ಐವರು ದಲಿತ ವಿದ್ಯಾರ್ಥಿಗಳಿಗೆ ಶಿಕ್ಷೆ

ಮಾನನಷ್ಟ ಮೊಕದ್ದಮೆ

ಹೈದರಾಬಾದ್ : ಮಾನನಷ್ಟ ಮೊಕದ್ದಮೆಯೊಂದಕ್ಕೆ ಸಂಬಂಧಿಸಿ ಇಲ್ಲಿನ ಇಂಗ್ಲಿಷ್ ಆ್ಯಂಡ್ ಫಾರಿನ್ ಲ್ಯಾಂಗ್ವೇಜ್ ಯೂನಿವರ್ಸಿಟಿಯ ಐವರು ದಲಿತ ವಿದ್ಯಾರ್ಥಿಗಳಿಗೆ ಸ್ಥಳೀಯ ಕೋರ್ಟ್ ಆರು ತಿಂಗಳು ಶಿಕ್ಷೆ ವಿಧಿಸಿದೆ.

ನಾಲ್ಕನೇ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಪ್ರಕರಣದ ಐವರು ವಿದ್ಯಾರ್ಥಿಗಳಾದ ಮುನವಂತ್ ಶ್ರೀರಾಮಲು, ಬತ್ರನ್ ರವಿಚಂದ್ರ, ಮೋಹನ್ ಧರವಥ್, ಉಪೇಂದ್ರ ಮತ್ತು ಸತೀಶಗೆ ಜಾಮೀನು ನೀಡಿ, ಮೇಲ್ಮನವಿ ಸಲ್ಲಿಸಲು ಒಂದು ತಿಂಗಳ ಕಾಲಾವಕಾಶ ನೀಡಿದೆ. ಇವರು ಒಂದು ವಾರದೊಳಗೆ ತಲಾ 5,000 ರೂ ಶ್ಯೂರಿಟಿ ಇಡುವಂತೆ ತೀರ್ಪಿನಲ್ಲಿ ತಿಳಿಸಲಾಗಿದೆ.

ಜರ್ಮನಿ ಅಧ್ಯಯನ ವಿಭಾಗದ ಮುಖ್ಯಸ್ಥ ಮತ್ತು ಡೀನ್ ಮೀನಾಕ್ಷಿ ರೆಡ್ಡಿ 2013 ಮಾರ್ಚಿನಲ್ಲಿ ಐವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಈಕೆ ದಲಿತರ ವಿರುದ್ಧ ಜಾತೀಯ ಹೆಸರಲ್ಲಿ ಟೀಕೆಟಿಪ್ಪಣಿ ಮಾಡಿದ್ದಾರೆಂದು ಆರೋಪಿಗಳು ಸಾಮಾಜಿಕ ತಾಣಗಳಲ್ಲಿ ಮತ್ತು ಬ್ಲಾಗುಗಳಲ್ಲಿ ವೀಡಿಯೋ ಮತ್ತು ಸಂದೇಶಗಳನ್ನು ಪ್ರಸಾರಿಸಿದ್ದರು. ತಾನು ಫೇಲಾಗಲು ರೆಡ್ಡಿ ಕಾರಣ ಎಂದು ಶ್ರೀರಾಮುಲು ಆರೋಪಿಸಿದ್ದ.

“ರೆಡ್ಡಿ ಹಿಟ್ಲರನ ಪುತ್ರಿ” ಎಂದು ವಿದ್ಯಾರ್ಥಿಗಳು ಈಕೆಯನ್ನು ಕರೆದಿರುವುದಲ್ಲದೆ, “ಈ ವರ್ತನೆ ಬದಲಿಸು, ಇಲ್ಲವಾದರೆ ತಕ್ಕ ಪಾಠ ಕಲಿಯಲು ಸಿದ್ಧಳಾಗು” ಎಂದು ಬೆದರಿಕೆಯೊಡ್ಡಿದ್ದ ವೀಡಿಯೋ ಪ್ರಸಾರಿಸಿದ್ದರು.

“ಯೂನಿವರ್ಸಿಟಿಯ ಐವರು ವಿದ್ಯಾರ್ಥಿಗಳ ಕಿರುಕುಳ ಸಾಕಾಗಿ ಹೋಗಿದೆ. ಶ್ರೀರಾಮುಲು ಮಾತ್ರ ನನ್ನ ವಿದ್ಯಾರ್ಥಿಯಾಗಿದ್ದು, ಉಳಿದವರು ನನ್ನ ವಿರುದ್ಧ ಆರೋಪ ಹೊರಿಸಲು ಆತನ ಗ್ಯಾಂಗ್ ಸೇರಿಕೊಂಡವರು” ಎಂದಿದ್ದಾರೆ ರೆಡ್ಡಿ.