ಕವಲು ಹಾದಿಯಲ್ಲಿ ರಾಜ್ಯದ ದಲಿತ ಚಳುವಳಿ

ಕರ್ನಾಟಕದ ದಲಿತರ ಮುಖ್ಯ ಸಮಸ್ಯೆ ಎಂದರೆ ಒಳಜಗಳ ಮತ್ತು ವೈಮನಸ್ಯ. ಜಾತಿಗಳಿಂದ ಈ ಪಿಡುಗು ಈಗ ಉಪಜಾತಿಗಳನ್ನೂ ಆವರಿಸಿದೆ. ಹಾಗಾಗಿಯೇ ದಲಿತರ ಮತಗಳು ಕರ್ನಾಟಕದ ರಾಜಕಾರಣದಲ್ಲಿ ನಿರ್ಣಾಯಕ ಪಾತ್ರ ವಹಿಸುವುದಿಲ್ಲ.

  • ಭಾಸ್ಕರ ಹೆಗಡೆ

ಒಂದು ಕಾಲಘಟ್ಟದಲ್ಲಿ ಘನತೆ ಮತ್ತು ಗೌರವದ ಜೀವನದಿಂದ ವಂಚಿಸಲ್ಪಟ್ಟ ಮತ್ತು ಸಾಮಾಜಿಕವಾಗಿ, ಆರ್ಥಿಕವಾಗಿ ದಮನಿಸಲ್ಪಟ್ಟ ಕರ್ನಾಟಕದ ದಲಿತರನ್ನು ಇಂದು ಪ್ರತಿಯೊಬ್ಬ ರಾಜಕಾರಣಿಯೂ ಓಲೈಸಲು ತುದಿಗಾಲಲ್ಲಿ ನಿಂತಿರುತ್ತಾರೆ.

ರಾಜ್ಯದ ಆರು ಕೋಟಿ ಪ್ರಜೆಗಳ ಪೈಕಿ ಒಂದು ಕೋಟಿಯಷ್ಟಿರುವ ದಲಿತರ ಮತಬ್ಯಾಂಕಿಗಾಗಿ 2018ರ ಚುನಾವಣಾ ಸಿದ್ಧತೆಗಳು ನಡೆದಿವೆ.

ದಲಿತ ಹಿತಾಸಕ್ತಿಯನ್ನು ಕಾಪಾಡುವುದರಲ್ಲಿ ಏಕಸ್ವಾಮ್ಯತೆಯನ್ನು ಹೊಂದಿದ್ದ ಕಾಂಗ್ರೆಸ್ ಮತ್ತು ಇದೀಗ ಬಿಜೆಪಿ ಸಹ ದಲಿತ ಮತಗಳನ್ನು ಸೆಳೆಯಲು ಮುಂದಾಗಿರುವುದರಿಂದ ವಿಚಲಿತಗೊಂಡಿದೆ. ಬಿಜೆಪಿ ಅಧ್ಯಕ್ಷ ಬಿ ಎಸ್ ಯಡ್ಯೂರಪ್ಪ ತಮ್ಮ ರಾಜ್ಯ ಪ್ರವಾಸದ ಸಂದರ್ಭದಲ್ಲಿ ದಲಿತರ ಮನೆಗಳಲ್ಲಿ ಊಟ ಮಾಡುವ ಮೂಲಕ ಜಾತಿ ಗೋಡೆಗಳನ್ನು ಕೆಡವಲು ಯತ್ನಿಸುತ್ತಿದ್ದಾರೆ. ಬೆಂಗಳೂರಿನ ತಮ್ಮ ಸ್ವಗೃಹದಲ್ಲಿ ಯಡ್ಡಿಯೂರಪ್ಪ ಮೂವತ್ತು ದಲಿತರೊಡನೆ ಸಹಭೋಜನ ಮಾಡುವ ಮೂಲಕ ದಲಿತ ಮತಗಳಿಗೆ ಲಗ್ಗೆ ಹಾಕಿದ್ದಾರೆ. ಇದೇ ಡಿಸೆಂಬರ್ ಮತ್ತು ಜನವರಿಯಲ್ಲಿ ದಲಿತ ಪರಿವರ್ತನಾ ರ್ಯಾಲಿ ಹಮ್ಮಿಕೊಳ್ಳಲು ಬಿಜೆಪಿ ನಿರ್ಧರಿಸಿದೆ. ಬ್ರಾಹ್ಮಣ-ಬನಿಯಾಗಳ ಪಕ್ಷ ಎಂದೇ ಹೆಸರಾಗಿದ್ದ ಬಿಜೆಪಿ ಈಗ ದಲಿತರತ್ತ ವಾಲುತ್ತಿರುವುದು ಸ್ಪಷ್ಟವಾಗಿದೆ.

ಮತ್ತೊಂದೆಡೆ ಅಹಿಂದ ನಾಯಕರೆಂದೇ ಬಿಂಬಿಸಲ್ಪಡುವ ರಾಜ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿಯು ದಲಿತ ಮತಗಳನ್ನು ಸೆಳೆಯುವುದನ್ನು ತಪ್ಪಿಸಲು ಶತಪ್ರಯತ್ನ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರ ಕಳೆದ ನಾಲ್ಕು ವರ್ಷಗಳಲ್ಲಿ ದಲಿತರ ಸಬಲೀಕರಣ ಯೋಜನೆಗಳಗೆ 60 ಸಾವಿರ ಕೋಟಿ ರೂ ಖರ್ಚು ಮಾಡಿದೆ. ಹಾಗಾಗಿ 2018ರ ಚುನಾವಣೆಗಳಲ್ಲಿ ದಲಿತರ ಮತಗಳು ತಮಗೇ ಲಭಿಸಲಿವೆ ಎಂಬ ಅತ್ಮವಿಶ್ವಾಸದಲ್ಲಿ ಕಾಂಗ್ರೆಸ್ ಬೀಗುತ್ತಿದೆ. ಆದರೆ ಉತ್ತರ ಪ್ರದೇಶದಲ್ಲಿ ಆದಂತೆ ಕರ್ನಾಟಕದಲ್ಲೂ ದಲಿತರು ಬಿಜೆಪಿಯ ಬಲೆಗೆ ಬೀಳುತ್ತಾರೆಯೇ ಎಂಬ ಆತಂಕವೂ ಕಾಂಗ್ರೆಸ್ ಪಕ್ಷವನ್ನು ಕಾಡುತ್ತಿದೆ.

ರಾಜ್ಯದಲ್ಲಿ ದಲಿತರನ್ನು ಕ್ರೋಢೀಕರಿಸಿ ತಮ್ಮದೇ ಆದ ಪಕ್ಷವನ್ನು ಸ್ಥಾಪಿಸಲು ಯತ್ನಿಸುತ್ತಿರುವ ಬಿ ಎಸ್ ಪಿ ಪಕ್ಷದ ಬಿ ಗೋಪಾಲ್ ಅವರ ಅಭಿಪ್ರಾಯದಲ್ಲಿ ಕರ್ನಾಟಕದ ಶೇ 95ಕ್ಕಿಂತಲೂ ಹೆಚ್ಚು ದಲಿತರು ರಾಜಕೀಯ ಸ್ಪಷ್ಟತೆಯನ್ನು ಹೊಂದಿಲ್ಲ. ಎಲ್ಲ ಪಕ್ಷಗಳಲ್ಲೂ ದಲಿತ ನಾಯಕರುಗಳು ಇರುವುದರಿಂದ ದಲಿತ ಮತಗಳನ್ನು ಗಳಿಸಲು ಈ ನಾಯಕರುಗಳೇ ಮುಂಚೂಣಿಯಲ್ಲಿರುತ್ತಾರೆ ಎಂದು ಗೋಪಾಲ್ ಪ್ರತಿಪಾದಿಸುತ್ತಾರೆ.

ದಲಿತ ಸಮುದಾಯದಲ್ಲಿರುವ ಅಸಂಖ್ಯಾತ ಉಪಜಾತಿಗಳು, ಕೋಟಾ ಮತ್ತು ಮೀಸಲಾತಿಗಾಗಿ ಇರುವ ಪೈಪೋಟಿ ಯಾವುದೇ ನಾಯಕನನ್ನೂ ಅಪ್ರತಿಮ ನಾಯಕನನ್ನಾಗಿ ಬಿಂಬಿಸಲು ಅಡ್ಡಿಯಾಗಿದೆ. ಕರ್ನಾಟಕದ ದಲಿತರಲ್ಲಿ 101 ಜಾತಿಗಳಿದ್ದು, ಐದು ಪಂಗಡಗಳಾಗಿ ವಿಂಗಡಿಸಬಹುದು. ಚಲವಾದಿಗಳು, ಅಸ್ಪøಶ್ಯ ಮಾದಿಗರು, ಬೋವಿಗಳು, ಲಂಬಾಣಿಗಳು ಮತ್ತು ಇತರ 97 ಉಪಜಾತಿಗಳು. ಚಲವಾದಿಗಳು ಸಾಮಾನ್ಯವಾಗಿ ಕಾಂಗ್ರೆಸ್ ಪರವಾಗಿದ್ದು, ರಾಮಕೃಷ್ಣ ಹೆಗಡೆಯ ನಂತರ ಜನತಾಪಕ್ಷ ಅವಸಾನ ಹೊಂದಿದ ನಂತರ ಮಾದಿಗ ಸಮುದಾಯ ಬಿಜೆಪಿಯನ್ನು ಬೆಂಬಲಿಸುತ್ತಾ ಬಂದಿದೆ. ದಲಿತರಲ್ಲಿನ ಎಡ ಮತ್ತು ಬಲ ಪಂಗಡಗಳ ನಡುವೆ ಐಕ್ಯತೆ ಕಾಣಲು ಸಾಧ್ಯವೇ ಇಲ್ಲದಂತಾಗಿದೆ. ಎರಡೂ ಬಣಗಳು ತಲಾ 30-35 ಲಕ್ಷ ಜನಸಂಖ್ಯೆಯನ್ನು ಹೊಂದಿವೆ. ಮಾದಿಗ ಮತ್ತು ಬೋವಿ ಸಮುದಾಯದವರನ್ನು ಆಕರ್ಷಿಸುವಲ್ಲಿ ಬಿಜೆಪಿ ಬಹುತೇಕ ಯಶಸ್ವಿಯಾಗಿದೆ.

ಕರ್ನಾಟಕದ ದಲಿತರ ಮುಖ್ಯ ಸಮಸ್ಯೆ ಎಂದರೆ ಒಳಜಗಳ ಮತ್ತು ವೈಮನಸ್ಯ. ಜಾತಿಗಳಿಂದ ಈ ಪಿಡುಗು ಈಗ ಉಪಜಾತಿಗಳನ್ನೂ ಆವರಿಸಿದೆ. ಹಾಗಾಗಿಯೇ ದಲಿತರ ಮತಗಳು ಕರ್ನಾಟಕದ ರಾಜಕಾರಣದಲ್ಲಿ ನಿರ್ಣಾಯಕ ಪಾತ್ರ ವಹಿಸುವುದಿಲ್ಲ. ಈ ಅನಿಶ್ಚಿತತೆ ಮತ್ತು ಗೊಂದಲಗಳ ನಡುವೆಯೇ ಕರ್ನಾಟಕದ ರಾಜಕೀಯ ಪಕ್ಷಗಳು ದಲಿತರನ್ನು ಓಲೈಸುವುದರಲ್ಲಿ ತೊಡಗಿವೆ. ಬಹುಶಃ ಮುಂಬರುವ ಚುನಾವಣೆಗಳಲ್ಲಿ ಈ ಅನಿಶ್ಚಿತತೆಯನ್ನು ಪಕ್ಷಗಳು ನೇರವಾಗಿ ಅನುಭವಿಸಲಿವೆ. (ಡೆಕ್ಕನ್ ಕ್ರಾನಿಕಲ್)