ಎರ್ಮಾಳು ಪುಂದಾಡುವಿನಲ್ಲಿ ಅಪಾಯಕಾರಿ ವಿದ್ಯುತ್ ತಂತಿ

ಪಡುಬಿದ್ರಿ ಮೆಸ್ಕಾಂ ನಿರ್ಲಕ್ಷ್ಯ ವಿರುದ್ಧ ಜನರ ಆಕ್ರೋಶ

ನಮ್ಮ ಪ್ರತಿನಿಧಿ ವರದಿ

ಪಡುಬಿದ್ರಿ : ತೆಂಕ ಎರ್ಮಾಳಿನ ಪೂಂದಾಡು ದರ್ಕಾಸು ಬಳಿ ನೂರಾರು ವಾಸದ ಮನೆಗಳಿರುವ ಪ್ರದೇಶದಲ್ಲಿ ವಿದ್ಯುತ್ ತಂತಿಗಳು ಜೋತಾಡುತ್ತಿದ್ದಲ್ಲದೆ, ಆಗಲೋ ಈಗಲೋ ಬೀಳುವ ಸ್ಥಿತಿಯಲ್ಲಿರುವ ಬಗ್ಗೆ ಪಡುಬಿದ್ರಿ ಮೆಸ್ಕಾಂ ಕಚೇರಿಗೆ ಲಿಖಿತವಾಗಿ ನೀಡಿದರೂ ಅವರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಗ್ರಾಮಸ್ಥರ ಪರವಾಗಿ ಮಾಧ್ಯಮ ದೊಂದಿಗೆ ಮಾತನಾಡಿದ ಸ್ಥಳೀಯರಾದ ರಾಮ, “ವಾಸದ ಮನೆಗಳಿರುವ ಈ ಪ್ರದೇಶದಲ್ಲಿನ ವಿದ್ಯುತ್ ತಂತಿಗಳನ್ನು ಬದಲಿಸಿ ಯಾವ ಕಾಲವಾಯಿತೋ ಗೊತ್ತಿಲ್ಲ. ಸಮಸ್ಯೆ ಬಂದಾಗಲಂತೂ ಆ ತಂತಿಗಳಿಗೆ ತೇಪೆ ಹಾಕುವುದು ಬಿಟ್ಟರೆ ಅದನ್ನು ಬದಲಿಸುವ ಕೆಲಸವನ್ನು ಇಲಾಖೆ ಮಾಡುತ್ತಿಲ್ಲ. ರಸ್ತೆಯಂಚಿನಲ್ಲಿರುವ ವಿದ್ಯುತ್ ತಂತಿಗಳು ಜೋತು ಬಿದ್ದಿರುವುದಲ್ಲದೆ, ಅರ್ಧ ತುಂಡಾಗಿ ಸಿಲುಕಿಕೊಂಡಿದ್ದು ಯಾವ ಹೊತ್ತಲ್ಲೂ ಬೀಳಬಹುದು. ಅಲ್ಲದೆ ಈ ಭಾಗದಲ್ಲಿ ನಿರ್ವಹಣೆ ಇಲ್ಲದಿರುವುದರಿಂದ ಗಿಡಗಂಟಿಗಳು, ಬಳ್ಳಿಗಳು ತಂತಿಯನ್ನು ಸುತ್ತಿಕೊಂಡು ಮತ್ತಷ್ಟು ಅಪಾಯ ಎದುರಾಗಿದೆ. ರಸ್ತೆಯಲ್ಲಿ ಪಾದಚಾರಿ ವಿದ್ಯಾರ್ಥಿಗಳು ಸಹಿತ ವಾಹನಗಳು ಸಂಚರಿಸುತ್ತಿದ್ದು, ಈ ಸಂದರ್ಭ ಏನಾದರೂ ತಂತಿಗಳು ತುಂಡಾಗಿ ಬಿದ್ದರೆ ಪ್ರಾಣಹಾನಿ ಸಂಭವಿಸುವ ಸಾಧ್ಯತೆ ಇದೆ ಎಂಬುದನ್ನು ಬಹಳಷ್ಟು ಬಾರಿ ದೂರವಾಣಿ ಮೂಲಕ ಇಲಾಖೆಗೆ ತಿಳಿಸಿದ್ದಲ್ಲದೆ, ಕಳೆದ ಸುಮಾರು ಇಪ್ಪತ್ತು ದಿನಗಳ ಹಿಂದೆ ಲಿಖಿತವಾಗಿ ಮೆಸ್ಕಾಂ ಅಧಿಕಾರಿಯ ಗಮನಕ್ಕೆ ಸ್ಥಳೀಯರಾದ ನಾವೆಲ್ಲರೂ ಸಹಿ ಹಾಕಿ ಮನವಿ ಸಲ್ಲಿಸಿದ್ದೇವು. ಆದರೆ ಈವರಗೆ ಯಾವುದೇ ಕ್ರಮಕ್ಕೆ ಮುಂದಾಗದೆ ನಿರ್ಲಕ್ಷ್ಯ ತೋರುತ್ತಿದೆ ಪಡುಬಿದ್ರಿ ಮೆಸ್ಕಾಂ ಇಲಾಖೆ. ಈ ಪ್ರದೇಶದಲ್ಲಿ ಈ ತಂತಿಗಳಿಂದ ಏನಾದರೂ ಅಪಾಯ ಸಂಭವಿಸಿದರೆ ಮೆಸ್ಕಾಂ ಇಲಾಖೆಯೇ ಹೊಣೆಯಾಗಬೇಕಾದೀತು” ಎಂದು ಅವರು ಎಚ್ಚರಿಸಿದ್ದಾರೆ.