ

ಮಂಗಳೂರು : “ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ನೀಡಿದ್ದ ಹೇಳಿಕೆಗೆ ಅವರು ಈಗಲೂ ಬದ್ಧರಿದ್ದಾರೆ. ಅವರು ಯೂಟರ್ನ್ ಹೊಡೆದಿಲ್ಲ. ಸ್ಪಷ್ಟ ಮಾಹಿತಿ ಇದ್ದೇ ಅವರು ಹೇಳಿಕೆ ನೀಡಿದ್ದಾರೆ” ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಮಹಮ್ಮದ್ ಕುಂಞÂ ಸಮರ್ಥಿಸಿಕೊಂಡಿದ್ದಾರೆ.

`ದೀಪಕ್ ರಾವ್ ಕೊಲೆ ಪ್ರಕರಣದಲ್ಲಿ ಬಿಜೆಪಿ ಕಾರ್ಪೋರೇಟರ್ ಕೈವಾಡವಿದೆ’ ಎನ್ನುವ ಹೇಳಿಕೆ ನೀಡಿದ್ದ ಕುಮಾರ ಸ್ವಾಮಿ ಬಳಿಕ ಯೂ-ಟರ್ನ್ ಹೊಡೆದಿದ್ದಾರೆ ಎನ್ನುವ ವಿಚಾರಕ್ಕೆ ಸಂಬಂಧಿಸಿ ಮಹಮ್ಮದ್ ಕುಂಞÂ ಅವರ ಮಾಧ್ಯಮಗಳ ಮುಂದೆ ಈ ಹೇಳಿಕೆ ನೀಡಿದರು.

“ದೀಪಕ್ ಕೊಲೆ ಪ್ರಕರಣದ ಆರೋಪಿಗಳ ಹಿಂದಿರುವವರ ಬಗ್ಗೆ ತನಿಖೆ ನಡೆಸಿ ಬಹಿರಂಗಪಡಿಸಬೇಕು, ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ವಿರೋಧ ಪಕ್ಷದ ಮುಖಂಡರಾದ ಕುಮಾರಸ್ವಾಮಿ ಜವಾಬ್ದಾರಿಯುತ ಹೇಳಿಕೆಯನ್ನೇ ನೀಡಿದ್ದಾರೆ. ಆದರೆ ಬಿಜೆಪಿಯವರು ಕುಮಾರ ಸ್ವಾಮಿ ಹೇಳಿಕೆ ನೀಡಿರುವುದೇ ದೊಡ್ಡ ತಪ್ಪುಎನ್ನುವಂತೆ ಬಿಂಬಿಸುತ್ತಿದ್ದಾರೆ” ಎಂದರು.

`ಎಚ್ಡೀಕೆ ವಿರುದ್ಧ

ಮೊಕದ್ದಮೆ’

ನಮ್ಮ ಪ್ರತಿನಿಧಿ ವರದಿ

ಮಂಗಳೂರು : “ಕಾಟಿಪಳ್ಳದ ದೀಪಕ್ ರಾವ್ ಹತ್ಯೆಯಾದ ಬಳಿಕ ಕಾಂಗ್ರೆಸ್ ಮುಖಂಡರು ಈ ಕೃತ್ಯದ ಹಿಂದೆ ಬಿಜೆಪಿ ಕೈವಾಡವಿದೆ ಎಂದು ಆರೋಪಿಸುತ್ತಿದ್ದಾರೆ. ಇದೀಗ ಜೆಡಿಎಸ್ ರಾಜ್ಯಾದ್ಯಕ್ಷ ಎಚ್ ಡಿ ಕುಮಾರಸ್ವಾಮಿ ಆರೋಪಿಸುತ್ತಿದ್ದಾರೆ. ಯಾವುದೇ ದಾಖಲೆಗಳಿಲ್ಲದೇ ವಿನಾಕಾರಣ ಗಂಭೀರ ಆರೋಪ ಮಾಡುತ್ತಿರುವ ಹಿನ್ನೆಲೆಯಲ್ಲಿ ಇದೀಗ ಮಂಗಳೂರು ನಗರ ಉತ್ತರ ಮಂಡಲದ ಅಧ್ಯಕ್ಷನಾಗಿ ಕುಮಾರಸ್ವಾಮಿ ಮೇಲೆ ಒಂದು ಕೋಟಿ ರೂಪಾಯಿಗಳ ಮಾನನಷ್ಟ ಮೊಕದ್ದಮೆ ಮಂಗಳೂರು ನ್ಯಾಯಾಲಯದಲ್ಲಿ ದಾಖಲಿಸಿದ್ದೇನೆ” ಎಂದು ಸುರತ್ಕಲ್ ಬಿಜೆಪಿ ಮುಖಂಡ ವೈ ಭರತ್ ಶೆಟ್ಟಿ ತಿಳಿಸಿದ್ದಾರೆ.

 

 

LEAVE A REPLY