ಕವಲು ಹಾದಿಯಲ್ಲಿ ದಲಿತ ರಾಜಕಾರಣ

ವಿಶ್ಲೇಷಣೆ

 2014ರ ಲೋಕಸಭಾ ಚುನಾವಣೆಗಳು ಮತ್ತು ನಂತರದ ಹಲವು ವಿಧಾನಸಭಾ ಚುನಾವಣೆಗಳ ನಂತರ ದೇಶದ ದಲಿತ ರಾಜಕಾರಣ ಬದಲಾವಣೆಯತ್ತ ಸಾಗುತ್ತಿರುವುದು ಸ್ಪಷ್ಟವಾಗಿತ್ತು. ಈ ಹಿನ್ನೆಲೆಯಲ್ಲೇ ರಾಷ್ಟ್ರಪತಿ ಚುನಾವಣೆ ಭಾರತದ ರಾಜಕೀಯ ಮತ್ತು ಸಾಮಾಜಿಕ ಜೀವನದಲ್ಲಿ ಮಹತ್ತರ ಘಟ್ಟವಾಗಲಿದೆ. ಇತರ ಯಾವುದೇ ಸಂದರ್ಭದಲ್ಲಿ ಇಬ್ಬರು ದಲಿತ ಅಭ್ಯರ್ಥಿಗಳ ನಡುವಿನ ಸೆಣಸಾಟ ಹೆಚ್ಚಾಗಿ ಮಹತ್ವ ಪಡೆಯುತ್ತಿರಲಿಲ್ಲ. ಆದರೆ ನರೇಂದ್ರ ಮೋದಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ದೇಶದ ದಲಿತ ರಾಜಕಾರಣದತ್ತ ಹೆಚ್ಚು ಗಮನ ನೀಡಲಾಗುತ್ತಿದೆ. 22 ರಾಜ್ಯಗಳಲ್ಲಿ ಬಿಜೆಪಿ ಅಧಿಕಾರ ಮತ್ತು ದಲಿತರ ಮೇಲಿನ ಹಿಂಸಾತ್ಮಕ ಘಟನೆಗಳು ಈ ನಿಟ್ಟಿನಲ್ಲಿ ಗಮನಾರ್ಹವಾಗಿವೆ. 2014ರ ಚುನಾವಣೆಗಳಲ್ಲಿ ಉತ್ತರಪ್ರದೇಶದಲ್ಲಿ 71 ಕ್ಷೇತ್ರಗಳಲ್ಲಿ ಗೆದ್ದ ಬಿಜೆಪಿ ಎಲ್ಲ ಮೀಸಲಾತಿ ಕ್ಷೇತ್ರಗಳಲ್ಲೂ ಜಯ ಗಳಿಸುವ ಮೂಲಕ ದಲಿತರ ಬೆಂಬಲವನ್ನು ದೃಢಪಡಿಸಿತ್ತು. ಈ ಹಿನ್ನೆಲೆಯಲ್ಲೇ ದೇಶದ ದಲಿತ ರಾಜಕಾರಣ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೊಳಗಾಗಿದೆ. 20 ಕೋಟಿ ದಲಿತರ ಬೆಂಬಲ ಗಳಿಸಲು ಮೋದಿ ಸರ್ಕಾರ ದಲಿತ ಅಭ್ಯರ್ಥಿಯನ್ನು ಕಣಕ್ಕಿಳಿಸಿರುವುದು ಕುತೂಹಲ ಕೆರಳಿಸಿದೆ.

ದಲಿತ ರಾಷ್ಟ್ರಪತಿಯನ್ನು ಚುನಾಯಿಸುವ ಮೂಲಕ ಬಿಜೆಪಿ ತನ್ನ ರಾಜಕೀಯ ನೆಲೆಯನ್ನು ಭದ್ರಪಡಿಸಿಕೊಳ್ಳಲು ಸಾಧ್ಯವಾಗುವುದೇ ಎಂದು ಕಾದು ನೋಡಬೇಕಿದೆ. ಬಿಜೆಪಿ ಆಡಳಿತ ರಾಜ್ಯಗಳಲ್ಲಿ ದಲಿತರ ಮೇಲಿನ ಆಕ್ರಮಣಗಳು ಹೆಚ್ಚಾಗುತ್ತಿರುವುದು ಮತ್ತು ದಲಿತರು ಹಾಗೂ ಮೇಲ್ಜಾತಿ ಸಮುದಾಯಗಳಾದ ರಜಪೂತ್, ಠಾಕುರಗಳ ನಡುವೆ ಸಂಘರ್ಷ ಹೆಚ್ಚಾಗಿರುವುದು ಈ ಸಂದರ್ಭದಲ್ಲಿ ನಿರ್ಣಾಯಕವಾಗಲಿದೆ. ಹಿಂದುತ್ವ ರಾಜಕಾರಣ, ರಾಮಮಂದಿರ ಮತ್ತು ಅಯೋಧ್ಯಾ ವಿವಾದ, ಗೋಹತ್ಯೆ ನಿಷೇಧ, ಗೋಮಾಂಸ ನಿಷೇಧ ಮುಂತಾದ ಸಂಕೀರ್ಣ ವಿವಾದಗಳು ದಲಿತರ ಮತ್ತು ಮೇಲ್ಜಾತಿಯವರ ನಡುವಿನ ಸಂಘರ್ಷವನ್ನು ತೀವ್ರವಾಗಿಸುತ್ತಿದೆ. ದಲಿತರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಸಿಡಿದೆದ್ದಿರುವ ಭೀಮ್ ಆರ್ಮಿ ಮುಂತಾದ ಸಂಘಟನೆಗಳು ದೇಶಾದ್ಯಂತ ಸಂಚಲನ ಮೂಡಿಸುತ್ತಿವೆ. ಕೃಷಿ ಮತ್ತು ಹೈನುಗಾರಿಕೆಯನ್ನೇ ಅವಲಂಬಿಸಿ ಜೀವನ ಸವೆಸುವ ದಲಿತ ಸಮುದಾಯಗಳು ಗೋಹತ್ಯೆ ನಿಷೇಧದಿಂದ ತೀವ್ರ ಸಂಕಷ್ಟಕ್ಕೀಡಾಗಿದ್ದು, ಇದು ದಲಿತ ರಾಜಕಾರಣಕ್ಕೆ ಹೊಸ ಆಯಾಮ ನೀಡುತ್ತಿದೆ. ದೇಶಾದ್ಯಂತ ದಲಿತ ಪ್ರಜ್ಞೆ ಜಾಗೃತವಾಗುತ್ತಿದ್ದು, ತಮ್ಮ ವಿರುದ್ಧ ನಡೆಯುವ ದೌರ್ಜನ್ಯಗಳ ಬಗ್ಗೆ ಜಾತಿ ತಾರತಮ್ಯ ಹೊಂದಿರುವ ಆಡಳಿತ ವ್ಯವಸ್ಥೆ ಸೂಕ್ತ ಕ್ರಮ ಕೈಗೊಳ್ಳುವುದಿಲ್ಲ ಎಂಬ ಭಾವನೆ ದಲಿತರಲ್ಲಿ ಮಡುಗಟ್ಟುತ್ತಿದೆ. ಈ ಹಿನ್ನೆಲೆಯಲ್ಲೇ ದಲಿತ ರಾಜಕಾರಣ ಕವಲುಹಾದಿಯಲ್ಲಿದೆ ಎನ್ನಬಹುದು.