ದೀಪಕ್ ಹತ್ಯೆ ಆರೋಪಿ ಗಾಯಾಳು ಚೇತರಿಕೆ, ಸದ್ಯವೇ ಅವರ ತನಿಖೆ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಸಂಘಪರಿವಾರದ ಕಾರ್ಯಕರ್ತ ದೀಪಕ್ ರಾವ್ ಹತ್ಯೆ ಪ್ರಕರಣದ ಆರೋಪಿಗಳ ಬಂಧನದ ಸಂದರ್ಭದಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಇಬ್ಬರು ಆರೋಪಿಗಳಾದ ಪಿಂಕಿ ನವಾಝ್ ಮತ್ತು ರಿಜ್ವಾನ್ ಚೇತರಿಸಿಕೊಂಡಿದ್ದು ಅವರನ್ನು ಆಸ್ಪತ್ರೆಯಿಂದ ವಶಕ್ಕೆ ಪಡೆದುಕೊಂಡು ತನಿಖೆ ಆರಂಭಿಸಲಿದ್ದಾರೆ.

ಜನವರಿ 3ರಂದು ಮಧ್ಯಾಹ್ನ ದೀಪಕ್ ರಾವ್ ಅವರನ್ನು ನಾಲ್ವರು ದುಷ್ಕರ್ಮಿಗಳು ಹತ್ಯೆ ಮಾಡಿದ್ದರು. ಬಳಿಕ ಪರಾರಿಯಾಗುತ್ತಿದ್ದ ಕಾರನ್ನು ಬೆನ್ನಟ್ಟಿ ಆರೋಪಿಗಳನ್ನು ಬಂಧಿಸಲಾಗಿತ್ತು.

ಬಂಧಿತರಲ್ಲಿ ನೌಷಾದ್ ಮತ್ತು ನಿರ್ಶಾನನನ್ನು ಪೊಲೀಸರು ಈಗಾಗಲೇ ತನಿಖೆಗೊಳಪಡಿಸಿದ್ದಾರೆ.  ಇವರಿಬ್ಬರೂ ತಾವು ಪೂರ್ವಯೋಜಿತವಾಗಿಯೇ ಕೊಲೆಕೃತ್ಯಕ್ಕೆ ಸಂಚು ಹೆಣೆದಿದ್ದೆವು ಎಂದು ಬಾಯ್ಬಿಟ್ಟಿದ್ದರು. ಇದೀಗ ಇನ್ನಿಬ್ಬರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ಇದಕ್ಕೆ ಪೂರಕವಾದ ಅಂಶಗಳನ್ನು ತನಿಖೆ ಮೂಲಕ ಕಲೆ ಹಾಕಲಿದ್ದಾರೆ.

ಪರಾರಿಯಾಗುವ ಸಂದರ್ಭದಲ್ಲಿ ಪಿಂಕಿ ನವಾಝ್ ಮತ್ತು ರಿಜ್ವಾನ್ ಕಾಲಿಗೆ ಗುಂಡೇಟು ತಗಲಿತ್ತು.  ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಇವರಿಬ್ಬರೂ ಇದೀಗ ಚೇತರಿಸಿಕೊಂಡಿದ್ದು ಶನಿವಾರ ವಶಕ್ಕೆ ಪಡೆದುಕೊಂಡು ವಿಚಾರಣೆ ಆರಂಭಗೊಳ್ಳುವ ಸಾಧ್ಯತೆ ಇದೆ.

ಕ್ರಿಮಿನಲ್ ಹಿನ್ನೆಲೆಯುಳ್ಳವರಾಗಿರುವ ಇವರಲ್ಲಿ ರಿಜ್ವಾನ್ 2016ರ ಏಪ್ರಿಲ್ 13ರಂದು ನಡೆದ ಭರತ್‍ರಾಜ್ ಕೊಲೆ ಯತ್ನ ಆರೋಪಿಯಾಗಿದ್ದಾನೆ.

 

 

LEAVE A REPLY