ರೀಮೇಕ್ ಚಿತ್ರಕ್ಕೆ `ನೋ’ ಎಂದ ದರ್ಶನ್

ಕನ್ನಡಕ್ಕೆ ಬೇರೆ ಭಾಷೆಗಳ ಚಿತ್ರ ಡಬ್ಬಿಂಗ್ ಆಗುವುದು ಬೇಡ ಎಂದು ಕೆಲವು ಕನ್ನಡದ ನಟರು ಬೊಬ್ಬೆ ಹೊಡೆಯುತ್ತಿರುವ ಈ ಸಂದರ್ಭದಲ್ಲಿಯೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬೇರೆ ಭಾಷೆಗಳ ಚಿತ್ರಗಳು ಕನ್ನಡಕ್ಕೆ ರಿಮೇಕ್ ಆಗುತ್ತಿರುವ ಬಗ್ಗೆಯೂ ವಿರೋಧ ವ್ಯಕ್ತಪಡಿಸಿದ್ದಾನೆ. ಇಲ್ಲಿಯವರೆಗೆ ಕೆಲವು ರೀಮೇಕ್ ಚಿತ್ರಗಳಲ್ಲಿ ದರ್ಶನ್ ನಟಿಸಿದ್ದರೂ ಈಗ ದರ್ಶನ್ ರೀಮೇಕ್ ಚಿತ್ರದಲ್ಲಿ ನಟಿಸಲು `ನೋ’ ಎಂದಿದ್ದಾನೆ ಎನ್ನುವ ಸುದ್ದಿಯೀಗ ಗಾಂಧೀನಗರದಲ್ಲಿ ಹರಿದಾಡುತ್ತಿದೆ.

ಈ ನಡುವೆ ಸ್ವಮೇಕ್ ಚಿತ್ರಗಳಲ್ಲಿಯೇ ದರ್ಶನ್ ಹೆಚ್ಚಾಗಿ ನಟಿಸುತ್ತಿದ್ದಾನೆ. ನಿರ್ದೇಶಕ ತರುಣ್ ಸುಧೀರ್ ತಮಿಳಿನ `ವೀರಂ’ ಚಿತ್ರದ ಕನ್ನಡ ಅವತರಣಿಕೆಯನ್ನು ನಿರ್ದೇಶಿಸಲು ಬಯಸಿದ್ದು ಅದರಲ್ಲಿ ಈ ಮೊದಲು ದರ್ಶನ್ ಅಭಿನಯಿಸುತ್ತಾನೆ ಎನ್ನುವ ಸುದ್ದಿ ಇತ್ತು. ಆದರೆ ತರುಣ್ ಸುಧೀರಗೆ ತಮಿಳಿನ `ವೀರಂ’ ಚಿತ್ರದ ರೀಮೇಕ್ ಪ್ಲಾನ್ ಕೈಬಿಟ್ಟು, ಸ್ವಂತ ಕಥೆ ಬರೆಯುವಂತೆ ದರ್ಶನ್ ಸೂಚಿಸಿದ್ದಾನಂತೆ. ಹಾಗಾಗಿ ದರ್ಶನ್‍ಗಾಗಿ ತರುಣ್ ಬೇರೆಯದೇ ಸ್ಕ್ರಿಪ್ಟ್ ಬರೆಯುತ್ತಿದ್ದಾರೆ ಎನ್ನುವ ಸುದ್ದಿ ಇದೆ. ಸದ್ಯ ದರ್ಶನ್ `ತಾರಕ್’ ಚಿತ್ರದ ಶೂಟಿಂಗಿನಲ್ಲಿ ತೊಡಗಿಕೊಂಡಿದ್ದಾನೆ. ಅದಾದ ಬಳಿಕ 50ನೇ ಸಿನಿಮಾ `ಕುರುಕ್ಷೇತ್ರ’ವಾಗಿದ್ದು ನಂತರ ತರುಣ್ ಸುಧೀರ್ ಚಿತ್ರದಲ್ಲಿ ದರ್ಶನ್ ನಟಿಸುತ್ತಾನೆ ಎನ್ನಲಾಗಿದೆ.