ರಾಜ್ಯ ಹೆದ್ದಾರಿ 88ರಲ್ಲಿ ಅಪಾಯಕಾರಿ ಮರಗಳು

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ರಾಜ್ಯ ಹೆದ್ದಾರಿ 88ರ ಮೈಸೂರು-ಬಂಟ್ವಾಳ ರಸ್ತೆ ಬದಿಯಲ್ಲಿ ಹಲವಾರು ಮರಗಳು ರಸ್ತೆಗೆ ವಾಲಿಕೊಂಡಿದ್ದು, ರಸ್ತೆ ಬಳಕೆದಾರರು ಅಪಾಯದ ಭೀತಿಯಲ್ಲಿ ಚಲಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಬಿಡುವಿಲ್ಲದೆ ವಾಹನಗಳು ಸಂಚರಿಸುವ ಈ ರಸ್ತೆಯಲ್ಲಿ ಮರಗಳು ವಾಲಿಕೊಂಡಿದ್ದರೂ ಕೆಲ ಮರಗಳು ಮಾರ್ಗಕ್ಕೆ ಬಿದ್ದಿದ್ದರೂ ಅರಣ್ಯ ಇಲಾಖೆಯಾಗಲೀ ಅಥವಾ ಯಾವುದೇ ಅಧಿಕಾರಿಗಳಾಗಲೀ ಇದರತ್ತ ಗಮನ ಹರಿಸಿಲ್ಲ. ರಸ್ತೆ ಬಳಕೆದಾರರು ಅದರಲ್ಲಿಯೂ ಮುಖ್ಯವಾಗಿ ಮಳೆಗಾಲದಲ್ಲಿ ಜೀವಭಯದಲ್ಲಿ ಚಲಿಸಬೇಕಾದ ದುಃಸ್ಥಿತಿ ಎದುರಾಗಿದೆ.

ಈ ಸಂದರ್ಭ ಕಳೆದ ವರ್ಷ ಸುಳ್ಯ ತಾಲೂಕಿನ ಪೈಚಾರಿನ ಓಡಬಾೈ ಎಂಬಲ್ಲಿ ಲಾರಿಯೊಂದರ ಮೇಲೆ ಬೃಹತ್ ಮರವೊಂದು ಬಿದ್ದು, ಚಾಲಕ ಮುಂಡೂರು ಗ್ರಾಮದ ನೆಟ್ಟಣಿಗೆಯ 38 ವರ್ಷದ ಮಹಮ್ಮದ್ ಕುಂಞ ಎಂಬವರು ಸ್ಥಳದಲ್ಲಿಯೇ ಮೃತಪಟ್ಟ ದುರಂತ ಘಟನೆಯನ್ನು ನೆನಪಿಸುತ್ತದೆ. ಈ ಘಟನೆಯು ರಸ್ತೆ ಬದಿಯಲ್ಲಿ ಅಪಾಯಕಾರಿ ಸ್ಥಿತಿಯಲ್ಲಿರುವ ಮರಗಳ ರೆಂಬೆ ಕೊಂಬೆಗಳನ್ನು ಕತ್ತರಿಸಬೇಕಾದ ಅವಶ್ಯಕತೆಯ ಬಗ್ಗೆ ತಿಳಿಸುತ್ತದೆ.

ಇಷ್ಟಾದರೂ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸ್ಥಳೀಯ ಆಡಳಿತ ಕಳೆದ ಘಟನೆಗಳಿಂದ ಪಾಠ ಕಲಿತಂತೆ ಕಂಡುಬಂದಿಲ್ಲ. ಇಂದಿಗೂ ಹಲವಾರು ಮರಗಳು ಅಪಾಯಕಾರಿ ಪರಿಸ್ಥಿತಿಯಲ್ಲಿ ರಸ್ತೆಗೆ ವಾಲಿಕೊಂಡಿರುವುದು ಕಂಡುಬರುತ್ತವೆ.

ಮರಗಳು ವಿದ್ಯುತ್ ತಂತಿಯ ಮೇಲೆ ಬೀಳುವುದರಿಂದ ವಿದ್ಯುತ್ ಸಮಸ್ಯೆಗಳು ಕೂಡ ಮಳೆಗಾಲದಲ್ಲಿ ಸರ್ವೇಸಾಮಾನ್ಯ. ಮಳೆಗಾಲ ಆರಂಭಕ್ಕೆ ಮುನ್ನ ಮೆಸ್ಕಾಂ ಅಧಿಕಾರಿಗಳು ಮುನ್ನೆಚ್ಚರಿಕಾ ಕ್ರಮವಾಗಿ ವಿದ್ಯುತ್ ತಂತಿಗಳಿಗೆ ವಾಲಿಕೊಂಡಿರುವ ಮರದ ಕೊಂಬೆಗಳನ್ನು ಕಡಿದು ಸುಗಮಗೊಳಿಸಿದರೆ ಇಂತಹ ಸಮಸ್ಯೆಗಳನ್ನು ಕಡಿಮೆಗೊಳಿಸಬಹುದಾಗಿದೆ.

ಅಪಾಯಕಾರಿ ಸ್ಥಿತಿಯಲ್ಲಿರುವ ಮರಗಳ ಬಗ್ಗೆ ಜನಸಾಮಾನ್ಯರು ಸಮೀಪದ ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದು ಅರಣ್ಯ ಡೆಪ್ಯುಟಿ ಕನ್ಸರ್ವೇಟರ್ ಕೆ ಟಿ ಹನುಮಂತಪ್ಪ ಹೇಳಿದ್ದಾರೆ.