ಸರಕಾರಿ ಜಮೀನಿನ ಒತ್ತುವರಿ ತೆರವು ಮಾಡದಿದ್ದರೆ ಪ್ರತಿಭಟನೆ

ಸಾಂದರ್ಭಿಕ ಚಿತ್ರ

ದಲಿತ್ ಸೇವಾ ಸಮಿತಿ ಎಚ್ಚರಿಕೆ

 ನಮ್ಮ ಪ್ರತಿನಿಧಿ ವರದಿ

ವಿಟ್ಲ : ಮಂಚಿ ಗ್ರಾಮದಲ್ಲಿ ನಿವೇಶನ ರಹಿತರಿಗೆ ಮೀಸಲಿಟ್ಟಿರುವ ಸರಕಾರಿ ಜಮೀನಿನ ಒತ್ತುವರಿ ತೆರವು ಮಾಡದಿದ್ದರೆ ಪ್ರತಿಭಟನೆ ನಡೆಸುತ್ತೇವೆಂದು ದಲಿತ್ ಸೇವಾ ಸಮಿತಿ ಎಚ್ಚರಿಕೆ ನೀಡಿದೆ.

ಸುದ್ದಿಗಾರರೊಂದಿಗೆ ಮಾತಾಡಿದ ಸಮಿತಿ ಅಧ್ಯಕ್ಷ ಬಿ ಕೆ ಸೇಸಪ್ಪ ಬೆದ್ರಕಾಡು, “ಮಂಚಿ ಗ್ರಾಮದ ಸರ್ವೆ ನಂ.25/2ರ 4.79 ಎಕ್ರೆ ಮತ್ತು 24/4ರ 2.09 ಎಕ್ರೆ ಸರಕಾರಿ ಜಮೀನು ಒತ್ತುವರಿಯಾಗಿದೆ. ನಿವೇಶನ ರಹಿತರಿಗೆ ಕಾಯ್ದಿರಿಸಲು ಮಂಚಿ ಗ್ರಾ ಪಂ ನಿರ್ಣಯ ಕೈಗೊಂಡಿರುವ ಜಮೀನಿನನ್ನು ಒತ್ತುವರಿ ಮಾಡಲಾಗಿದೆ. ಈ ಬಗ್ಗೆ ಕಂದಾಯ ಇಲಾಖೆಗೆ ಹಲವು ಬಾರಿ ಮನವಿ ಸಲ್ಲಿಸಿದ ಸಮಿತಿಯು ಒತ್ತುವರಿ ತೆರವು ಮಾಡುವಂತೆ ವಿನಂತಿಸಿಕೊಂಡಿತ್ತು. ಮನವಿಗೆ ಸ್ಪಂದಿಸಿದ ಬಂಟ್ವಾಳ ತಹಶೀಲ್ದಾರ್ ಅವರು ಸ್ಥಳ ತನಿಖೆ ನಡೆಸಿದ್ದಾರೆ. ಆದರೆ ಈವರೆಗೂ ಅದ್ಯಾಕೋ ಕಂದಾಯ ಇಲಾಖೆ ಸಮಿತಿಯ ಮನವಿಗೆ ಒತ್ತುವರಿ ತೆರವುಮಾಡಲು ಆಸಕ್ತಿ ಹೊಂದಿಲ್ಲ” ಎಂದು ಆರೋಪಿಸಿದ್ದಾರೆ.

“ವಾರದೊಳಗೆ ತೆರವುಗೊಳಿಸದಿದ್ದಲ್ಲಿ ಸಮಿತಿಯು ಮಂಚಿ ಗ್ರಾ ಪಂ ಎದುರು ನಿವೇಶನರಹಿತರ ಜೊತೆ ಪ್ರತಿಭಟನೆ ನಡೆಸಲಿದೆ” ಎಂದು ಎಚ್ಚರಿಕೆ ನೀಡಿದ್ದಾರೆ.