ದಲಿತರು ನಿರ್ಮಿಸಿದ ಬೇಲಿ ಕಿತ್ತೆಸೆದ ಕಂದಾಯ ಇಲಾಖೆ ವಿರುದ್ಧ ಆಕ್ರೋಶ

ಮಾಲಾಡಿ ಡಿ ಸಿ ಮನ್ನಾ ಭೂ ವಿವಾದ

ನಮ್ಮ ಪ್ರತಿನಿಧಿ ವರದಿ

ಬೆಳ್ತಂಗಡಿ : ಮಾಲಾಡಿ ಗ್ರಾಮದ ಅಂಬೇಡ್ಕರ್ ಭವನದ ಎದುರಿನ ಸಾರ್ವಜನಿಕ ಆಟದ ಮೈದಾನ ತಮ್ಮ ಹಕ್ಕಿನ ಡಿ ಸಿ ಮನ್ನಾ ಭೂಮಿ ಎಂದು ಗ್ರಾಮದ ದಲಿತರು ತಂತಿ ಬೇಲಿ ನಿರ್ಮಿಸಿದ ಬೆನ್ನಲ್ಲೇ ಶಾಲಾ ಎಸ್ಡಿಎಂಸಿ ಮನವಿಗೆ ಸ್ಪಂದಿಸಿದ ಕಂದಾಯ ಇಲಾಖಾಧಿಕಾರಿಗಳು ಇದೇ ಜಾಗಕ್ಕೆ ಜೆಸಿಬಿಗಳನ್ನು ತಂದು ಪೊಲೀಸ್ ರಕ್ಷಣೆಯಲ್ಲಿ ದಲಿತರು ನಿರ್ಮಿಸಿದ ತಂತಿ ಬೇಲಿಯನ್ನು ಕಿತ್ತೆಸೆದು ಆವರಣ ನಿರ್ಮಿಸಿದ ವಿದ್ಯಮಾನ ಗುರುವಾರ ಸ್ಥಳೀಯವಾಗಿ ಉದ್ವಿಗ್ನ ವಾತಾವರಣಕ್ಕೆ ಕಾರಣವಾಯಿತು.

ಮಾಲಾಡಿ ಅಂಬೇಡ್ಕರ್ ಭವನದ ಎದುರಿನ ಸ ನಂ 207/1ಬಿರ 1-50 ಎಕ್ರೆ ಡಿ ಸಿ ಮನ್ನಾ ಭೂಮಿಯಲ್ಲಿರುವ ಸಾರ್ವಜನಿಕ ಆಟದ ಮೈದಾನಕ್ಕೆ ಸ್ಥಳೀಯ ದಲಿತ ಸಂಘಟನೆಗಳು ತಂತಿ ಬೇಲಿ ನಿರ್ಮಿಸಿದ್ದು, ಈ ಬಗ್ಗೆ  ಶಾಲಾ ಎಸ್ಡಿಎಂಸಿ ತಂತಿ ಬೇಲಿ ನಿರ್ಮಿಸಿ ಅತಿಕ್ರಮಿಸಿದ ಜಾಗವು ಶಾಲಾ ಆಟದ ಮೈದಾನವಾಗಿದೆ ಹಾಗೂ ಅತಿಕ್ರಮಣ ತೆರವುಗೊಳಿಸುವಂತೆ ಸಂಬಂಧಪಟ್ಟ ಜಾಗದ ನಕ್ಷೆ, ಪಹಣಿ ಪತ್ರವನ್ನೂ ಲಗತ್ತಿಸಿ ದೂರು ನೀಡಿತ್ತು.

ಸ್ಪಂದಿಸಿದ ಕಂದಾಯ ಇಲಾಖೆಅತಿಕ್ರಮಿತ ಜಾಗವನ್ನು ಪರಿಶೀಲಿಸಿ ಸೂಕ್ತ ಕ್ರಮಕ್ಕೆ ಸೂಚಿಸಿದ್ದ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಕಂದಾಯ ನಿರೀಕ್ಷಕರು, ಸರ್ವೇ ಸಿಬ್ಬಂದಿ ಪೊಲೀಸ್ ರಕ್ಷಣೆಯೊಂದಿಗೆ ಎರಡು ಜೆಸಿಬಿ ಸಹಿತ ಸ್ಥಳಕ್ಕಾಗಮಿಸಿ ಎರಡು ಜೆಸಿಬಿಗಳನ್ನು ತಂದು ಚರಂಡಿ ಮೂಲಕ ಆವರಣ ನಿರ್ಮಿಸಲಾರಂಭಿಸಿದರು.

ಈ ಸಂದರ್ಭ ದಲಿತ ಮುಖಂಡರ ಮನವಿ ಮತ್ತು ಒತ್ತಾಯದ ನಡುವೆಯೂ ಚರಂಡಿ ನಿರ್ಮಾಣ ಕಾರ್ಯ ಮುಂದುವರಿಸಿದಾಗ ಜಿ ಪಂ ಸದಸ್ಯ ಶೇಖರ್ ಕುಕ್ಕೇಡಿ, ಬಿಎಸ್ಪಿ ತಾ ಅಧ್ಯಕ್ಷ ಸಂಜೀವ ಆರ್, ದಸಂಸ ತಾ ಸಂಚಾಲಕ ರಮೇಶ್ ಆರ್, ಮುಖಂಡರುಗಳಾದ ಶಂಕರ್ ಎಂ, ಬಾಬಿ ಎಂ, ಮತ್ತಿತರರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ತಹಶೀಲ್ದಾರ್ ಆದೇಶದ ಪ್ರತಿ ತೋರಿಸುವಂತೆ ಪಟ್ಟು ಹಿಡಿದರು. ಈ ಸಂದರ್ಭ ದಲಿತ ಮುಖಂಡರು ಮತ್ತು ಕಾರ್ಯಕರ್ತರು ಬೇಲಿ ಕಿತ್ತೆಸೆದು ಚರಂಡಿ ನಿರ್ಮಿಸದಂತೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಕಂದಾಯ ನಿರೀಕ್ಷಕರು, ಎಸ್ಡಿಎಂಸಿ, ಕಂದಾಯ ನಿರೀಕ್ಷಕರು ಮತ್ತು ತಾ ಪಂ ಸದಸ್ಯ ಜೋಯೆಲ್ ಮೆಂಡೋನ್ಸ, ಗ್ರಾ ಪಂ ಸದಸ್ಯ ಅರವಿಂದ ಜೈನ್ ತಮ್ಮಲ್ಲಿ ತಹಶೀಲ್ದಾರ್ ನೀಡಿರುವ ತೆರವು ಆದೇಶವಿದೆ ಎಂದು ಸಮರ್ಥಿಸಿಕೊಂಡರು. ಇದು ಸುಳ್ಳು, ತಹಶೀಲ್ದಾರರು ಯಾವುದೇ ತೆರವು ಆದೇಶವನ್ನು ನೀಡಿಲ್ಲ ಎಂಬುದನ್ನು ಖಚಿತಪಡಿಸಿಕೊಂಡು ಅಧಿಕಾರಿಗಳಿಗೆ ಸವಾಲು ಹಾಕಿದರು. ಚರಂಡಿಯನ್ನು ಮುಚ್ಚಿ ಈ ಹಿಂದಿನಂತೆ ಸಾರ್ವಜನಿಕರಿಗೆ ಆಟವಾಡಲು ಅನುಕೂಲವಾಗುವಂತೆ ಯಥಾಸ್ಥಿತಿ ಕಾಪಾಡುವಂತೆ ಪಟ್ಟುಹಿಡಿದಾಗ ಗುಂಪುಗಳ ಮಧ್ಯೆ ಪರಸ್ಪರ ತೀವ್ರ ವಾಕ್ಸಮರ ನಡೆದು ಇನ್ನಷ್ಟು ಗೊಂದಲಕ್ಕೆ ಕಾರಣವಾಯಿತು. ಪಟ್ಟು ಬಿಡದೆ ಸ್ಥಳದಲ್ಲಿದ್ದ ದಲಿತರು ಸಂಜೆ ವೇಳೆ ಕಂದಾಯ ನಿರೀಕ್ಷಕರು ಹೊರಟಾಗ ಹೋಗದಂತೆ ತಡೆದು ಸುತ್ತುವರಿದು ರಸ್ತೆಗೆ ಅಡ್ಡಲಾಗಿ ಕುಳಿತು ತಾ ಪಂ ಸದಸ್ಯಗೂ ಕಂದಾಯ ನಿರೀಕ್ಷಕರಿಗೂ ಧಿಕ್ಕಾರ ಕೂಗಿದರು.

ಕೊನೆಗೆ ಜೆಸಿಬಿಯಲ್ಲಿ ನಿರ್ಮಿಸಲಾದ ಆವರಣ ಚರಂಡಿಯನ್ನು ದಲಿತರೇ ಮುಚ್ಚಿ ಪ್ರತಿಭಟನೆ ವ್ಯಕ್ತಪಡಿಸಿ ಅಧಿಕಾರಿಗಳ ಗಮನಸೆಳೆದಿದ್ದು, ಸ್ಥಳೀಯರಲ್ಲಿ ಮುಂದೇನಾಗಬಹುದೆಂದು ಕುತೂಹಲ ಮೂಡಿಸಿದೆ.