ಮಂಗಳೂರು ಬಿಜೈ ಕೆಎಸ್ಸಾರ್ಟಿಸಿ ನಿಲ್ದಾಣದಲ್ಲಿ ಮೊಬೈಲ್ ಚಾರ್ಜ್ ನೆಪದಲ್ಲಿ ಹಗಲು ದರೋಡೆ

ಅಧಿಕಾರಿಗಳ ಕೃಪಾಕಟಾಕ್ಷದಲ್ಲಿ ಬೂತ್ ಮಾಲಕನ ಅವ್ಯವಹಾರ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮಂಗಳೂರು ವಿಭಾಗೀಯ ಡಿಪೋದಲ್ಲಿ ಮೊಬೈಲ್ ಚಾರ್ಜ್ ನೆಪದಲ್ಲಿ ಎಸ್‍ಡಿಟಿ ಬೂತ್ ಮಾಲಕನೊಬ್ಬ ಪ್ರಯಾಣಿಕರಿಂದ ಹಣ ವಸೂಲಿ ಮಾಡುತ್ತಾ ಹಗಲು ದರೋಡೆ ಮಾಡುತ್ತಿದ್ದಾನೆ ಎಂದು ಪ್ರಯಾಣಿಕರೊಬ್ಬರು ಆರೋಪಿಸಿದ್ದಾರೆ. ಇನ್ನೂ ಅಚ್ಚರಿಯ ಸಂಗತಿ ಅಂದ್ರೆ ಈ ವಿಚಾರ ಇಲ್ಲಿನ ಅಧಿಕಾರಿಗಳಿಗೆ ಗೊತ್ತಿದ್ದು, ಅವರ ಮಾರ್ಗದರ್ಶನದಲ್ಲೇ ಈ ಅವ್ಯವಹಾರ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೂಲತಃ ಕೊಳ್ಳೇಗಾಲದ ವಿನಯಕುಮಾರ್ ಉಡುಪಿಗೆ ತೆರಳಿ ವಾಪಾಸ್ ಊರಿಗೆ ತೆರಳಲು ಮಂಗಳೂರು ಬಿಜೈ ಕೆಎಸ್‍ಆರ್‍ಟಿಸಿ ನಿಲ್ದಾಣಕ್ಕೆ ಆಗಮಿಸಿದ್ದರು. ಈ ಸಂದರ್ಭ ಇವರ ಮೊಬೈಲ್ ಬ್ಯಾಟರಿ ಸಂಪೂರ್ಣ ಖಾಲಿಯಾಗಿತ್ತು. ಮತ್ತೆ ಚಾರ್ಜ್ ಮಾಡಲೆಂದು ನಿಲ್ದಾಣದಲ್ಲಿ ಹುಡುಕಿದಾಗ ಎಲ್ಲೂ ಮೊಬೈಲ್ ಚಾರ್ಜರ್ ಪಾಯಿಂಟ್ ಕಂಡು ಬರಲಿಲ್ಲ. ಕೂಡಲೇ ಅವರು ನಿಲ್ದಾಣದ ಅಧಿಕಾರಿಗಳ ಬಳಿಗೆ ತೆರಳಿಈ ಬಗ್ಗೆ ವಿಚಾರಿಸಿದ್ದಾರೆ. ಆಗ ಅಲ್ಲಿದ್ದ ಅಧಿಕಾರಿಗಳಾದ ಸತ್ಯನಾರಾಯಣ ಕೆದ್ಲಾಯ ಮತ್ತು ನಾರಾಯಣ ಎಂಬವರು ಕ್ಯಾಂಟೀನ್ ಪಕ್ಕದಲ್ಲಿರುವ ಎಸ್‍ಡಿಟಿ ಬೂತ್‍ನಲ್ಲಿ ಮೊಬೈಲ್ ಚಾರ್ಜರ್ ಮಾಡಬಹುದಾಗಿದೆ ಎಂದು ಹೇಳಿ ಅಲ್ಲಿಗೆ ಕಳುಹಿಸಿದ್ದಾರೆ.

ಅದರಂತೆ ವಿನಯ್ ಅಲ್ಲಿಗೆ ಬಂದಾಗ ಎಸ್‍ಡಿಟಿ ಬೂತ್‍ನಲ್ಲಿ 10 ಪಾಯಿಂಟ್‍ಗಳಿದ್ದವು. ಆದರೆ ಅಲ್ಲಿ ಒಂದು ಗಂಟೆ ಮೊಬೈಲ್ ಚಾರ್ಜ್ ಮಾಡಲು 10 ರೂಪಾಯಿಗಳನ್ನು ಪಡೆದುಕೊಳ್ಳಲಾಗುತ್ತಿತ್ತು. ಇದನ್ನು ಕಂಡು ವಿನಯ್ ಅವರು ಬಸ್ಸು ನಿಲ್ದಾಣಗಳಲ್ಲಿ ಚಾರ್ಜರ್ ಉಚಿತವಾಗಿ ಇಡಬೇಕಲ್ಲವೇ ಇದು ಸರಿಯೇ..? ಎಂದು ಅಂಗಡಿಯವರನ್ನು ಪ್ರಶ್ನಿಸಿದ್ದಾರೆ. ಅದಾಗಲೇ ಅಲ್ಲಿ 5,6 ಮೊಬೈಲ್‍ಗಳನ್ನು ಚಾರ್ಜ್‍ಗೆ ಇಡಲಾಗಿತ್ತು.

ಬೂತ್ ಮಾಲಕ ಉಡಾಫೆಯಾಗಿ ಮಾತನಾಡಿದ್ದು, `ಚಾರ್ಜ್ ಬೇಕಾದರೆ ಇಡಬಹುದು. 10 ರೂಪಾಯಿ ಆಗುತ್ತದೆ’ ಎಂದು ಹೇಳಿದ್ದಾರೆ.

ಇದನ್ನು ಮತ್ತೆ ಅಧಿಕಾರಿಗಳ ಗಮನಕ್ಕೆ ತಂದಾಗ ಅವರು ಏನೂ ಉತ್ತರ ನೀಡದೇ ಮೌನಕ್ಕೆ ಶರಣಾಗಿದ್ದಾರೆ. ಸರಕಾರಿ ಅಧಿಕಾರಿಗಳ ಕೃಪಾಕಟಾಕ್ಷದಡಿ ಬೂತ್ ಮಾಲಕ ಅನಧಿಕೃತವಾಗಿ ಈ ರೀತಿ ಬಡ ಪ್ರಯಾಣಿಕರಿಂದ ದುಡ್ಡು ವಸೂಲಿ ಮಾಡುತ್ತಿರುವುದರ ಬಗ್ಗೆ ವಿನಯಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದರಲ್ಲಿ ನಿಲ್ದಾಣದ ಅಧಿಕಾರಿಗಳೂ ಶಾಮೀಲಾಗಿದ್ದು, ಅವರು ಕೂಡಾ ಪರ್ಸಂಟೇಜ್ ಪಡೆದುಕೊಳ್ಳುತ್ತಿದ್ದಾರೆ. ಸರಕಾರಿ ಬಸ್ಸು ನಿಲ್ದಾಣದಲ್ಲಿ ಎಲ್ಲಾ ಕಡೆಗಳಲ್ಲೂ ಉಚಿತವಾಗಿ ವೈಫೈ, ಮೊಬೈಲ್ ಚಾರ್ಜರ್ ಇರಿಸುವ ವ್ಯವಸ್ಥೆ ಇರುವಾಗ, ಇಲ್ಲಿ ಇರುವ ಸೌಲಭ್ಯಗಳನ್ನು ಅಧಿಕಾರಿಗಳೇ ಹಾಳುಗೆಡವಿ, ಖಾಸಗಿ ವ್ಯಕ್ತಿಗೆ ದುಡ್ಡು ಮಾಡಲು ಅನುಕೂಲ ಮಾಡಿಕೊಟ್ಟಿದ್ದಾರೆ ಎಂದು ವಿನಯಕುಮಾರ್ ಆರೋಪಿಸಿದ್ದಾರೆ. ಅಧಿಕಾರಿಗಳಲ್ಲಿ ಪ್ರಶ್ನಿಸಿದರೆ ಅವರು ಕೂಡಾ ಸರಿಯಾಗಿ ಉತ್ತರ ನೀಡುತ್ತಿಲ್ಲ ಎಂದಿದ್ದಾರೆ. ಇದೀಗ ಈ ಬಗ್ಗೆ ವಿನಯಕುಮಾರ್ ಮೇಲಧಿಕಾರಿಗಳಿಗೂ ದೂರು ನೀಡಿದ್ದಾರೆ.

 

LEAVE A REPLY