ಬಾಲಕಾರ್ಮಿಕರ ನಿಯೋಜಿಸಿದರೆ ಕಠಿಣ ಶಿಕ್ಷೆ, ದಂಡ : ಜಿಲ್ಲಾಧಿಕಾರಿ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಬಾಲಕಾರ್ಮಿಕ ಪದ್ಧತಿಯು ಒಂದು ಸಾಮಾಜಿಕ ಪಿಡುಗಾಗಿದ್ದು, ಈ ಪದ್ಧತಿಯನ್ನು ಸಂಪೂರ್ಣವಾಗಿ ತೊಡೆದು ಹಾಕಬೇಕಾಗಿದೆ. ಬಾಲಕಾರ್ಮಿಕ ನಿಷೇಧ ಮತ್ತು ನಿಯಂತ್ರಣ ಕಾಯ್ದೆ-1986ನ್ನು ಜಾರಿಗೆ ತಂದಿದ್ದರೂ ಕೂಡ ಇನ್ನೂ ಕೂಡ ಬೆರಳೆಣಿಕೆಯಷ್ಟು ಪ್ರಕರಣಗಳು ವರದಿಯಾಗುತ್ತಿವೆ. ಕೇಂದ್ರ ಸರ್ಕಾರವು ಈ ಕಾಯ್ದೆಗೆ 2016ರ ಜುಲೈ 30ರಲ್ಲಿ ತಿದ್ದುಪಡಿ ತಂದಿದೆ. 14 ವರ್ಷದೊಳಗಿನ ಮಕ್ಕಳನ್ನು ಯಾವುದೇ ಕ್ಷೇತ್ರದಲ್ಲಿ ಹಾಗೂ 14ರಿಂದ 18 ವರ್ಷದೊಳಗಿನ ಕಿಶೋರಾವಸ್ಥೆಯ ಮಕ್ಕಳನ್ನು ಅಪಾಯಕಾರಿ ಉದ್ದಿಮೆಗಳಲ್ಲಿ ದುಡಿಸಿಕೊಳ್ಳುವಂತಿಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕೆ ಜಿ ಜಗದೀಶ್ ಎಚ್ಚರಿಸಿದ್ದಾರೆ.

ಬಾಲ್ಯಾವಸ್ಥೆ ಹಾಗೂ ಕಿಶೋರಾವಸ್ಥೆಯ ಕಾರ್ಮಿಕರನ್ನು ಕೆಲಸಕ್ಕೆ ನೇಮಿಸಿಕೊಂಡು ಪ್ರಕರಣಗಳು ಸಾಬೀತಾದಲ್ಲಿ 6 ತಿಂಗಳಿಗೆ ಕಡಿಮೆ ಇಲ್ಲದ ಹಾಗೂ 2 ವರ್ಷದವರೆಗೆ ವಿಸ್ತರಿಸಬಹುದಾದ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ. ಅಲ್ಲದೆ ರೂ 20,000ಗಿಂತ ಕಡಿಮೆ ಇಲ್ಲದಂತೆ ರೂ 50,000ದವರೆಗೆ ದಂಡ ಅಥವಾ ಎರಡನ್ನು ವಿಧಿಸಬಹುದಾಗಿರುತ್ತದೆ. ಕಾರ್ಮಿಕರ ಪುನರ್ವಸತಿಗಾಗಿ ರೂ 20,000 ಕಾರ್ಪಸ್ ನಿಧಿಯನ್ನು ಪಾವತಿಸಬೇಕಾಗಿರುತ್ತದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2011-12ನೇ ಸಾಲಿನಿಂದ ಇದುವರೆಗೆ ಒಟ್ಟು 26 ಬಾಲಕಾರ್ಮಿಕರನ್ನು ಪತ್ತೆ ಹಚ್ಚಲಾಗಿದೆ. 2016-17ನೇ ಸಾಲಿನಲ್ಲಿ 2 ಹಾಗೂ 2017-18ನೇ ಸಾಲಿನಲ್ಲಿ ಎರಡು ಪ್ರಕರಣವನ್ನು ದಾಖಲಿಸಲಾಗಿದೆ.

ಗ್ರಾಮ ಪಂಚಾಯತ್ ಮಟ್ಟದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಬಾಲ್ಯಾವಸ್ಥೆ ಹಾಗೂ ಕಿಶೋರಾವಸ್ಥೆಯ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ-1986ರ ಕಲಂ-17ರಡಿ ನಿರೀಕ್ಷಕರನ್ನಾಗಿ ನೇಮಿಸಿದ್ದು, ಗ್ರಾಮ ಮಟ್ಟದಲ್ಲಿ ಬಾಲಕಾರ್ಮಿಕತೆಯನ್ನು ನಿಯಂತ್ರಿಸುವ ಹೊಣೆಗಾರಿಕೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಳಾದ್ದಾಗಿದೆ. ಬಾಲಕಾರ್ಮಿಕ ಪ್ರಕರಣಗಳು ಕಂಡುಬಂದಲ್ಲಿ ಸಂಬಂಧಿಸಿದ ಮಾಲಕರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಗದೀಶ ತಿಳಿಸಿದ್ದಾರೆ.