ಕುಲಶೇಖರ -ಕಾರ್ಕಳ ಹೆದ್ದಾರಿ ರೂಟ್ ಮ್ಯಾಪಿಗೆ ಜಿಲ್ಲಾಧಿಕಾರಿ ಮಂಜೂರಾತಿ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಕುಲಶೇಖರ-ಮೂಡಬಿದ್ರೆ-ಕಾರ್ಕಳ ರಾಷ್ಟ್ರೀಯ ಹೆದ್ದಾರಿ (169) ಚತುಷ್ಪಥ ಕಾಮಗಾರಿಯ ಅಂತಿಮ ರೂಟ್ ಮ್ಯಾಪಿಗೆ ಕೊನೆಗೂ ಜಿಲ್ಲಾಧಿಕಾರಿ ಅಂತಿಮ ಮಂಜೂರಾತಿ ನೀಡಿದ್ದಾರೆ. ಈ ಪ್ರಾಂತ್ಯದ ಭೌಗೋಳಿಕ ಪರಿಸ್ಥಿತಿಗನುಗುಣವಾಗಿ ಎನ್ ಎಚ್ ಎ ಐ ರಸ್ತೆ ವಿನ್ಯಾಸದ ಕಾಮಗಾರಿ ಆರಂಭಿಸಲಿದೆ.

45 ಕಿ ಮೀ ಉದ್ದದ ಈ ಹೆದ್ದಾರಿ ಚತುಷ್ಪಥ ಕಾಮಗಾರಿ ನಾಲ್ಕು ವರ್ಷದಿಂದ ಬಾಕಿ ಉಳಿದಿದೆ. ರಸ್ತೆ ತಿರುಗಿಸಬೇಕಿದ್ದ ಹಾಗೂ ನಿರ್ದಿಷ್ಟ ಅಗಲದ ರಸ್ತೆ ನಿರ್ಮಿಸಬೇಕೆಂಬ ಒತ್ತಡದ ಹಿನ್ನೆಲೆಯಲ್ಲಿ ರೋಡ್ ಮ್ಯಾಪ್ ವಿಳಂಬವಾಗಿದೆ. ಆಗಸ್ಟಿನಿಂದ ರಸ್ತೆ ಕಾಮಗಾರಿ ತ್ವರಿತಗೊಳ್ಳಲಿದೆ. ಚುನಾಯಿತ ಪ್ರತಿನಿಧಿಗಳು ಮತ್ತು ಜಿಲ್ಲಾಡಳಿತ ಭೂ-ಮಾಲಕರೊಂದಿಗೆ ಮಾತುಕತೆ ನಡೆಸಿದೆ. ಎನ್ ಎಚ್ ಎ ಐ ರೂಟ್ ಮ್ಯಾಪ್ ಅಂತಿಮಗೊಳಿಸಿದೆ.

“ಡೀಸಿಯವರು ರೂಟ್ ಮ್ಯಾಪಿಗೆ ಮಂಜೂರಾತಿ ನೀಡಿದ್ದಾರೆ. ಫೀಡ್ ಬ್ಯಾಕ್ ಇನ್ಫ್ರಾ ಕಂಪೆನಿ ರಸ್ತೆ ವಿನ್ಯಾಸ ಕೆಲಸ ನಡೆಸಲಿದೆ” ಎಂದು ಎನ್ ಎಚ್ 169ರ ಅಗಲೀಕರಣ ಪ್ರಾಜೆಕ್ಟ್ ನಿರ್ದೇಶಕ ಸೋಮಶೇಖರ ತಿಳಿಸಿದ್ದಾರೆ. ಮ್ಯಾಪಿನಲ್ಲಿ ಸಾಣೂರು, ತೋಡಾರು, ಮಿಜಾರು, ಎಡಪದವು ಮತ್ತು ಕುಡುಪುವಿನಲ್ಲಿ ರಾಷ್ಟ್ರೀಯ ಹೆದ್ದಾರಿ ಬದಲಿಸಲಾಗುತ್ತದೆ. ಗುರುಪುರ ಹೊಳೆಗೆ ಇನ್ನೊಂದು ಸೇತುವೆ ನಿರ್ಮಿಸುವ ಪ್ರಸ್ತಾವವೂ ಒಳಗೊಂಡಿದೆ.

ಮೊದಲಿಗೆ ಗುರುಪುರದ ರೋಸಾ ಮಿಸ್ತಿಕ ಶಾಲಾ ಆವರಣದಿಂದ ರಸ್ತೆ ಹಾದು ಹೋಗುವಂತೆ ಪ್ರಸ್ತಾವಿಸಲಾಗಿದ್ದರೂ, ಶಾಸಕ ಲೋಬೊ ಅಧಿಕಾರಿಗಳೊಂದಿಗೆ ಚರ್ಚಿಸಿದ್ದರಿಂದ ಸ್ವಲ್ಪ ಬದಲಾವಣೆಗೆ ಅವಕಾಶ ಸಿಕ್ಕಿದೆ ಎಂದು ಸೋಮಶೇಖರ ತಿಳಿಸಿದ್ದಾರೆ.

ಇನ್ಫ್ರಾ ಕಂಪೆನಿಯು ಇನ್ನೆರಡು ತಿಂಗಳಲ್ಲಿ ರಸ್ತೆ ನಿನ್ಯಾಸದ ವರದಿ ಎನ್ ಎಚ್ ಎ ಐ.ಗೆ ಸಲ್ಲಿಸಲಿದೆ. ಈ ವರದಿಗೆ ಡೀಸಿ ಒಪ್ಪಿಗೆ ಪಡೆಯಬೇಕಾಗುತ್ತದೆ. ಬಳಿಕ ಭೂಸ್ವಾಧೀನಕ್ಕೆ ಅಧಿಸೂಚನೆ ಜಾರಿಗೊಳ್ಳಲಿದೆ ಎಂದರು.

ಯೋಜನಯಡಿ ಕೈಕಂಬ ಮತ್ತು ಮೂಡಬಿದ್ರೆಯಲ್ಲಿ ಎರಡು ಬೈಪಾಸ್, ಎರಡು ಕಡೆ ಎರಡು ಓವರ್ ಬ್ರಿಡ್ಜ್ ಪ್ರಸ್ತಾವಿಸಲಾಗಿದೆ. ಅಲ್ಲದೆ ವಾಹನಗಳ ದಟ್ಟಣಿ ಇರುವಲ್ಲಿ 10 ಕೆಳ-ಸೇತುವೆ ಹಾಗೂ ವಾಹನಗಳ ಸಾಂದ್ರತೆ ಕಡಿಮೆ ಇರುವಲ್ಲಿ ಎಂಟು ಕೆಳ-ಸೇತುವೆ ನಿರ್ಮಿಸಲು ಯೋಜನೆಯಲ್ಲಿ ಪ್ರಸ್ತಾವಿಸಲಾಗಿದೆ ಎಂದು ಸೋಮಶೇಖರ್ ತಿಳಿಸಿದರು.

 

LEAVE A REPLY