ಸಸಿಹಿತ್ಲು ಸರ್ಫಿಂಗ್ ಪ್ರದೇಶಕ್ಕೆ ಡೀಸಿ ಭೇಟಿ

ಜಿಲ್ಲಾಧಿಕಾರಿ ಜಗದೀಶ್ ಸಸಿಹಿತ್ಲು ಸರ್ಫಿಂಗ್ ಪ್ರದೇಶಕ್ಕೆ ಭೇಟಿ ನೀಡಿ ಸ್ಥಳೀಯರೊಡನೆ ಸಂವಾದ ನಡೆಸಿದರು

ನಮ್ಮ ಪ್ರತಿನಿಧಿ ವರದಿ

ಮುಲ್ಕಿ : ಸಸಿಹಿತ್ಲುವಿನ ಮುಂಡ ಬೀಚನ್ನು ಹಳೆಯಂಗಡಿ ಪಂಚಾಯತಿ ಹಾಗೂ ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಬಿವೃದ್ಧಿ ಪಡಿಸುವುದಾಗಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಜಗದೀಶ್ ಹೇಳಿದರು.

ಅವರು ಹಳೆಯಂಗಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಸಸಿಹಿತ್ಲು ಮುಂಡ ಬೀಚಿನ ಸರ್ಪಿಂಗ್ ನಡೆಯುವ ಸ್ಥಳಕ್ಕೆ ಭೇಟಿ ನೀಡಿ ಬೀಚ್ ಅಬಿವೃದ್ಧಿ ಬಗ್ಗೆ ಸ್ಥಳೀಯರೊಡನೆ ಸಮಾಲೋಚಿಸಿದರು. ಈ ಸಂದರ್ಭ ಸ್ಥಳೀಯರು ತಮಗೆ ಆಗುತ್ತಿರುವ ತೊಂದರೆ ಬಗ್ಗೆ ಜಿಲ್ಲಾಧಿಕಾರಿ ಬಳಿ ಹೇಳಿದರು.

ಸ್ಥಳೀಯರಾದ ವಾಸುದೇವ ಸಾಲ್ಯಾನ್ ಮಾತನಾಡಿ, “ಬೀಚ್ ರಸ್ತೆಯಲ್ಲಿ ಕೆಲ ಪ್ರವಾಸಿಗರು ಅತೀ ವೇಗದಲ್ಲಿ ಬೈಕ್ ಚಾಲನೆ ಮಾಡಿ ಅಸಭ್ಯವಾಗಿ ವರ್ತಿಸುತ್ತಿದ್ದಾರೆ. ಅಂಥವರ ವಿರುದ್ಧ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.

ಸ್ಥಳೀಯ ಮೀನುಗಾರಿಕಾ ಮಹಿಳೆಯರು ಮಾತನಾಡಿ, “ಮೀನುಗಾರಿಕೆಗೆ ಅನುಕೂಲವಾಗುವಂತೆ ಸಮುದ್ರವನ್ನು ಆಳ ಮಾಡಬೇಕು” ಎಂದು ಹೇಳಿದರು. ಇದಕ್ಕೆ ಜಿಲ್ಲಾಧಿಕಾರಿ, “ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ಪ್ರವಾಸೋದ್ಯಮ ಅಬಿವೃದ್ಧಿ ಪಡಿಸಲಾಗುವುದು” ಎಂದು ಹೇಳಿದರು.

ಪ್ರವಾಸೋದ್ಯಮ ಬೆಳೆಯುತ್ತಿದ್ದಂತೆ ಮುಕ್ಕಾ-ಸಸಿಹಿತ್ಲು ರಸ್ತೆಯನ್ನು ದ್ವಿಪಥಗೊಳಿಸಬೇಕೆಂದು ಪಂಚಾಯತಿ ಸದಸ್ಯ ವಸಂತ್ ಬೆರ್ನಾಡ್ ಜಿಲ್ಲಾಧಿಕಾರಿಗೆ ಮನವಿ ಮಾಡಿದರು.

ಸಸಿಹಿತ್ಲು ಬೀಚಿನ ದ್ವಾರದ ಬಳಿ ಸಂಜೆಯಾಗುತ್ತಲೇ ಪುಂಡರು ಮದ್ಯ ಸೇವಿಸಿ ಗಲಾಟೆ ಮಾಡುತ್ತಿರುತ್ತಾರೆ. ಅವರನ್ನು ನಿಯಂತ್ರಿಸಲು ಪೊಲೀಸರಿಗೆ ಸೂಚನೆ ನೀಡಬೇಕು ಹಾಗೂ ಸಸಿಹಿತ್ಲು ರಸ್ತೆಯಲ್ಲಿ ಅತೀ ವೇಗ ಚಾಲನೆ ನಿಯಂತ್ರಿಸಲು ವೇಗತಡೆಗಳನ್ನು ಹಾಕಬೇಕು ಎಂದು ಸ್ಥಳೀಯರು ಜಿಲ್ಲಾಧಿಕಾರಿಗೆ ಹೇಳಿದರು.

ಇದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿ, “ಸುರಕ್ಷತೆಗೆ ಮೊದಲ ಆದ್ಯತೆ ನೀಡುವುದರೊಂದಿಗೆ ಸ್ಥಳೀಯ 27 ಸಂಘ ಸಂಸ್ಥೆಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದಿನ 15 ದಿನಗಳಲ್ಲಿ ಪ್ರವಾಸೋದ್ಯಮ ಹಾಗೂ ಸರ್ಫಿಂಗ್ ಅಬಿವೃದ್ಧಿ ಪಡಿಸಲಾಗುವುದು. ಮುಂದಿನ 15 ದಿನದೊಳಗೆ ಬೀಚ್ ಅಬಿವೃದ್ಧಿಯ ನೀಲಿನಕಾಶೆ ಸಿದ್ಧಪಡಿಸಿ ಕೇಂದ್ರಕ್ಕೆ ಕಳುಹಿಸಿಕೊಡಲಾಗುವುದು ಹಾಗೂ ಸಸಿಹಿತ್ಲುವಿನ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಗಮನಹರಿಸಲಾಗುವುದು” ಎಂದರು.