ಎಸ್ಸಿ-ಎಸ್ಟಿಗೆ ಮೀಸಲಿಟ್ಟಿದ್ದ ಅನುದಾನ ದುರುಪಯೋಗ , ದಲಿತ ಮುಖಂಡ ಆರೋಪ

 

ನಮ್ಮ ಪ್ರತಿನಿಧಿ ವರದಿ
ಬಂಟ್ವಾಳ : ಪಲ್ಲಮಜಲು ಎಂಬಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಒಂದೇ ಮನೆ ಇದ್ದು, ಅಲ್ಲಿ ಲಕ್ಷಾಂತರ ರೂಪಾಯಿ ವ್ಯಯಮಾಡಿ ಎಸ್ಸಿ-ಎಸ್ಟಿಗೆ ಮೀಸಲಿಟ್ಟಿದ್ದ ಅನುದಾನವನ್ನು ರಸ್ತೆಗೆ ಖರ್ಚು ಮಾಡುವ ಮೂಲಕ ದುರುಪಯೋಗ ಪಡಿಸಲಾಗಿದೆ ಎಂದು ದಲಿತ ಮುಖಂಡ ಜನಾರ್ದನ ಚೆಂಡ್ತಿಮಾರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕು ತಹಶೀಲ್ದಾರ್ ಪುರಂದರ ಹೆಗ್ಡೆ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಎಸ್ಸಿ-ಎಸ್ಟಿ ಸಭೆಯಲ್ಲಿ ಮಾತನಾಡಿದ ಅವರು, ಈ ಸಂಬಂಧ ಪುರಸಭಾ ಇಂಜಿನಿಯರ್ ಹಾಗೂ ಅಂದಿನ ಮುಖ್ಯಾಧಿಕಾರಿ ಅವರೇ ನೇರ ಕಾರಣಕರ್ತರಾಗಿದ್ದು, ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಇದಕ್ಕೆ ರಾಜ ಪಲ್ಲಮಜಲು ಧ್ವನಿಗೂಡಿಸಿದರು.
ಬಂಟ್ವಾಳದ ಪಡಿತರದಾರರಿಗೆ ನ್ಯಾಯ ಬೆಲೆಯ ಅಂಗಡಿಯಲ್ಲಿ ಸೀಮೆಣ್ಣೆ ಸಿಗುತ್ತಿಲ್ಲ. ಆದರೆ ಇಲ್ಲಿಂದ ಮಂಗಳೂರಿಗೆ ಅಕ್ರಮವಾಗಿ ಸೀಮೆಣ್ಣೆ ಸಾಗಾಟವಾಗುತ್ತಿದ್ದು, ಕಾಳ ಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ಜನಾರ್ದನ ಚೆಂಡ್ತಿಮಾರ್ ಸಭೆಯ ಗಮನ ಸೆಳೆದರು. ಇದಕ್ಕೆ ವಿಶ್ವನಾಥ್ ಬಂಟ್ವಾಳ ದ್ವನಿ ಗೂಡಿಸಿದಾಗ ಮಧ್ಯಪ್ರವೇಶಿಸಿದ ತಹಶೀಲ್ದಾರ್ ಹಾಗೂ ಆಹಾರ ಇಲಾಖಾಧಿಕಾರಿಗಳು, “ಇಂತಹ ಪ್ರಕರಣ ನಡೆಯಲು ಸಾಧ್ಯವಿಲ್ಲ. ಪಡಿತರಕ್ಕೆ ಬರುವ ಸಾಮಗ್ರಿಗಳ ಲೆಕ್ಕ ಸ್ಪಷ್ಟವಾಗಿರುತ್ತದೆ” ಎಂದು ಸ್ಪಷ್ಟನೆ ನೀಡಿದರು. ಆದರೆ ಅಧಿಕಾರಿಗಳ ಸ್ಪಷ್ಟನೆಗೆ ದಲಿತ ಮುಖಂಡರು ಒಪ್ಪಲಿಲ್ಲ. ಇದೇ ವೇಳೆ ದಲಿತ ಮುಖಂಡರ ಒತ್ತಾಯದ ಮೇರೆಗೆ ಗ್ಯಾಸ್ ಹೊಂದಿರುವವರಿಗೂ ಸೀಮೆಣ್ಣೆ ಪೂರೈಸಬೇಕೆಂದು ನಿರ್ಣಯ ಕೈಗೊಳ್ಳಲಾಯಿತು.
ಅಮ್ಟೂರು ಮೂಲಕ ಅಕ್ರಮವಾಗಿ ಮರಳು, ಮರ, ದನಗಳ ಸಾಗಾಟ ನಡೆಯುತ್ತಿದ್ದು, ಈ ಬಗ್ಗೆ ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ದಿನೇಶ್ ಅಮ್ಟೂರು ಸಭೆಯಲ್ಲಿ ಒತ್ತಾಯಿಸಿದರು. ಕೊಳವೆ ಬಾವಿ ಕೊರೆಯಲು ನಿಷೇಧವಿದ್ದರೂ ಕೆಲವು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ರಾತೋರಾತ್ರಿ ಕೊಳವೆ ಬಾವಿ ಕೊರೆಯಲಾಗುತ್ತಿದೆ ಎಂದು ದಿನೇಶ್ ಅಮ್ಟೂರು ಆರೋಪಿಸಿದರು. ಈ ಸಂದರ್ಭ ಪ್ರತಿಕ್ರಿಯಿಸಿದ ತಹಶೀಲ್ದಾರ್ ಪುರಂದರ ಹೆಗ್ಡೆ, “ಈಗಾಗಲೇ ಕೆಲವು ಕಡೆ ಕೊಳವೆ ಬಾವಿ ಕೊರೆಯುವುದರನ್ನು ತಡೆ ಹಿಡಿಯಲಾಗಿದೆ” ಎಂದರು.
ಎಸ್ಸಿ-ಎಸ್ಟಿ ಕುಟುಂಬಗಳಲ್ಲಿ ಹಲವಾರು ಮಂದಿ ಪದವಿ ಪಡೆದರೂ ಉದ್ಯೋಗ್ಯವಿಲ್ಲದೆ ಮನೆಯಲ್ಲಿ ಬೀಡಿ ಕಟ್ಟಿ ಜೀವನ ಸಾಗಿಸುತ್ತಿದ್ದಾರೆ. ಅದರಲ್ಲೂ ಹೆಣ್ಣು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿದ್ದು ಇವರಿಗೆ ತಾಲೂಕಿನ ವಿವಿಧ ಇಲಾಖೆಯಲ್ಲಿ ಗುತ್ತಿಗೆ ಆದಾರದಲ್ಲಾದರೂ ಉದ್ಯೋಗಕ್ಕೆ ಅವಕಾಶ ಮಾಡಿಕೊಡಬೇಕೆಂದು ಬಿಜೆಪಿ ಎಸ್ಸಿ ಮೋರ್ಚಾದ ಅಧ್ಯಕ್ಷ ಗಂಗಾದರ ಒತ್ತಾಯಿಸಿದರು.