ದೇಶದ ಅಪಾಯಕಾರಿ ಸ್ಪೀಡ್ ಬ್ರೇಕರುಗಳಿಗೆ ವರ್ಷಕ್ಕೆ 10,000ಕ್ಕೂ ಅಧಿಕ ಪ್ರಾಣ ಬಲಿ

ಸಾಂದರ್ಭಿಕ ಚಿತ್ರ

ಭಾರತದ ರಸ್ತೆಗಳಲ್ಲಿ ವಾಹನ ಚಲಾಯಿಸಿದ ಯಾರಿಗೇ ಆದರೂ ಇದು ಗೊತ್ತಿರುವಂತಹ ವಿಷಯ –  ಈ ಉಪಖಂಡದ ರಸ್ತೆಗಳಲ್ಲಿರುವ ವೇಗ ನಿಯಂತ್ರಕಗಳು ಅಥವಾ ಸ್ಪೀಡ್ ಬ್ರೇಕರುಗಳು ಅತ್ಯಂತ ಮಾರಣಾಂತಿಕ. ಸಾಮಾನ್ಯವಾಗಿ ಈ ಸ್ಪೀಡ್ ಬ್ರೇಕರುಗಳಿಗೆ ಪ್ರತ್ಯೇಕ ಬಣ್ಣ ಬಳಿಯಲಾಗುವುದಿಲ್ಲವಾದ ಕಾರಣ ಹಲವಾರು ಬಾರಿ ಆ ರಸ್ತೆಯಲ್ಲಿ ಸಾಗುವ ಹೊಸಬರಿಗೆ ಅವುಗಳ ಉಪಸ್ಥಿತಿಯ ಬಗ್ಗೆ ತಿಳಿಯದೆಯೇ ಅಪಘಾತಗಳಾಗುವ ಸಂಭವ ಹೆಚ್ಚು.  ಅನೇಕ ಬಾರಿ ಇವುಗಳು ಸುಲಭವಾಗಿ ವಾಹನಿಗರ ಮೂಳೆ ಮುರಿಯಬಹುದು ಅಥವಾ ಕಾರುಗಳ ಚೇಸಿಸ್ ಹಾನಿಗೊಳಿಸಬಹುದು. ಪ್ರತಿ ವರ್ಷ ಭಾರತದಲ್ಲಿ ಈ ಸ್ಪೀಡ್ ಬ್ರೇಕರುಗಳಿಂದಾಗಿಯೇ 10,000ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ದೇಶದ ರಸ್ತೆಗಳು ಈಗಾಗಲೇ ಪ್ರತಿ ದಿನ 400 ಮಂದಿಯ ಪ್ರಾಣ ಬಲಿ ಪಡೆಯುತ್ತಿದೆ. ಇನ್ನೊಂದು ವಿಧದಲ್ಲಿ ಹೇಳುವುದಾದರೆ ಪ್ರತಿ ನಾಲ್ಕು ನಿಮಿಷಕ್ಕೆ ಒಬ್ಬರು ರಸ್ತೆ ಅಪಘಾತದಲ್ಲಿ ಸಾಯುತ್ತಿದ್ದಾರೆ.

ಇತ್ತೀಚೆಗೆ ಸಂಸತ್ತಿನಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುವ ವೇಳೆ ರಸ್ತೆ ಸಾರಿಗೆ ಸಹಾಯಕ ಸಚಿವ ಪೊನ್ ರಾಧಾಕೃಷ್ಣನ್  ಅವರು ಸ್ಪೀಡ್ ಬ್ರೇಕರುಗಳಿಂದಾಗಿ ಉಂಟಾಗಿರುವ ಅಪಘಾತಗಳ ಅಂಕಿ ಅಂಶ ಒದಗಿಸಿದ್ದಾರೆ. ಸರಕಾರಿ ದಾಖಲೆಗಳ ಪ್ರಕಾರ 2015ರಲ್ಲಿ ಸ್ಪೀಡ್ ಬ್ರೇಕರುಗಳಿಂದಾಗಿ  11,084 ಜನರು ಸಾವನ್ನಪ್ಪಿದ್ದರೆ, 2014ರಲ್ಲಿ 11,008 ಜರು ಪ್ರಾಣ ಕಳೆದುಕೊಂಡಿದ್ದರು. ಸ್ಪೀಡ್ ಬ್ರೇಕರುಗಳಿಂದಾಗಿ ದೇಶದ ಉದ್ದಗಲಕ್ಕೂ ಹಲವಾರು ಅಪಘಾತಗಳು ನಡೆಯುತ್ತಲೇ ಇರುತ್ತವೆ.

ತಮ್ಮ ಸಚಿವಾಲಯವು ವೇಗ ತಡೆಗಳ ನಿರ್ಮಾಣವನ್ನು ಉತ್ತೇಜಿಸುತ್ತಿಲ್ಲವಾದರೂ ಹಲವು ಬಾರಿ ಸ್ಥಳೀಯರೇ ಅಪಘಾತಗಳ ಹೆಚ್ಚಳದಿಂದ ಕಂಗೆಟ್ಟು ವೇಗ ನಿಯಂತ್ರಕಗಳನ್ನು ತಾವಾಗಿಯೇ ನಿರ್ಮಿಸುತ್ತಾರೆ. ಆದರೆ ಸಂಬಂಧಪಟ್ಟ ಪ್ರಾಧಿಕಾರಗಳಿಗೆ ಇದು ತಿಳಿದ ಕೂಡಲೇ ಅವುಗಳನ್ನು ತೆಗೆದು ಹಾಕಲಾಗುತ್ತದೆ ಎಂದು ಅವರು ವಿವರಿಸಿದ್ದಾರೆ.

ಆದರೆ ವೈಜ್ಞಾನಿಕವಾಗಿ ವೇಗ ತಡೆಗಳನ್ನು ನಿರ್ಮಿಸುವ ಬಗ್ಗೆ, ಎಚ್ಚರಿಕೆ ಫಲಕ ಅಳವಡಿಸುವ ಬಗ್ಗೆ ಪ್ರಾಧಿಕಾರಗಳು ಏಕೆ ಯೋಚಿಸುತ್ತಿಲ್ಲವೆಂಬ ಪ್ರಶ್ನೆಗೆ ಸಚಿವರು “ಕೇಂದ್ರ ರಸ್ತೆ ಸಂಶೋಧನಾ ಕೇಂದ್ರವು ಈ ನಿಟ್ಟಿನಲ್ಲಿ ಯಾವುದೇ ಮಾನದಂಡವನ್ನು ಪ್ರಸ್ತುತಪಡಿಸಿಲ್ಲ” ಎಂಬ ಉತ್ತರವನ್ನು ನೀಡಿದ್ದಾರೆ.

ಸರಕಾರ ಈ ವೇಗ ತಡೆಗಳ ಬಗ್ಗೆ ದೃಢ ನಿಲುವಿನಿಂದ ಏನಾದರೂ ಕ್ರಮ ಕೈಗೊಳ್ಳುವ ತನಕ ರಸ್ತೆಗಳಲ್ಲಿ ರಕ್ತದೋಕುಳಿ ಹರಿಯುವುದು ನಿಲ್ಲದು ಎಂಬುದು ಕಟು ವಾಸ್ತವ.