`ನನ್ನ ಮಾಲಿನ್ಯ ನನ್ನ ಜವಾಬ್ದಾರಿ’ ಬೇಸಿಗೆ ಶಿಬಿರಕ್ಕೆ ಡೀಸಿ ಚಾಲನೆ

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಪಾರಂಪರಿಕ ಆಹಾರ ಪದ್ಧತಿ ಮತ್ತು ಮಾಲಿನ್ಯ ಸಂಸ್ಕರಣೆಗಳ ಪ್ರಮುಖ ವಿಚಾರಗಳಲ್ಲಿ ನಾವಿಂದು ತಾಳುತ್ತಿರುವ ಬೇಜವಾಬ್ದಾರಿ ನಿಲುವುಗಳು ಭಾರೀ ಸಂಕಷ್ಟಗಳಿಗೆ ಕಾರಣವಾಗುವ ಭೀತಿ ಎದುರಾಗಿದೆ. ಆಧುನಿಕ ವ್ಯಾವಹಾರಿಕ ಜೀವನಕ್ರಮದ ನಡುವೆ ಇಂತಹ ನಿರ್ಲಕ್ಷ್ಯಗಳಿಗೆ ಅವಕಾಶ ನೀಡಬಾರದೆಂಬುದು ಒಪ್ಪಲೇಬೇಕಾದ ಸತ್ಯವೆಂದು ಜಿಲ್ಲಾಧಿಕಾರಿ ಕೆ ಜೀವನ್ ಬಾಬು ಅಭಿಪ್ರಾಯ ವ್ಯಕ್ತಪಡಿಸಿದರು.

ಎಣ್ಮಕಜೆ ಗ್ರಾಮ ಪಂಚಾಯತ ಹಾಗೂ ಶುಚಿತ್ವ ಮಿಷನ್ ಜಿಲ್ಲಾ ಘಟಕ ಜಂಟಿಯಾಗಿ ರವಿವಾರ ಆಯೋಜಿಸಿದ `ನನ್ನ ಮಾಲಿನ್ಯ ನ್ನ ಜವಾಬ್ದಾರಿ’ ಎಂಬ ಸಂದೇಶವನ್ನೊಳಗೊಂಡ ವಿಶೇಷ ಬೇಸಿಗೆ ಶಿಬಿರವನ್ನು ಪೆರ್ಲ ಸ ನಾ ಹೈಸ್ಕೂಲಿನಲ್ಲಿ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. “ಯುವ ತಲೆಮಾರಿಗೆ ಜೀವನಕ್ರಮ ಮತ್ತು ಪರಿಸರ ನೈರ್ಮಲ್ಯದ ಬಗ್ಗೆ ಜವಾಬ್ದಾರಿಯುತ ಸ್ಪಷ್ಟ ನಿರ್ದೇಶನಗಳನ್ನೊಳಗೊಂಡ ಕಾರ್ಯಸೂಚಿಗಳು ಅಗತ್ಯವಿದೆ” ಎಂದು ತಿಳಿಸಿದವ ಅವರು ಇನ್ನಷ್ಟು ಜನ ಸಹಭಾಗಿತ್ವದಲ್ಲಿ ಯೋಜನೆ ಕಾರ್ಯರೂಪಕ್ಕಿಳಿಯಲಿ ಎಂದು ಹಾರೈಸಿದರು.

ಈ ಸಂದರ್ಭ ಜನಪ್ರತಿನಿಧಿಗಳ ಸಹಿತ ಹಲವಾರು ಮಂದಿ ಪಾಲ್ಗೊಂಡರು. 3 ದಿನ ನಡೆದ ಶಿಬಿರದಲ್ಲಿ 6ನೇ ತರಗತಿಯಿಂದ ಪ್ಲಸ್ ಟು ವರೆಗಿನ ವಿದ್ಯಾರ್ಥಿಗಳು ಪಾಲ್ಗೊಂಡು ಹಲಸು, ಮಾವು, ತೆಂಗಿನ ವಿವಿಧ ಖಾದ್ಯಗಳು ಮೊದಲಾದವುಗಳ ತಯಾರಿ ಸಹಿತ ವಿವಿಧ ವಿಷಯಗಳ ಮಾಹಿತಿ ಪಡೆದರು.