ವರದಕ್ಷಿಣೆ ಪ್ರಕರಣಗಳಲ್ಲಿ ಶೋಷಣೆಗೊಳಗಾದ ಪುರುಷರ ಹಕ್ಕುಗಳಿಗಾಗಿ ಹೋರಾಡುತ್ತಿರುವ ದೀಪಿಕಾ ಭಾರದ್ವಾಜ್

Deepika Bharadwaj

`ನನ್ನ ಹೋರಾಟ ಮಹಿಳೆಯರ ವಿರುದ್ಧವಲ್ಲ, ಅನ್ಯಾಯದ ವಿರುದ್ಧ’ ಎನ್ನುತ್ತಾರೆ ಈ ದಿಟ್ಟ ಯುವತಿ

 

ಮಹಿಳೆಯರ ವಿರುದ್ಧದ ಅಪರಾಧ ಪ್ರಕರಣಗಳು ಹೆಚ್ಚಿರುವ ದೇಶವಾದ ಭಾರತದಲ್ಲಿ ಸಾಮಾಜಿಕ ಕಾರ್ಯಕರ್ತೆಯೂ, ಸಾಕ್ಷ್ಯ ಚಿತ್ರ ತಯಾರಕಿಯೂ ಆಗಿರುವ ದೀಪಿಕಾ ನಾರಾಯಣ್ ಭಾರದ್ವಾಜ್ ತನ್ನ ವಿಭಿನ್ನ ನಿಲುವಿನಿಂದ ನಮ್ಮ ಗಮನ ಸೆಳೆಯುತ್ತಾರೆ. ಶೋಷಣೆ ಹಾಗೂ ದೌರ್ಜನ್ಯಕ್ಕೊಳಗಾದ ಪುರುಷರ ದನಿಯಾಗಿ ಆಕೆ ಹೊರಹೊಮ್ಮಿರುವುದು ಹಲವರ ಹುಬ್ಬೇರಿಸಿದೆ ಕೂಡ.

ಪ್ರತಿ 15 ನಿಮಿಷಗಳಿಗೆ ಒಂದು ಅತ್ಯಾಚಾರ ಪ್ರಕರಣ ನಡೆಯುವ, ಪ್ರತಿ ಐದು ನಿಮಿಷಕ್ಕೊಂದು ಕೌಟುಂಬಿಕ ಹಿಂಸೆ ಪ್ರಕರಣ ನಡೆಯುವ, ಪ್ರತಿ 69 ನಿಮಿಷಗಳಿಗೊಂದು ವಧು ವರದಕ್ಷಿಣೆಗೆ ದಾಹಕ್ಕೆ ಬಲಿಯಾಗುವ ಹಾಗೂ ಸಾವಿರಾರು ಹೆಣ್ಣು ಭ್ರೂಣಗಳು ಹತ್ಯೆ ನಡೆಯುವ ದೇಶವೊಂದರಲ್ಲಿ  ತಾನು ಶೋಷಿತ ಪುರುಷರ ಪರವಾಗಿ ನಿಂತಿರುವುದು ಹಲವರಿಗೆ ಸಹಿಸಲಾಗದು ಎಂದು ತಿಳಿದಿರುವ 31 ವರ್ಷದ ದೀಪಿಕಾ  ಮಾತ್ರ ತನ್ನ ನಿಲುವಿಗೆ ಗಟ್ಟಿಯಾಗಿ ಅಂಟಿಕೊಂಡಿದ್ದಾರೆ. “ಪುರುಷರು ಕೂಡ ತಾರತಮ್ಯ ಎದುರಿಸುವುದಿಲ್ಲವೇನು ? ಅವರು ಕೂಡ ಶೋಷಣೆಗೊಳಗಾಗುವುದಿಲ್ಲವೇನು?” ಎಂಬ ಪ್ರಶ್ನೆಗಳನ್ನು ಅವರು ಎತ್ತುತ್ತಾರೆ.

“ಮಹಿಳೆಯರಿಗಾಗಿ ಕೇವಲ ಮಹಿಳೆಯರೇ ಹೋರಾಡಬೇಕಿಲ್ಲವೆಂದಿರುವಾಗ ಪುರುಷರಿಗಾಗಿ ಹೋರಾಡಲು ಪುರುಷರೇ ಆಗಬೇಕಿಲ್ಲ. ನಾನು ಮಹಿಳೆಯರ ವಿರುದ್ಧದ ದೌರ್ಜನ್ಯದ ಬಗ್ಗೆ ಮಾತನಾಡುವುದಿಲ್ಲ. ಅದಕ್ಕಾಗಿ ಲಕ್ಷಾಂತರ ಜನರಿದ್ದಾರೆ” ಎನ್ನುತ್ತಾರೆ ದೀಪಿಕಾ.

ಆಕೆ ಈಗ ಹೋರಾಡುತ್ತಿರುವುದು  ಐಪಿಸಿಯ ಸೆಕ್ಷನ್ 498ಎ ಇದರ ದುರುಪಯೋಗದ ವಿರುದ್ಧ. ಇದೊಂದು ಕಠಿಣ ವರದಕ್ಷಿಣೆ ವಿರೋಧಿ ಕಾಯಿದೆಯಾಗಿದೆ. ದೇಶದಾದ್ಯಂತ ಸುತ್ತುವ ದೀಪಿಕಾ ತಮ್ಮ ಸಾಕ್ಷ್ಯ ಚಿತ್ರ `ಮಾರ್ಟರ್ಸ್ ಆಫ್ ಮ್ಯಾರೇಜ್’ (ಮದುವೆಯ ಹುತಾತ್ಮರು) ಪ್ರದರ್ಶಿಸುತ್ತಾರೆ ಹಾಗೂ ಈ ಕಾಯಿದೆಯನ್ನು ಪುನರ್ ಪರಿಶೀಲಿಸಲು ಒತ್ತಾಯಿಸುತ್ತಾರೆ.

“ಒಂದು ಉತ್ತಮ ಉದ್ದೇಶದಿಂದ ಈ ಕಾಯ್ದೆಯನ್ನು ರಚಿಸಲಾಗಿದೆ” ಎಂದು ಒಪ್ಪಿಕೊಳ್ಳುವ ದೀಪಿಕಾ ಅದೇ ಸಮಯ “ಜೀವಗಳನ್ನು ಉಳಿಸಲು ಈ ಕಾಯ್ದೆ ಜಾರಿಗೊಳಿಸಲಾಗಿದ್ದರೆ ಅದು ಹಲವಾರು ಜೀವಗಳನ್ನು ಬಲಿ ಪಡೆದಿದೆ” ಎನ್ನುತ್ತಾರೆ.

ವಿಚ್ಛೇದನ ಪ್ರಕರಣಗಳು ಹೆಚ್ಚುತ್ತಿರುವಂತೆಯೇ ತಮ್ಮ ವಿವಾಹದಿಂದ ಅಸಂತುಷ್ಟರಾದ ಮಹಿಳೆಯರು ತಮ್ಮ ವಕೀಲರುಗಳ ಸಹಾಯದಿಂದ ಈ ಕಾನೂನನ್ನು ದುರುಪಯೋಗಪಡಿಸಿ ತಮ್ಮ ಪತಿ ಹಾಗೂ ಅವರ ಮನೆಯವರಿಗೆ ನಿರಂತರ ಕಿರುಕುಳ ನೀಡುತ್ತಾರೆ ಎನ್ನುತ್ತಾರೆ ದೀಪಿಕಾ.

ಸುಪ್ರೀಂ ಕೋರ್ಟ್ ಕೂಡ ಈ ಕಾಯ್ದೆಯ ದುರುಪಯೋಗದ ವಿಚಾರ ಪ್ರಸ್ತಾಪಿಸಿದ್ದು, ನ್ಯಾಯಾಧೀಶರೊಬ್ಬರು ಅದನ್ನು `ಕಾನೂನಾತ್ಮಕ ಉಗ್ರವಾದ’ ಎಂದೂ ಬಣ್ಣಿಸಿದ್ದಾರೆ. “ಗುರಾಣಿಯಾಗಬೇಕಾಗಿದ್ದ ಈ ಕಾಯಿದೆ ಕೊಲೆಗಾರನ ಕೈಗೆ ಅಸ್ತ್ರ ಒದಗಿಸಿದಂತಾಗಿದೆ” ಎಂದು ರಾಷ್ಟ್ರೀಯ ಮಹಿಳಾ ಆಯೋಗವೂ ಈ ಕಾನೂನಿನ ದುರುಪಯೋಗದ ಕುರಿತು ತನ್ನ ಕಳವಳ ವ್ಯಕ್ತಪಡಿಸಿತ್ತು.

ಈ ಕಾಯ್ದೆಯನ್ವಯ ದೂರು ದಾಖಲಿಸಲ್ಪಟ್ಟಾಗ ಅದರಲ್ಲಿ ಹೆಸರಿಸಲ್ಪಟ್ಟವರನ್ನು ಕೂಡಲೇ ಬಂಧಿಸಬಹುದಾದುದರಿಂದ 1998ರಿಂದ 2015ರ ತನಕ 6.5 ಲಕ್ಷ ಮಹಿಳೆಯರು ಹಾಗೂ 7,700 ಮಕ್ಕಳು ಬಂಧನಕ್ಕೊಳಗಾಗಿದ್ದಾರೆ. ಈ ಬೆಳವಣಿಗೆಯಿಂದ ಆತಂಕಿತವಾದ ಸುಪ್ರೀಂ ಕೋರ್ಟ್ ಜುಲೈ 2014ರಲ್ಲಿ ವರದಕ್ಷಿಣೆ ದೂರಿನನ್ವಯ ಬಂಧನ ಪ್ರಕ್ರಿಯೆ ನಡೆಸುವಾಗ ಒಂಬತ್ತು ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಲು ಹೇಳಿತ್ತು.

“2011ರಲ್ಲಿ ನನ್ನ ಸೋದರ ಸಂಬಂಧಿಯೊಬ್ಬನ ವಿವಾಹ ಕೇವಲ ಮೂರು ತಿಂಗಳಲ್ಲಿ ಮುರಿದು ಬಿದ್ದಾಗ ಆತನ ಪತ್ನಿ ತನ್ನ ಪತಿ ಹಾಗೂ ಆತನ ಇಡೀ ಕುಟುಂಬದ ವಿರುದ್ಧ ದೂರು ದಾಖಲಿಸಿ ಆಕೆಗೆ ಹಿಂಸೆ ನೀಡಿದ ಆರೋಪ ಹೊರಿಸಿದ್ದಳು. ನನ್ನನ್ನೂ ಆರೋಪಿಯೆಂದು ಹೆಸರಿಸಲಾಗಿತ್ತು. ನನ್ನ ಕುಟುಂಬ ದೊಡ್ಡ ಮೊತ್ತವನ್ನು ನೀಡಿ  ಆಕೆಯನ್ನು ಸಮಾಧಾನಪಡಿಸಿದರೂ ನನಗೆ ಸಮಾಧಾನವಾಗಿರಲಿಲ್ಲ” ಎಂದು ವಿವರಿಸುತ್ತಾರೆ ದೀಪಿಕಾ. ಈ ಘಟನೆಯ ನಂತರ ಆಕೆ ತನ್ನ ಈ ಅಪರೂಪದ ಕೈಂಕರ್ಯಕ್ಕೆ ಕೈಹಾಕಿದ್ದರು. ಬ್ಲ್ಯಾಕ್ಮೇಲ್ ಹಾಗೂ ಸುಲಿಗೆಗೆ ಈ ಕಾನೂನು ಒಂದು ಅಸ್ತ್ರವಾಗಿದೆ” ಎಂದು ಅವರು ವಿಷಾದ ವ್ಯಕ್ತಪಡಿಸುತ್ತಾರೆ.

ತನ್ನ ಈ ಕಾರ್ಯದಲ್ಲಿ ಆಕೆಗೆ ಪುರುಷರ ಹಕ್ಕಿಗಾಗಿ ಹೋರಾಡುವ ಸೇವ್ ಇಂಡಿಯನ್ ಫ್ಯಾಮಿಲಿ ಎಂಬ ಎನ್ಜಿಒ ಕೂಡ ಪರಿಚಯವಾಗಿತ್ತು.

ದೀಪಿಕಾ ಅವರಿಗೆ  ಸಾಕ್ಷ್ಯ ಚಿತ್ರ ತಯಾರಿಸಲು ನಾಲ್ಕು ವರ್ಷ ಹಿಡಿದಿತ್ತು.  ವರದಕ್ಷಿಣೆ ವಿರೋಧಿ ಕಾಯ್ದೆಯನ್ವಯ ಸುಳ್ಳು ಆರೋಪ ಹೊರಿಸಲ್ಪಟ್ಟ ಹಲವು ಪುರುಷರು ತಮ್ಮ ಕಥೆಯನ್ನು ಈ ಸಾಕ್ಷ್ಯಚಿತ್ರದಲ್ಲಿ ವಿವರಿಸಿದ್ದಾರೆ. ಹಲವಾರು ವರ್ಷ ಜೈಲಲ್ಲಿ ಕಳೆದು ನಂತರ ದೋಷಮುಕ್ತಗೊಂಡವರೂ ಅವರಲ್ಲಿದ್ದಾರೆ. `ಪತ್ನಿ ಪೀಡಕರು’ ಎಂಬ ಹಣೆಪಟ್ಟಿ ಹೊತ್ತು ಜೀವಿಸಲು ಅಸಾಧ್ಯವಾಗಿ ಆತ್ಮಹತ್ಯೆಗೆ ಶರಣಾದ ಪುರುಷರ ಹೆತ್ತವರನ್ನೂ ಕಂಡು ತಮ್ಮ ಸಾಕ್ಷ್ಯಚಿತ್ರಕ್ಕಾಗಿ ದೀಪಾ ಮಾತನಾಡಿಸಿದ್ದಾರೆ. ತಾನು ನೇಣಿಗೆ ಶರಣಾಗುವ ಮುನ್ನ ಪತಿಯೊಬ್ಬ ಬಿಟ್ಟು ಹೋದ ಕರುಣಾಜನಕ ವೀಡಿಯೋ ಸಂದೇಶ ಹಾಗೂ ಯುವ ಬ್ಯಾಂಕರ್ ಒಬ್ಬ `ಏಕಪಕ್ಷೀಯ ಕಾನೂನನ್ನು’ ಪ್ರಶ್ನಿಸಿ ಬಿಟ್ಟು ಹೋದ ಸುಸೈಟ್ ನೋಟ್ ಬಗ್ಗೆಯೂ ಅವರ ಸಾಕ್ಷ್ಯಚಿತ್ರ ಹೇಳುತ್ತದೆ.

“ದೆಹಲಿಯಲ್ಲಿರುವ ಮಹಿಳಾ ಸಹಾಯವಾಣಿಗೆ ಬರುವ ಶೇ 24ರಷ್ಟು ಕರೆಗಳು ಪುರುಷರಿಂದ ಎಂದು ನನಗೆ ತಿಳಿದುಬಂದಿದೆ” ಎನ್ನುತ್ತಾರೆ ದೀಪಿಕಾ.

ತಮ್ಮ ಸಾಕ್ಷ್ಯಚಿತ್ರವನ್ನು ನ್ಯಾಯಾಧೀಶರುಗಳಿಗೆ, ಪೊಲೀಸ್ ಅಧಿಕಾರಿಗಳಿಗೆ ಹಾಗೂ ಸಾರ್ವಜನಿಕರಿಗಾಗಿ ಪ್ರದರ್ಶಿಸಿರುವ ದೀಪಾ, ಈಗ ಅದನ್ನು ಸಂಸದರಿಗಾಗಿ ಪ್ರದರ್ಶಿಸಲು ಯೋಚಿಸುತ್ತಿದ್ದಾರೆ. “ಈ ವಿಚಾರವನ್ನು ಸಂಸತ್ತಿಗೆ ಒಯ್ದು ಕಾನೂನಿನಲ್ಲಿ ಬದಲಾವಣೆ ತರಬೇಕೆಂಬುದು ನನ್ನ ಉದ್ದೇಶ” ಎಂದು ದೀಪಿಕಾ ದೃಢಚಿತ್ತದಿಂದ ಹೇಳುತ್ತಾರೆ.

ಇದೀಗ ತಮ್ಮ ಗಮನವನ್ನು ದೀಪಿಕಾ ಅವರು ಸುಳ್ಳು ಅತ್ಯಾಚಾರ ಪ್ರಕರಣಗಳತ್ತವೂ ಗಮನ ಹರಿಸಿದ್ದಾರೆ.

ತಮ್ಮ ನೇರ ಅಭಿಪ್ರಾಯಗಳನ್ನು ದೀಪಿಕಾ ಸಾಮಾಜಿಕ ಜಾಲತಾಣಗಳ ಮೂಲಕವೂ  ವ್ಯಕ್ತಪಡಿಸುತ್ತಿದ್ದಾರೆ. ಇದೇ ಕಾರಣಕ್ಕೆ ಆಕೆ ಹಲವಾರು ಮಹಿಳಾವಾದಿಗಳಿಂದ, ಮಹಿಳಾ ಹಕ್ಕು ಕಾರ್ಯಕರ್ತರಿಂದ ಅವಹೇಳನಕ್ಕೂ ಒಳಗಾಗಿದ್ದಾರೆ.

ಆದರೆ ದೀಪಿಕಾ ಯಾವುದರಿಂದಲೂ ವಿಚಲಿತರಾಗಿಲ್ಲ. “ಪುರುಷರಿಗಾಗಿ ನಾನು ಹೋರಾಡುವುದು ರಾಜಕೀಯವಾಗಿ ಸರಿಬಾರದು ಎಂದು ಕೆಲ ಮಹಿಳಾವಾದಿಗಳು ಹೇಳಿದ್ದಾರೆ. ಆದರೆ ನಾನು ಎಲ್ಲರಿಗೂ ನ್ಯಾಯ ಬಯಸುವವಳು. ನಾನು ಮಹಿಳೆಯರ ವಿರುದ್ಧ ಹೋರಾಡುತ್ತಿಲ್ಲ, ಅನ್ಯಾಯದ ವಿರುದ್ಧ ಹೋರಾಡುತಿದ್ದೇನೆ” ಎನ್ನುತ್ತಾರೆ ದೀಪಿಕಾ.