ಉಡುಪಿ ಬಸ್ ನಿಲ್ದಾಣದಲ್ಲಿ ದಾವಣಗೆರೆ ಮಹಿಳೆ ಪರ್ಸಿಂದ ಆಭರಣ, ನಗದು ಕಳವು

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಉಡುಪಿ : ಮದುವೆ ಕಾರ್ಯಕ್ರಮಕ್ಕೆ ಉಡುಪಿಗೆ ಬಂದಿದ್ದ ದಾವಣಗೆರೆ ಜಿಲ್ಲೆ ಮೂಲದ ಮಹಿಳೆಯೊಬ್ಬರು ಶುಕ್ರವಾರ ಮಧ್ಯಾಹ್ನ ಊರಿಗೆ ಹೋಗಲು ನಗರದ ಸರ್ವೀಸ್ ಬಸ್ ನಿಲ್ದಾಣಕ್ಕೆ ಬಂದಿದ್ದ ವೇಳೆ ಆಕೆಯ ವ್ಯಾನಿಟಿ ಬ್ಯಾಗಿನಲ್ಲಿದ್ದ 2 ಪವನ್ ಚಿನ್ನಾಭರಣ ಹಾಗೂ 1,500 ರೂಪಾಯಿ ನಗದನ್ನು ಕಳ್ಳರು ಕಳವುಗೈದಿದ್ದಾರೆ.

ಪ್ರಕಾಶ್ ಕೆ ಎಂಬವರ ಹೆಂಡತಿ ಉದಯ ಕುಮಾರಿ ಕೆ ಬಿ ಎಂಬಾಕೆಯ ಚಿನ್ನಾಭರಣ ಮತ್ತು ನಗದನ್ನು ಕಳವುಗೈಯ್ಯಲಾಗಿದೆ. ಉದಯ ಕುಮಾರಿಯು ಶುಕ್ರವಾರ ಉಡುಪಿ ನಗರದ ಕಿನ್ನಿಮುಲ್ಕಿ ಬಳಿಯ ಗೋವಿಂದ ಕಲ್ಯಾಣ ಮಂಟಪದಲ್ಲಿ ತನ್ನ ಅಕ್ಕನ ಮಗನ ಮದುವೆಗೆ ಬಂದಿದ್ದು, ಮಧ್ಯಾಹ್ನ ಊಟ ಮುಗಿಸಿ ದಾವಣಗೆರೆಗೆ ವಾಪಾಸು ಹೋಗಲು ತನ್ನ ತಂಗಿ ಮತ್ತು ಅಕ್ಕನ ಮಗನೊಂದಿಗೆ ಆಟೋರಿಕ್ಷಾದಲ್ಲಿ ಉಡುಪಿ ಸರ್ವೀಸ್ ಬಸ್ ನಿಲ್ದಾಣಕ್ಕೆ ಬಂದಿದ್ದಾರೆ. ಬಸ್ ನಿಲ್ದಾಣದಲ್ಲಿ ಮಧ್ಯಾಹ್ನ 2.30 ಗಂಟೆ ಹೊತ್ತಿಗೆ ಶಿವಮೊಗ್ಗಕ್ಕೆ ಹೋಗುವ ಹನುಮಾನ್ ಬಸ್ಸಿಗೆ ಹತ್ತಿದ್ದಾರೆ. ಬಸ್ಸಿನಲ್ಲಿ ಟಿಕೆಟ್ ತೆಗೆಯಲು ಉದಯಕುಮಾರಿ ವ್ಯಾನಿಟಿ ಬ್ಯಾಗಿನಿಂದ ಹಣ ತೆಗೆಯಲು ನೋಡಿದಾಗ ವ್ಯಾನಿಟಿ ಬ್ಯಾಗಿನ ಜಿಪ್ ತೆರೆದಿದೆ. ವ್ಯಾನಿಟಿ ಬ್ಯಾಗಿನೊಳಗಿಟ್ಟಿದ್ದ ಮತ್ತೊಂದು ಪರ್ಸ್ ನಾಪತ್ತೆಯಾಗಿದೆ. ಪರ್ಸ್‍ನಲ್ಲಿದ್ದ 40 ಸಾವಿರ ಮೌಲ್ಯದ ಎರಡು ಪವನ್ ಚಿನ್ನದ ಚೈನ್ ಹಾಗೂ 1,500 ರೂಪಾಯಿಯನ್ನು ಕಳ್ಳರು ಕಳವುಗೈದಿದ್ದಾರೆ ಎಂದು ದೂರಲಾಗಿದೆ.