ಮಾರ್ಚಿನಿಂದ ಬೆಂಗಳೂರಿಗೆ ಹಗಲು ರೈಲು

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಉಡುಪಿಯ ರೈಲು ಯಾತ್ರಿ ಸಂಘದ ಹೋರಾಟದ ಫಲವಾಗಿ ಮಂಗಳೂರಿನಿಂದ ಬೆಂಗಳೂರಿಗೆ ಹಾಸನ, ಮೈಸೂರು ಮೂಲಕ ಹಗಲು ಹೊತ್ತಿನ ರೈಲು ಸಂಚಾರ ಮಾರ್ಚಿ ತಿಂಗಳಲ್ಲಿ ಆರಂಭವಾಗಲಿದೆ.

2014ರ ರೈಲ್ವೇ ಬಜೆಟಿನಲ್ಲಿ ಈ ಡೇ ರೈಲು ಆರಂಭಿಸುವ ಬಗ್ಗೆ ಘೋಷಣೆ ಮಾಡಲಾಗಿತ್ತಾದರೂ, ಇಲ್ಲಿನ ಜನಪ್ರತಿನಿಧಿಗಳ ನಿರಾಸಕ್ತಿ, ಜನವಿರೋಧಿ ಧೋರಣೆ ಮತ್ತು ಖಾಸಗಿ ಬಸ್ ಲಾಬಿಯೊಂದಿಗಿನ ಅನೈತಿಕ ಮೈತ್ರಿಯಿಂದ ಹೊಸ ರೈಲು ಆರಂಭ ಆಗಿರಲಿಲ್ಲ.

ಕೇಂದ್ರ ಸರಕಾರ ಮಾಡಿರುವ ಘೋಷಣೆ ಅನುಷ್ಠಾನ ಆಗದಿರುವುದನ್ನು ಗಮನಿಸಿದ ಉಡುಪಿಯ ರೈಲು ಯಾತ್ರಿಕರ ಸಂಘದ ಅಧ್ಯಕ್ಷ ಆರ್ ಎಲ್ ಡಯಾಸ್ ಅವರು ಹೈರ್ಕೋಟಿಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ ಪರಿಣಾಮ, ನ್ಯಾಯಾಲಯ ನೀಡಿರುವ ಎಚ್ಚರಿಕೆ ಮೇರೆಗೆ ರೈಲ್ವೇ ಇಲಾಖೆ ಮಾರ್ಚ್ ತಿಂಗಳಲ್ಲಿ ರೈಲು ಆರಂಭಿಸುವುದಾಗಿ ಪ್ರಕಟಿಸಿದೆ.

ಬೆಂಗಳೂರಿನಿಂದ ಬೆಳಗ್ಗೆ  8.30ಕ್ಕೆ ರೈಲು ಹೊರಡಲಿದ್ದು, ರಾತ್ರಿ 9.15 ಗಂಟೆಗೆ ಮಂಗಳೂರು ತಲುಪಲಿದೆ. ಅದೇ ರೀತಿ ಮಂಗಳೂರಿನಿಂದ ಬೆಳಗ್ಗೆ 6.30ಕ್ಕೆ ಹೊರಟು 7.30ಕ್ಕೆ ಬೆಂಗಳೂರು ತಲುಪಲಿದೆ.

ಅರಸೀಕೆರೆ-ತುಮಕೂರು ಮೂಲಕ ಚಲಿಸುವ ಈಗಿರುವ ಏಕೈಕ ಹಗಲು ರೈಲು ವಾರದಲ್ಲಿ ಕೇವಲ ಮೂರು ದಿನ ಮಾತ್ರ ಪ್ರಯಾಣಿಕರಿಗೆ ಲಭ್ಯವಿದೆ. ಹೊಸ ರೈಲು ಕೂಡ ಹದಿಮೂರು ಗಂಟೆಗಳ ಸುದೀರ್ಘ ಸಮಯ ತೆಗೆದುಕೊಳ್ಳುವುದು ಸಾರ್ವಜನಿಕರಲ್ಲಿ ಬೇಸರ ಮೂಡಿಸಿದೆ.

ಖಾಸಗಿ ಮತ್ತು ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ಸುಗಳು ರಾತ್ರಿ ವೇಳೆ ಕೇವಲ ಎಂಟು ಗಂಟೆಯಲ್ಲಿ ಇವೆರಡು ನಗರಗಳನ್ನು ಸಂಪರ್ಕಿಸುತ್ತವೆ.

ಪ್ರಧಾನಿ ನರೇಂದ್ರ ಮೋದಿ ಸೂಪರ್ ಫಾಸ್ಟ್ ರೈಲು ಯೋಜನೆಗಳ ಬಗ್ಗೆ ಮಾತನಾಡುತ್ತಿದ್ದು, ಸ್ಥಳೀಯ ಸಂಸದ ನಳಿನ್ ಕುಮಾರ್ ಕಟೀಲ್ ಸೂಪರ್ ಫಾಸ್ಟ್ ಅಲ್ಲದಿದ್ದರೂ ಕನಿಷ್ಟ ಪ್ರಯಾಣಿಕರಿಗೆ ವಿಳಂಬವಾಗದಂತೆ ಸಂಚರಿಸುವ ರೈಲುಗಳನ್ನು ಆರಂಭಿಸಲು ಪ್ರಯತ್ನ ಮಾಡುವರೇ ಎನ್ನುವುದು ಕರಾವಳಿ ನಾಗರಿಕರ ಮುಂದಿನ ಪ್ರಶ್ನೆ.