ಮಂಗಳೂರು ನಗರದ ರಸ್ತೆಗಳಲ್ಲಿ ಯಮರೂಪಿ ಮ್ಯಾನ್ ಹೋಲುಗಳು

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆಯು ನಗರದಾದ್ಯಂತ ಡ್ರೈನೇಜ್ ಮ್ಯಾನ್ ಹೋಲುಗಳನ್ನು ಸಮರ್ಪಕವಾಗಿ ನಿರ್ಮಿಸುವಲ್ಲಿ ವಿಫಲವಾಗಿದೆ. ಮ್ಯಾನ್ ಹೋಲ್ ನಿರ್ಮಾಣಕ್ಕೆ ಕಾಂಟ್ರಾಕ್ಟ್ ಕೈಗೊಂಡಿರುವವರು ಮನಪಾದ ಕಣ್ಣಿಗೆ ಮಣ್ಣೆರಚುವ ಕೆಲಸ ಮಾಡಿದ್ದಾರೆ.

ನಗರದ ಪ್ರಮುಖ ರಸ್ತೆಗಳಲ್ಲಿ ಹೊಂಡ ಕೊರೆದು ಹಾಳುಗೆಡವಲಾಗುತ್ತದೆ, ಇದು ಕಾಂಟ್ರಾಕ್ಟರುದಾರರಿಗೆ ಲಾಭದಾಯಕವಾಗಿದೆ. ಆರ್ಟಿಐ ದಾಖಲೆಗಳ ಪ್ರಕಾರ ಒಂದು ವರ್ಷದಲ್ಲಿ ಮನಪಾ ವ್ಯಾಪ್ತಿಯ 60 ವಾರ್ಡುಗಳ ಸುಮಾರು 181ಕ್ಕೂ ಅಧಿಕ ಮ್ಯಾನ್ ಹೋಲುಗಳನ್ನು ಬರೋಬ್ಬರಿ 8.75 ಲಕ್ಷ ವೆಚ್ಚದಲ್ಲಿ ಮರುನಿರ್ಮಾಣ ಮಾಡಲಾಗುತ್ತಿದೆ. ಮ್ಯಾನ್ ಹೋಲುಗಳು ಕೆಟ್ಟುಹೋಗಲು ಕಳಪೆ ಗುಣಮಟ್ಟದ ಅಡಿಪಾಯವೇ ಕಾರಣ, ಮಾತ್ರವಲ್ಲ ಮ್ಯಾನ್ ಹೋಲುಗಳು ಡ್ರೈನೇಜ್ ರಿಪೇರಿ ಕೆಲಸಗಳ ಸಂದರ್ಭ ಮತ್ತು ಬೃಹತ್ ವಾಹನಗಳ ಚಲನೆಯಿಂದ ಕೆಟ್ಟುಹೋಗುತ್ತಿವೆ.  ಇಂತಹ ಕೆಲಸಗಳು ಅಪಘಾತಗಳಿಗೆ ಕಾರಣವಾಗಿವೆ.

ಮೂಲಗಳ ಪ್ರಕಾರ ಮ್ಯಾನ್ ಹೋಲುಗಳ ಮರು ನಿರ್ಮಾಣವು ಕಾಂಟ್ರಾಕ್ಟರುಗಳಿಗೆ ಲಾಭದಾಯಕ, ಏಕೆಂದರೆ ಒಂದು ಮ್ಯಾನ್ ಹೋಲನ್ನು ಮೂರು ಬಾರಿ ಮರು ನಿರ್ಮಾಣಗೊಳಿಸಿ ಮನಪಾದಿಂದ ಬಿಲ್ ಪಡೆಯುತ್ತಿದ್ದಾರೆ.

ಕಳೆದ 2 ವರ್ಷಗಳಲ್ಲಿ ಅಂದರೆ 2013ರಿಂದ 2015ರ ಅವಧಿಯಲ್ಲಿ ಮ್ಯಾನ್ ಹೋಲ್ ದುರಸ್ಥಿಗಾಗಿ ಮನಪಾ ಸುಮಾರು 11.75 ಲಕ್ಷ ರೂ ಖರ್ಚು ಮಾಡಿದೆ ಎಂದು ಆರ್ಟಿಐ ದಾಖಲೆಗಳು ತಿಳಿಸಿವೆ.

ನಂತೂರು ಸರ್ಕಲ್ ಬಳಿಯಿರುವ ಮ್ಯಾನ್ ಹೋಲ್ ಸಂಚರಿಸುವವರಿಗೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಇದರಿಂದ ಹಲವಾರು ಅಪಘಾತಗಳು ಸಂಭವಿಸಿವೆ. ಮೂರು ತಿಂಗಳ ಹಿಂದೆಯಷ್ಟೆ ಈ ಮ್ಯಾನ್ ಹೋಲನ್ನು ಸರಿಪಡಿಸಲಾಗಿತ್ತು. ಆದರೆ ಈಗ ಮತ್ತೆ ಕೆಟ್ಟುಹೋಗಿದೆ ಎಂದು ಸ್ಥಳೀಯರು ಹೇಳಿದ್ದಾರೆ.