ಕುಂದಾಪುರ ಠಾಣೆಗೆ ಮಹಿಳೆಯರ ಮುತ್ತಿಗೆ

ಡೀಸಿ ಹಲ್ಲೆ ಪ್ರಕರಣ

ಅಮಾಯಕರ ಬಿಡುಗಡೆಗೆ ಆಗ್ರಹ ಟಿ ಇಂದು ಪ್ರತಿಭಟನೆ

ನಮ್ಮ ಪ್ರತಿನಿಧಿ ವರದಿ

ಕುಂದಾಪುರ : ಅಕ್ರಮ ಮರಳುಗಾರಿಕೆ ಹಾಗೂ ಜಿಲ್ಲಾಧಿಕಾರಿ ಮತ್ತು ಸಹಾಯಕ ಆಯುಕ್ತೆ ಕೊಲೆ ಯತ್ನ ಪ್ರಕರಣದಲ್ಲಿ ಅಮಾಯಕರನ್ನು ಬಂಧಿಸಲಾಗಿದೆ ಎಂದು ಆರೋಪಿಸಿದ ಮಹಿಳೆಯರು ಕುಂದಾಪುರ ಠಾಣೆಗೆ ಮುತ್ತಿಗೆ ಹಾಕಿದ ಘಟನೆ ಶನಿವಾರ ರಾತ್ರಿ ನಡೆದಿದೆ. ಎಪ್ರಿಲ್ 2ರಂದು ಮಧ್ಯರಾತ್ರಿಯಲ್ಲಿ ಜಿಲ್ಲಾಧಿಕಾರಿ ನೇತೃತ್ವದ ತಂಡ ಅಕ್ರಮ ಮರಳುಗಾರಿಕಾ ಅಡ್ಡೆಗೆ ದಾಳಿ ನಡೆಸಿದ ಸಂದರ್ಭ ಹಲ್ಲೆ ನಡೆಸಿ ಜಿಲ್ಲಾಧಿಕಾರಿ ಹಾಗೂ ಸಹಾಯಕ ಆಯುಕ್ತೆಯ ಕೊಲೆಗೆ ಯತ್ನಿಸಿದ್ದ ಪ್ರಕರಣದಲ್ಲಿ ಮತ್ತೆ ಪೊಲೀಸರು ಎಡವಿದ್ದಾರೆ ಎಂಬುದಾಗಿ ಮಹಿಳೆಯರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ಸಂಜೆ ಬಲ್ಲ ಮಾಹಿತಿಗಳನ್ನು ಆಧರಿಸಿದ ಪೊಲೀಸರು ನಾಲ್ವರು ಯುವಕರನ್ನು ಬಂಧಿಸಿದ್ದರು. ಆದರೆ ಬಂಧಿತ ಯುವಕರು ಅಕ್ರಮ ಮರಳುಗಾರಿಕೆಯಲ್ಲಾಗಲೀ ಅಥವಾ ಹಲ್ಲೆ ಪ್ರಕರಣದಲ್ಲಿಯಾಗಲೀ ಭಾಗವಹಿಸಿಲ್ಲ. ಕೆಲವರು ವಿದೇಶದಲ್ಲಿದ್ದು, ರಜೆಗಾಗಿ ಊರಿಗೆ ಬಂದಿದ್ದರು. ಇನ್ನು ಕೆಲವರು ಬೇರೆ ಕಡೆ ಉದ್ಯೋಗದಲ್ಲಿದ್ದವರು ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಊರಿಗೆ ಬಂದಿದ್ದರು. ಮದುವೆ ಕಾರ್ಯಕ್ರಮ ಮುಗಿಸಿ ಬರುತ್ತಿದ್ದವರನ್ನು ಪೊಲೀಸರು ಏಕಾಏಕಿ ಬಂಧಿಸಿದ್ದಾರೆ ಎಂದು ಮಹಿಳೆಯರು ಠಾಣೆಯ ಮುಂದೆ ಆರೋಪಿಸಿದ್ದಾರೆ.

ಶನಿವಾರ ಬಂಧತರಾದವರೆಲ್ಲರೂ ಅಮಾಯಕರಾಗಿದ್ದು, ಬಡತನದ ಬೇಗೆಯಲ್ಲಿ ಉದ್ಯೋಗ ಅರಸಿ ಹೋಗಿದ್ದವರಾಗಿದ್ದಾರೆ. ಆದ್ದರಿಂದ ಅವರನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು. ಪ್ರಕರಣದ ನಿಜವಾದ ಆರೋಪಿಗಳು ರಾಜಾರೋಷವಾಗಿ ತಿರುಗಾಡುತ್ತಿದ್ದರೂ ಹಣದ ಆಮಿಷಕ್ಕೆ

ಬಲಿಯಾಗಿ ಪೊಲೀಸರು ಅಮಾಯಕರನ್ನು ಬಂಧಿಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಈಗಾಗಲೇ 27 ಮಂದಿಯನ್ನು ಬಂಧಿಸಲಾಗಿದ್ದು, ಪೊಲೀಸರು ಬಂಧಿತರನ್ನು ಬಿಡುಗಡೆಗೊಳಿಸಲು ನಿರಾಕರಿಸಿದ್ದಾರೆ. ಪರಿಣಾಮವಾಗಿ ಇಂದು ಬೆಳಿಗ್ಗೆ ಕಂಡ್ಲೂರು ಪೊಲೀಸ್ ಠಾಣೆಯ ಎದುರು ಪ್ರತಿಭಟನೆ ನಡೆಸುತ್ತೇವೆ ಎಂದು ಮಹಿಳೆಯರು ಎಚ್ಚರಿಕೆ ನೀಡಿದ್ದಾರೆ.

ನಮಗೆ ನ್ಯಾಯ ಸಿಗುವವರೆಗೂ ಹೋರಾಟ ನಡೆಸುತ್ತೇವೆ, ಇರುವ ಒಬ್ಬೊಬ್ಬ ಮಕ್ಕಳನ್ನು ಜೈಲಿಗೆ ಕಳಿಸಿದರೆ ನಾವು ಉಣ್ಣುವುದು ಹೇಗೆ. ನಾವು ಇಲ್ಲಿಯೇ ಸಾಯುತ್ತೇವೆ. ನಮಗೆ ಏನೇ ತೊಂದರೆಯಾದರೂ ಪೊಲೀಸರೇ ನೇರ ಹೊಣೆÉ ಎಂದೂ ಮಹಿಳೆಯರು ಎಚ್ಚರಿಸಿದ್ದಾರೆ.

ಒಟ್ಟಾರೆಯಾಗಿ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಪ್ರಾನ್ಸಿಸ್ ಹೇಳಿಕೆಯಂತೆ 50 ಜನರ ವಿರುದ್ಧ ಎಫ್ ಐ ಆರ್ ದಾಖಲಿಸಿದ್ದು, ಜನ ಭರ್ತಿಯಾಗುವ ಉದ್ದೇಶಕ್ಕಾಗಿ ಸಿಕ್ಕ ಸಿಕ್ಕವರನ್ನು ಬಂಧಿಸುತ್ತಿರುವುದು ಖೇದಕರ ಎಂದು ಮಹಿಳೆಯರು ಆರೋಪಿಸಿದ್ದು, ಈ ಬಗ್ಗೆ ಸಚಿವ ಪ್ರಮೋದ್ ಮಧ್ವರಾಜ್ ಅವರಿಗೂ ದೂರು ನೀಡಲಾಗಿದೆ ಎಂದು ಹೇಳಿದ್ದಾರೆ.