ಕಾಣೆಯಾದ ಕುತ್ಯಾರು ಯುವತಿ ಶವ ಬಾವಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆ

ಬಾವಿಯಲ್ಲಿ ತೇಲುತ್ತಿರುವ ಶವ

ನಮ್ಮ ಪ್ರತಿನಿಧಿ ವರದಿ

ಪಡುಬಿದ್ರಿ : ಕಳೆದ ಸೋಮವಾರ ಬ್ಯಾಂಕಿಗೆ ಹೋಗಿ ಬರುವುದಾಗಿ ಮನೆಬಿಟ್ಟ ಯುವತಿಯೊಬ್ಬಳು ಮನೆಗೆ ವಾಪಾಸಾಗದೆ ಕಾಣೆಯಾಗಿದ್ದು, ಇದೀಗ ಮನೆಯಿಂದ ಕೊಂಚ ದೂರದ ಆವರಣವಿಲ್ಲದ ಬಾವಿಯಲ್ಲಿ ಶವವಾಗಿ ಪತ್ತೆಯಾಗಿರುವುದು ಸ್ಥಳೀಯರನ್ನು ಬೆಚ್ಚಿ ಬೀಳಿಸಿದೆ.

ಮೃತ ಮಂಜುಳ
ಮೃತ ಮಂಜುಳ

ಮೃತ ಯುವತಿ ಕುತ್ಯಾರಿನ ಉಜೂರು ನಿವಾಸಿ ಸಂಜೀವ ಮೂಲ್ಯರ ಪುತ್ರಿ ಮಂಜುಳ (24). ಈಕೆ ಶಿರ್ವ ಸೊಸೈಟಿ ಬಳಿಯ ರಾಮನ್ ಫ್ಯಾಕ್ಟರಿಯಲ್ಲಿ ಕಳೆದ ಎರಡು ವರ್ಷಗಳಿಂದ ಕೆಲಸ ಮಾಡುತ್ತಿದ್ದು, ಕಳೆದ ಸೋಮವಾರ ಬ್ಯಾಂಕಿಗೆಂದು ಹೋದವಳು ನಾಪತ್ತೆಯಾಗಿದ್ದು, ಈ ಬಗ್ಗೆ ಹೆತ್ತವರು ಶಿರ್ವ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಗುರುವಾರ ದಾರಿಹೋಕರೊಬ್ಬರು ಬಾವಿಯಲ್ಲಿ ಶವ ತೇಲುತ್ತಿರುವುದನ್ನು ಗಮನಿಸಿ ಸ್ಥಳೀಯರಿಗೆ ತಿಳಿಸಿದ್ದು, ಆ ಬಳಿಕ ಸ್ಥಳಕ್ಕೆ ಬಂದ ಪೊಲೀಸರು ಸಾರ್ವಜನಿಕರ ಸಹಕಾರದಿಂದ ಕೊಳೆತ ಶವವನ್ನು ಮೇಲೆತ್ತಿ ಪರಿಶೀಲಿಸಿದಾಗ ನಾಪತ್ತೆಯಾದ ಮಂಜುಳದೆಂದು ದೃಢಪಟ್ಟಿದೆ. ಈಕೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.