ಡಿ ಸಿ ಮನ್ನಾ ಭೂಮಿ ಬಗ್ಗೆ ಪ್ರತಿಕ್ರಿಯೆ ನೀಡದ ಹಾಲಾಡಿಗೆ ದಸಂಸ ತರಾಟೆ

ಕರಾವಳಿ ಅಲೆ ವರದಿ

ಕುಂದಾಪುರ : ಕಳೆದ ಹಲವು ವರ್ಷಗಳ ಬೇಡಿಕೆಯಾಗಿದ್ದ ಬೈಂದೂರು ತಾಲೂಕು ರಚನೆ ಅಧಿಕೃತವಾಗಿ ಬುಧವಾರ ಘೋಷಣೆಯಾಯಿತು. ಇದೇ ಸಂದರ್ಭ ದಲಿತರಿಗೆ ಮೀಸಲಾಗಿಡಲಾಗಿದ್ದ ಡಿ ಸಿ ಮನ್ನಾ ಭೂಮಿಯ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ ಎಂದು ಆರೋಪಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳು ಎಂಎಲ್ಲೆ ಹಾಲಾಡಿ ಶೆಟ್ಟಿ ಮತ್ತು ಅಧಿಕಾರಿಗಳನ್ನು

ತರಾಟೆಗೆತ್ತಿಕೊಂಡರು. ಈ ಸಂದರ್ಭ ಬೈಂದೂರು ನೂತನ ತಾಲೂಕು ಘೋಷಣೆಯನ್ನು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಸ್ವಾಗತಿಸುತ್ತದೆ ಎಂದು ಹೇಳಿದ ದಸಸಂ ಪದಾಧಿಕಾರಿಗಳು, ಕುಮ್ಕಿ ಜಮೀನು, ಬಗರ್ ಹುಕುಂ, 94ಸಿ, ಹಂಚುವ ಬಗ್ಗೆ ಸಭೆಯಲ್ಲಿ ಪ್ರಸ್ತಾಪಿಸಿದ ಸಚಿವ ಕಾಗೋಡು ತಿಮ್ಮಪ್ಪ,  ದಲಿತರಿಗಾಗಿಯೇ ಮೀಸಲಿಟ್ಟ ಡಿ ಸಿ ಮನ್ನಾ ಭೂಮಿಯ ಬಗ್ಗೆ ಯಾವುದೇ ಆಶ್ವಾಸನೆ ನೀಡದೆ ದಲಿತರನ್ನು ಮರೆತಿದ್ದಾರೆ ಎಂದು ಕಾರ್ಯಕ್ರಮ ಮುಗಿಸಿ ಹೊರಗೆ ಬರುತ್ತಿದ್ದ ಜನಪ್ರತಿನಿಧಿಗಳು ಹಾಗು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಆಕ್ರೋಶ ವ್ಯಕ್ತಪಡಿಸಿದರು.

“ಜಿಲ್ಲೆಯಲ್ಲಿ ಸುಮಾರು 800ಕ್ಕೂ ಅಧಿಕ ಡಿ ಸಿ ಮನ್ನಾ ಭೂಮಿ ಹಂಚಿಕೆ ಆಗದೆ ಬಾಕಿ ಉಳಿದಿದ್ದು ಭೂ ವಂಚಿತ ಪರಿಶಿಷ್ಟ ಜಾತಿಯವರಿಗೆ ಭೂಮಿ ಹಂಚಿಕೆ ಮಾಡುವಂತೆ ಆಗ್ರಹಿಸಿ ಜಿಲ್ಲೆಗೆ ಬಂದು ಹೋಗುವಂತ ಎಲ್ಲಾ ಸಚಿವರಿಗೆ ಅನೇಕ ಮನವಿಗಳನ್ನು ನೀಡಲಾಗಿದೆ. ಸರ್ಕಾರದ ಗಮನ ಸೆಳೆಯುವಂತ ಅನೇಕ ಸಮಾವೇಶಗಳನ್ನು ಜನಪ್ರತಿನಿಧಿಗಳು ಜಿಲ್ಲಾಧಿಕಾರಿಗಳ ಉಪಸ್ಥಿತಿಯಲ್ಲಿ ನಡೆಸಲಾಗಿದೆ. ಆದರೆ ಕಂದಾಯ ಸಚಿವರು ಶಾಸಕರು ದಲಿತರ ಸಮಸ್ಯೆಗಳಿಗೆ ಅದ್ಯತೆ ನೀಡದೆ ಇರುವುದು ಶೋಷಿತರ ಮೇಲಿನ ಇವರ ಕಾಳಜಿಗೆ ಹಿಡಿದ ಕೈಗನ್ನಡಿಯಾಗಿದೆ. ಇವರ ನಿಲುವು ಬದಲಾಯಿಸಿಕೊಳ್ಳದೆ ಇದ್ದಲ್ಲಿ ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿ ಕಚೇರಿಯ ಮುಂದೆ ಆಹೋರಾತ್ರಿ ಧರಣಿ ನಡೆಸಿ ಉಗ್ರ ಪ್ರತಿಭಟನೆ ಮಾಡಲಾಗುವುದು” ಎಂದು ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ವಾಸುದೇವ ಮುದೂರು ಮೊದಲಾದವರು ಎಚ್ಚರಿಕೆ ನೀಡಿದ್ದಾರೆ.

 

 

 

LEAVE A REPLY