ಕದ್ಕಾರ್ ಜಂಕ್ಷನಲ್ಲಿರುವ ಅಪಾಯಕಾರಿ ವಿದ್ಯುತ್ ಕಂಬದಿಂದ ಸಂಚಾರಕ್ಕೆ ಅಡ್ಡಿ

ಕದ್ಕಾರ್ ಜಂಕ್ಷನಲ್ಲಿ ಅಪಾಯಕಾರಿ ವಿದ್ಯುತ್ ಕಂಬ

ನಮ್ಮ ಪ್ರತಿನಿಧಿ ವರದಿ

ವಿಟ್ಲ : ನಾರ್ಶ-ಸೆರ್ಕಳ ಸಂಪರ್ಕ ರಸ್ತೆಯ ಅಪಾಯಕಾರಿ ತಿರುವಿನಲ್ಲಿ ಅಪಘಾತಕ್ಕೆ ಕಾರಣವಾಗುತ್ತಿರುವ ವಿದ್ಯುತ್ ಕಂಬವನ್ನು ಸ್ಥಳಾಂತರಿಸುವಂತೆ ಜನ ಒತ್ತಾಯಿಸಿದ್ದಾರೆ.

ಕುಡ್ತಮುಗೇರು-ನಾರ್ಶ ಸಂಪರ್ಕ ರಸ್ತೆಯ ಸೆರ್ಕಳ ಕದ್ಕಾರ್ ಎಂಬಲ್ಲಿ ಮೂರು ರಸ್ತೆಗಳು ಕವಲೊಡೆಯುವ ತೀರಾ ಅಪಾಯಕಾರಿ ತಿರುವಿನಲ್ಲಿ ವಿದ್ಯುತ್ ಕಂಬವೊಂದು ದುರಂತಗಳಿಗೆ ಕಾರಣವಾಗಿದೆ. ಪಾಣೆಮಂಗಳೂರು ಮೆಸ್ಕಾಂ ವಿಭಾಗಕ್ಕೆ ಸೇರಿರುವ ಈ ಸ್ಥಳದಲ್ಲಿ ಅಗಲ ಕಿರಿದಾದ ರಸ್ತೆಯಿದ್ದ ಸಂದರ್ಭ ವಿದ್ಯುತ್ ಕಂಬ ಹಾಕಲಾಗಿತ್ತು. ಆದರೆ ಇದೀಗ ರಸ್ತೆ ಅಗಲೀಕರಣವಾಗಿದ್ದ ಕಾರಣ ರಸ್ತೆ ತಿರುವಿನಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ವಿದ್ಯುತ್ ಕಂಬ ಅಡ್ಡಿಯಾಗುತ್ತಿದೆ. ಶಾಸಕರ ಮುತುವರ್ಜಿಯಿಂದಾಗಿ ಎರಡು ವರ್ಷಗಳಿಂದ ಈ ರಸ್ತೆ ಮೂಲಕ ಸರಕಾರಿ ಬಸ್ ಕೂಡ ಓಡಾಟ ನಡೆಸುತ್ತಿದೆ. ಅಲ್ಲದೇ ಮೂರ್ನಾಲ್ಕು ಶಾಲಾ ಬಸ್ಸುಗಳು, ಹಲವಾರು ಖಾಸಗಿ ವಾಹನಗಳು ಕೂಡಾ ಈ ರಸ್ತೆ ಮೂಲಕ ಪ್ರತಿನಿತ್ಯ ಸಂಚರಿಸುತ್ತಿವೆ. ಆದರೆ ವಾಹನಗಳ ಸುಗಮ ಸಂಚಾರಕ್ಕೆ ರಸ್ತೆ ತಿರುವಿನಲ್ಲಿರುವ ವಿದ್ಯುತ್ ಕಂಬ ಅಡ್ಡಿಯಾಗುತ್ತಿದ್ದು, ಈಗಾಗಲೇ ಮೂರ್ನಾಲ್ಕು ವಾಹನಗಳು ಇಲ್ಲಿನ ವಿದ್ಯುತ್ ಕಂಬದಿಂದಾಗಿ ತೊಂದರೆಗೆ ಸಿಲುಕಿವೆ. ಮಂಗಳವಾರ ಸಂಜೆ ಲಾರಿಯೊಂದು ರಸ್ತೆ ತಿರುವಿನಲ್ಲಿ ಸಂಚರಿಸುತ್ತಿದ್ದಾಗ ವಿದ್ಯುತ್ ಕಂಬ ಅಡ್ಡಿಯಾದ ಪರಿಣಾಮ ಭಾರೀ ಅನಾಹುತವೊಂದು ಸಂಭವಿಸುತ್ತಿತ್ತು. ಆದರೆ ಅಪಾಯವನ್ನರಿತ ಚಾಲಕ ತಕ್ಷಣವೇ ವಾಹನವನ್ನು ನಿಲ್ಲಿಸಿದ್ದು, ಬಳಿಕ ಸ್ಥಳೀಯರೆಲ್ಲ ಜಮಾಯಿಸಿ ಜೆಸಿಬಿ ಯಂತ್ರದ ಮೂಲಕ ಲಾರಿಯನ್ನು ರಸ್ತೆ ಪಕ್ಕಕ್ಕೆ ಎಳೆದು ಸಂಚಾರ ಆರಂಭಿಸುವಂತಾಗಿದೆ.

11vittla2

ತೀರಾ ಇಕ್ಕಟ್ಟಾದ ರಸ್ತೆಯಲ್ಲಿ ಹಾಕಲಾಗಿದ್ದ ವಿದ್ಯುತ್ ಕಂಬದ ಬಗ್ಗೆ ಈ ಭಾಗದ ನಾಗರಿಕರು ಇಲ್ಲಿನ ಮೆಸ್ಕಾಂ ಸಿಬ್ಬಂದಿಗೆ ಮನವರಿಕೆ ಮಾಡಿದ್ದಾರೆ. ಆದರೆ ಈವರೆಗೂ ಯಾವುದೇ ಪ್ರಯೋಜನ ಕಂಡಿಲ್ಲದ ಕಾರಣ ಇನ್ನಾದರೂ ವಾಹನಗಳ ಸುಗಮ ಸಂಚಾರಕ್ಕೆ ರಸ್ತೆ ತಿರುವಿನಲ್ಲಿರುವ ವಿದ್ಯುತ್ ಕಂಬವನ್ನು ಸ್ಥಳಾಂತರಿಸಬೇಕೆಂದು ಜನ ಒತ್ತಾಯಿಸಿದ್ದಾರೆ.