ಡಿ ಸಿ ಮನ್ನಾ ಭೂಮಿ ಹಂಚಲು ಆಗ್ರಹಿಸಿ ದಲಿತ ಸಮನ್ವಯ ಸಮಿತಿ ಸೀಎಂಗೆ ಮನವಿ

ನಮ್ಮ ಪ್ರತಿನಿಧಿ ವರದಿ

ಬೆಳ್ತಂಗಡಿ : ಪರಿಶಿಷ್ಟರಿಗೆ ಮೀಸಲಿರಿಸಲಾಗಿರುವ ಡಿ ಸಿ ಮನ್ನಾ ಭೂಮಿ ಹಂಚಿಕೆ ಬಗ್ಗೆ ದ ಕ ಜಿಲ್ಲಾಧಿಕಾರಿ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ. ಅವರನ್ನು ವರ್ಗಾವಣೆ ಮಾಡಬೇಕು ಹಾಗೂ ದಲಿತರಿಗೆ ಡಿ ಸಿ ಮನ್ನಾ ಭೂಮಿ ಹಂಚಬೇಕು ಎಂದು ಒತ್ತಾಯಿಸಿ ದ ಕ ಜಿಲ್ಲಾ ದಲಿತ ಸಂಘಟನೆಗಳ ಸಮನ್ವಯ ಸಮಿತಿ ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಿಗೆ ಮನವಿ ಸಲ್ಲಿಸಿದೆ.

ಬ್ರಿಟಿಷ್ ಸರಕಾರ ಜಿಲ್ಲೆಯಲ್ಲಿ ದಲಿತರಿಗಾಗಿ ಮೀಸಲಿರಿಸಿದ್ದ ಡಿ ಸಿ ಮನ್ನಾ ಜಾಗವನ್ನು ಶೋಷಿತ ಸಮುದಾಯಕ್ಕೆ ಹಂಚಲು ನಮ್ಮ ಸರಕಾರಗಳಿಗೆ ಸಾಧ್ಯವಾಗಿಲ್ಲ. ಕಳೆದ ಮೂರು ದಶಕಗಳಿಂದ ಭೂಮಿಯ ಹಕ್ಕಿಗಾಗಿ ಹೋರಾಟ ನಡೆಯುತ್ತಿದ್ದು, ಬಹುತೇಕ ಅಧಿಕಾರಿಗಳು ಏನಾದರೊಂದು ನೆಪ ಹೇಳುತ್ತಾ ಪರಿಶಿಷ್ಟರನ್ನು ವಂಚಿಸುತ್ತಿದ್ದಾರೆ.

ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ದಲಿತರ ಕುಂದುಕೊರತೆ ಸಭೆಯಲ್ಲಿ ಡಿ ಸಿ ಮನ್ನಾ ಭೂಮಿ ಹಂಚಿಕೆ ಬಗ್ಗೆ ದಲಿತರು ಪ್ರಸ್ತಾಪಿಸಿದಾಗ ಇಲ್ಲಸಲ್ಲದ ಕಾರಣಗಳನ್ನು ಹೇಳಿಕೊಂಡ ಜಿಲ್ಲಾಧಿಕಾರಿ, ತಮ್ಮ ಸಭೆಯಿಂದ ಎದ್ದು ಹೊರನಡೆಯುವ ಮೂಲಕ ತಮ್ಮ ಅಧಕ್ಷತೆ ಮತ್ತು ಬಾಲಿಶತನದ ವರ್ತನೆಯನ್ನು ಪ್ರದರ್ಶಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಹಲವು ದಶಕಗಳಿಂದ ನೆನೆಗುದಿಗೆ ಬಿದ್ದಿರುವ ಡಿ ಸಿ ಮನ್ನಾ ಭೂಮಿಯ ವಿಚಾರ ಪ್ರಮುಖವಾಗಿದ್ದ ಸಭೆಯಲ್ಲಿ ದಲಿತ ಮುಖಂಡರ ಕುಂದು ಕೊರತೆಗಳಿಗೆ ಉತ್ತರಿಸಲು ಜಿಲ್ಲಾಧಿಕಾರಿ ನಿರಾಕರಿಸಿದಲ್ಲದೆ ಹಿಂದಿನ ಜಿಲ್ಲಾಧಿಕಾರಿಗಳು ಅನುಸರಿಸಿಕೊಂಡು ಬಂದಿರುವ ಕ್ರಮಗಳನ್ನು ಗಾಳಿಗೆ ತೂರಿ ಭೂ ಮಂಜೂರಾತಿ ನಿಯಮ 1969ರನ್ವಯ ಡಿ ಸಿ ಮನ್ನಾ ಭೂಮಿಯನ್ನು ದಲಿತೇತರಿಗೂ ಹಂಚಲು ನಿರ್ಣಯ ಕೈಗೊಂಡಿರುವುದು ಜಿಲ್ಲಾಧಿಕಾರಿಯ ಸರ್ವಾಧಿಕಾರಿ ಮತ್ತು ದಲಿತ ವಿರೋಧಿ ಧೋರಣೆ ಎಂದು ಅಭಿಪ್ರಾಯ ಪಟ್ಟಿದೆ.

ದಲಿತ ವಿರೋಧಿ ಜಿಲ್ಲಾಧಿಕಾರಿಯನ್ನು ಕೂಡಲೇ ವರ್ಗಾವಣೆ ಮಾಡಬೇಕು ಹಾಗೂ ಭೂರಹಿತ ದಲಿತರಿಗೆ ಡಿ ಸಿ ಮನ್ನಾ ಭೂಮಿ ಹಂಚಬೇಕು ಇಲ್ಲವಾದಲ್ಲಿ ಜಿಲ್ಲಾಧಿಕಾರಿ ಭಾಗವಹಿಸುವ ಎಲ್ಲಾ ಕಾರ್ಯಕ್ರಮಗಳಲ್ಲಿ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟಿಸಲಾಗುವುದು ಎಂದು ಮನವಿಯಲ್ಲಿ ತಿಳಿಸಲಾಗಿದೆ.