ಕಾರಿಗೆ ಡಿಕ್ಕಿ, ಕಡವೆ ಮೃತ

ನಮ್ಮ ಪ್ರತಿನಿಧಿ ವರದಿ

ಉಪ್ಪಿನಂಗಡಿ : ಕಡಬ ಠಾಣಾ ವ್ಯಾಪ್ತಿಯ ಕುಂತೂರು ಗ್ರಾಮದ ಪದವು ಎಂಬಲ್ಲಿ ಚಲಿಸುತ್ತಿದ್ದ ಕಾರಿಗೆ ಸಿಲುಕಿ ಕಡವೆ ಮೃತಪಟ್ಟ ಘಟನೆ ಭಾನುವಾರ ನಡೆದಿದೆ.

ಮಂಗಳೂರಿನಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ ಯಾತ್ರಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಟೂರಿಸ್ಟ್ ಕಾರು ಬಲ್ಯ ಮತ್ತು ಪದವು ನಡುವೆ ಸಾಗುತ್ತಿದ್ದ ವೇಳೆ ರಸ್ತೆಯ ಪಕ್ಕದ ಪೆÇದೆಯಿಂದ ರಸ್ತೆಗೆ ಜಿಗಿದ ಹೆಣ್ಣು ಕಡವೆ ಕಾರಿಗೆ ಅಪ್ಪಳಿಸಿ ಸ್ಥಳದಲ್ಲೇ ಮೃತಪಟ್ಟಿದೆ. ಕಡವೆ ಅಪ್ಪಳಿಸಿದ ರಭಸಕ್ಕೆ ಕಾರಿನ ಒಂದು ಭಾಗ ನುಜ್ಜುಗುಜ್ಜಾಗಿದೆ.

ಮಾಹಿತಿ ತಿಳಿದ ಪಂಜ ವಲಯ ಅರಣ್ಯಾಧಿಕಾರಿಗಳು ಕಡವೆಯ ಮೃತದೇಹವನ್ನು ಕಾನೂನು ಪ್ರಕಾರ ವಿಲೇವಾರಿ ಮಾಡಲು ಕ್ರಮಕೈಗೊಂಡರು. ಘಟನೆಯಲ್ಲಿ ಹಾನಿಗೀಡಾಗಿರುವ ಕಾರನ್ನು ಅರಣ್ಯ ಇಲಾಖಾಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ. ಆಕಸ್ಮಿಕವಾಗಿ ಕಡವೆ ಕಾರಿಗೆ ಸಿಲುಕಿ ಮೃತಪಟ್ಟಿರುವ ಕಾರಣದಿಂದಾಗಿ ಕಾರು ಚಾಲಕನ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಅರಣ್ಯ ಇಲಾಖಾ ಮೂಲಗಳು ತಿಳಿಸಿವೆ. ಈ ಭಾಗದಲ್ಲಿ ಕಾಡು ಪ್ರಾಣಿಗಳು ವಾಹನಕ್ಕೆ ಅಡ್ಡವಾಗಿ ಸಿಗುತ್ತಿರುವ ಪ್ರಕರಣಗಳು ಸಾಕಷ್ಟು ಬಾರಿ ಸಂಭವಿಸಿದೆ. ಇಲ್ಲಿ ಕಾಡು ಪ್ರಾಣಿಗಳ ಪ್ರಾಣ ರಕ್ಷಣೆಗಾಗಿ ಸಂಚಾರದ ವೇಗ ನಿಯಂತ್ರಿಸುವ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.