ಕಾಂಗ್ರೆಸ್ಸಿಗರ ನಡುವೆ ವಿವಾದ : ಮೊಟಕುಗೊಂಡ ಡಿಸಿಸಿ ಸಭೆ

ಕಾಸರಗೊಡು : ಡಿ ಸಿ ಸಿ ಅಧ್ಯಕ್ಷರ ತೀರ್ಮಾನಗಳು ಏಕಪಕ್ಷೀಯವೆಂದು ಆರೋಪಿಸಿ ಕಾಂಗ್ರೆಸ್ ಜಿಲ್ಲಾ ಸಮಿತಿಗಳಲ್ಲಿ ಐ ವಿಭಾಗ ಪರೋಕ್ಷವಾಗಿ ರಂಗಕ್ಕಿಳಿದಿದೆ.

ಚರ್ಚೆಯಿಲ್ಲದೇ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಿರುವುದಾಗಿ ಆರೋಪಿಸಿ ಡಿಸಿಸಿ ಪದಾಧಿಕಾರಿಗಳು ಸಭೆಯಲ್ಲಿ ಹಾಜರಾಗುವುದಿಲ್ಲವೆಂಬುದಾಗಿ ತಿಳಿಸುವುದರೊಂದಿಗೆ ಮಂಗಳವಾರ ಸೇರಬೇಕಾಗಿದ್ದ ಡಿಸಿಸಿ ಪದಾಧಿಕಾರಿಗಳ ಸಭೆ ಕೊನೆ ಘಳಿಗೆಯಲ್ಲಿ ರದ್ದು ಪಡಿಸಬೇಕಾದ ಪರಿಸ್ಥಿತಿ ಬಂದೊದಗಿದೆ. ಐ ಗ್ರೂಪಿನ ಪ್ರತಿನಿಧಿ ಡಿ ಸಿ ಸಿ ಅಧ್ಯಕ್ಷ ಹಕೀಂ ಕುನ್ನಿಲ್ ಒಂದು ದಿವಸಕ್ಕೆ ಮೊದಲು ಕಾಞಂಗಾಡಿನಲ್ಲಿ ಸೇರಿದ ಸಭೆಯ ಬಳಿಕ ಈ ಕ್ರಮ ನಡೆದಿದೆ.

26 ಸದಸ್ಯರಲ್ಲಿ ಐ ಗ್ರೂಪಿನ 13 ಮಂದಿ ಸಭೆಯಲ್ಲಿ ಪಾಲ್ಗೊಳ್ಳುವುದಿಲ್ಲವೆಂಬುದಾಗಿ ಪಕ್ಷದ ನಾಯಕತ್ವ್ವಕ್ಕೆ ತಿಳಿಸಿದ್ದರು. ಇದರ ಹೊರತಾಗಿ ಎ ಗ್ರೂಪಿನ ಕೆಲವೊಂದು ಮಂದಿ ಕೂಡಾ ಸಭೆಯಲ್ಲಿ ಪಾಲ್ಗೊಳ್ಳುವುವಿಲ್ಲವೆಂಬ ಸೂಚನೆ ಲಭಿಸಿದ ಹಿನ್ನೆಲೆಯಲ್ಲಿ ರಾತ್ರಿ 11ರ ಹೊತ್ತಿಗೆ ಸಭೆಯನ್ನು ರದ್ದುಗೊಳಿಸಿರುವುದಾಗಿ ತಿಳಿಸಲಾಯಿತು.

ಪುಲ್ಲೂರು ಪೆರಿಯ ವಲಯ ಅಧ್ಯಕ್ಷರಾಗಿದ್ದ ಐ ಗ್ರೂಪಿನ ಪಿ ರಾಮಕೃಷ್ಣನ ಬದಲಿಗೆ ಎ ಗ್ರೂಪಿನ ವಿ  ಕೃಷ್ಣರನ್ನು ಅಧ್ಯಕ್ಷರನಾಗಿ ಮಾಡಿರುವುದು ವಿವಾದಕ್ಕೆ ಕಾರಣವಾಗಿದೆ.

ಜಿಲ್ಲಾ ಬ್ಯಾಂಕ್ ಆಡಳಿತ ಕಾಂಗ್ರೆಸ್ಸಿನಿಂದ ಕೈತಪ್ಪಿರುವ ಬಗ್ಗೆ ತನಿಖಾ ವರದಿಯನ್ನು ತಯಾರಿಸಲು ಎರಡು ಮಂದಿ ಸದಸ್ಯರನ್ನು ನೇಮಕಗೊಳಿಸಿರುವುದರ ಬಗ್ಗೆ ಡಿಸಿಸಿ ಸಭೆಯಲ್ಲಿ ಚರ್ಚೆ ನಡೆದಿಲ್ಲವೆಂಬುದಾಗಿ ಐ ಗ್ರೂಪ್ ಆರೋಪಿಸಿದೆ.

ಕಳೆದ ಡಿಸಿಸಿ ಸಭೆಯಲ್ಲಿ ಐ ಗ್ರೂಪಿನ ಇಬ್ಬರು ಹಿರಿಯ ಸದಸ್ಯರು ಅಸಭ್ಯವಾಗಿ ನುಡಿದಿದ್ದರೂ ಡಿ ಸಿ ಸಿ ಅಧ್ಯಕ್ಷ ಯಾವುದೇ ಕ್ರಮ ಕೈಗೊಂಡಿಲ್ಲವೆಂಬುದಾಗಿ ಕೂಡಾ ಆರೋಪವಿದೆ. ಸದಸ್ಯರ ಮಧ್ಯೆ ಮಾತಿನ ತರ್ಕ ಉಂಟಾದಾಗ ಅದನ್ನು ನಿಯಂತ್ರಿಸಬೇಕಾದ ಅಧ್ಯಕ್ಷರೇ ಸಭೆಯನ್ನು ಮುಕ್ತಾಯಗೊಳಿಸಿರುವುದಾಗಿ ಹೇಳಿ ಇಳಿದು ಹೋಗಿರುವುದಾಗಿ ಐ ಗ್ರೂಪ್ ಸದಸ್ಯರು ಆರೋಪಿಸಿದ್ದಾರೆ.