ಪ್ರವಾಸಿಗರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕು : ಡೀಸಿ

ನಮ್ಮ ಪ್ರತಿನಿಧಿ ವರದಿ

ಕಾರವಾರ : ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ದೃಷ್ಟಿಯಿಂದ ಬೀಚ್ ಸ್ವಚ್ಛತೆ ಹಾಗೂ ಪ್ರವಾಸಿಗಳ ಸುರಕ್ಷತೆಗೆ ನಿಯೋಜನೆಗೊಂಡ ಲೈಫ್ ಗಾರ್ಡ್ ಹಾಗೂ ಪ್ರವಾಸಿಮಿತ್ರರು ಆದಷ್ಟು ಕ್ರಿಯಾಶೀಲರಾಗಿ ಬೀಚ್ ಸ್ವಚ್ಛತೆಗೆ ಮತ್ತು ಪ್ರವಾಸಿಗರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕು” ಎಂದು ಜಿಲ್ಲಾಧಿಕಾರಿ ಎಸ್ ಎಸ್ ನಕುಲ್ ಹೇಳಿದರು.

ಅವರು ರವೀಂದ್ರನಾಥ್ ಕಡಲತೀರದ ಮೇಲೆ ಬುಧವಾರ ಜಿಲ್ಲೆಯ ವಿವಿಧ ಬೀಚುಗಳಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿರುವ 14 ಜನ ಲೈಫ್ ಗಾರ್ಡ್ ಹಾಗೂ ಪ್ರವಾಸಿಮಿತ್ರರಿಗೆ ಬೈನ್ಯಾಕುಲರ್, ಟಾರ್ಚ್ ಮತ್ತು ಸಮವಸ್ತ್ರ ವಿತರಿಸಿ ಮಾತನಾಡುತ್ತಿದ್ದರು.

“ಉತ್ತರ ಕನ್ನಡದ ಬೀಚುಗಳನ್ನು ಪ್ರವಾಸೋದ್ಯಮದ ದೃಷ್ಟಿಯಿಂದ ಅಭಿವೃದ್ಧಿಗೊಳಿಸುವ ಪ್ರಕ್ರಿಯೆ ಜಾರಿಯಲ್ಲಿದೆ. ಬೀಚ್ ನೋಡಲು ಬರುವ ಪ್ರವಾಸಿಗರ ಸುರಕ್ಷತೆ ಹಿನ್ನೆಲೆಯಲ್ಲಿ ಲೈಫ್ ಗಾರ್ಡುಗಳನ್ನು ಸೃಷ್ಟಿಸಿ ತರಬೇತಿ ನೀಡಿ ಆಯ್ಕೆ ಮಾಡಿಕೊಳ್ಳಲಾಗಿದೆ. ಅದೇ ರೀತಿ ಪ್ರವಾಸಿಗರಿಗೆ ಗೈಡ್ ಮಾಡಲು ಪ್ರವಾಸಿಮಿತ್ರರನ್ನು ನಿಯೋಜಿಸಲಾಗಿದೆ. ಜಿಲ್ಲೆಯ ವಿವಿಧ ಬೀಚುಗಳಿಗೆ ಬರುವ ಪ್ರವಾಸಿಗರಿಗೆ ಸರಿಯಾದ ಮಾರ್ಗದರ್ಶನ ನೀಡಲು 14 ಜನ ಲೈಫ್ ಗೈಡ್ ನಿಯುಕ್ತಿಗೊಳಿಸಲಾಗಿದೆ. ಕಾರವಾರದ ರವೀಂದ್ರನಾಥ್ ಟ್ಯಾಗೋರ್ ಕಡಲತೀರ, ಗೋಕರ್ಣದ ಬೀಚುಗಳು ಹಾಗೂ ಮುರ್ಡೆಶ್ವರ ಸೇರಿದಂತೆ ವಿವಿಧ ಬೀಚುಗಳಲ್ಲಿ 14 ಜನರನ್ನು 3 ತಂಡಗಳಾಗಿ ವಿಭಜಿಸಲಾಗುತ್ತದೆ. ಈ  3 ತಂಡಗಳ ಮೇಲುಸ್ತುವಾರಿ ನೋಡಿಕೊಳ್ಳಲು 3 ಜನ ಮೇಲುಸ್ತುವಾರಿಗಳನ್ನು ಸಹ ನೇಮಿಸಲಾಗಿದೆ. ಬೈನ್ಯಾಕುಲರ್, ಟಾರ್ಚ್ ಈ ಮೇಲುಸ್ತುವಾರಿಗಳ ಅಧೀನದಲ್ಲಿರುತ್ತವೆ. ಇವುಗಳನ್ನು ಬಳಸಿಕೊಂಡು ಉತ್ತಮ ಸೇವೆ ನೀಡುವಂತಾಗಬೇಕು” ಎಂದು ಕಿವಿಮಾತು ಹೇಳಿದರು.