ಎಎಸ್ಐ, ಪೇದೆ ಬಂಧಿಸಿ

 ದಲಿತ ಮುಖಂಡರ ಒತ್ತಾಯ

ಮಂಗಳೂರು : “ಕೊಣಾಜೆ ಠಾಣಾ ಎಎಸ್‍ಐ ಶ್ರೀಕಲಾ ಅವರ ಅಪರಾಧಗಳ ಪಟ್ಟಿ ಒಂದೆರಡಲ್ಲ. ಇತ್ತೀಚಿನ ದಿನಗಳಲ್ಲಿ ಅವರ ಅಧಿಕಾರ ದರ್ಪ ಮಿತಿಮೀರಿದ್ದು, ಬಡ, ಅಮಾಯಕರನ್ನು ಹಿಂಸಿಸುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಇದೇ ಕಾರಣಕ್ಕೆ ಏಪ್ರಿಲ್ 6ರಂದು ಮುಡಿಪುವಿನಲ್ಲಿರುವ ತರಕಾರಿ ವ್ಯಾಪಾರ ಮಾಡುತ್ತಿರುವ ಇಳಿ ವಯಸ್ಸಿನ ದಲಿತ ಕುಟುಂಬದ ರುಕ್ಮಯ್ಯ ಎಂಬವರನ್ನು ವಿನಾಕಾರಣ ಥಳಿಸಿ ಠಾಣೆಗೆ ಕರೆದೊಯ್ದು ಹಲ್ಲೆ ನಡೆಸಿದ್ದಾರೆ. ಇಂತಹ ಅಧಿಕಾರಿ ಹಾಗೂ ಇವರಿಗೆ ಬೆಂಗಾವಲಾಗಿ ನಿಂತ ಪೊಲೀಸ್ ಪೇದೆ ರಾಜೇಶ್ ಅವರನ್ನು ಕೂಡಲೇ ಬಂಧಿಸಬೇಕು” ಎಂದು ದಲಿತ ಸಂಘಟನೆಗಳು ಆಗ್ರಹ ಮಾಡಿವೆ.

ಪತ್ರಕರ್ತರೊಂದಿಗೆ ಮಾತನಾಡಿದ ಸಂಘಟನೆಯ ಪ್ರಮುಖ ಅಶೋಕ್ ಕೊಂಚಾಡಿ ಅವರು, “ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡಲು ಇವರಿಬ್ಬರೂ ನಾಲಾಯಕ್ ಆಗಿದ್ದಾರೆ. ಇಂಥವರನ್ನು ಇಟ್ಟುಕೊಂಡಲ್ಲಿ ಇಡೀ ಪೊಲೀಸ್ ಇಲಾಖೆಗೆ ಕೆಟ್ಟ ಹೆಸರು. ಈ ಹಿಂದೆ ಕೂಡಾ ಎಎಸ್‍ಐ ಶ್ರೀಕಲಾ ಅವರು ಮಂಗಳೂರು ನಗರದ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ತನ್ನ ಹಿರಿಯ ಅಧಿಕಾರಿಯೊಬ್ಬರ ಮೇಲೆ ಲೈಂಗಿಕ ಕಿರುಕುಳದ ಆರೋಪವನ್ನು ಹೊರಿಸಿದ್ದರು. ಅಷ್ಟೇ ಅಲ್ಲದೆ ಇವರ ವಿರುದ್ಧ ಇನ್ನೂ ಹಲವು ಪ್ರಕರಣಗಳು ಇವೆ. ರಾಜಾರೋಷವಾಗಿ ಇವರು ಹಫ್ತಾ ವಸೂಲಿ ಮಾಡುತ್ತಿದ್ದರು ಎನ್ನುವ ಆರೋಪ ಕೂಡಾ ಇದೆ. ಹೀಗಾಗಿ ಇಂತಹ ಗುರುತರ ಆರೋಪಗಳನ್ನು ಹೊಂದಿರುವ ಶ್ರೀಕಲಾ ಮತ್ತು ಇವರ ಕೃತ್ಯಗಳಿಗೆ ಬೆಂಗಾವಲಾಗಿ ನಿಂತಿರುವ ಪೊಲೀಸರ ವಿರುದ್ಧ ದಾಖಲಾದ ಪ್ರಕರಣಗಳ ತನಿಖೆ ನಡೆಯಬೇಕು. ಇಬ್ಬರನ್ನೂ ಕೂಡಲೇ  ಬಂಧಿಸಬೇಕು” ಎಂದು ಒತ್ತಾಯಿಸಿದರು.