ಸ್ವಂತ ಮನೆಯೊಳಗೆ ಟಾಯ್ಲೆಟ್ ನಿರ್ಮಿಸಿದ ದಲಿತ ಕುಟುಂಬಕ್ಕೆ ಕಾಲೊನಿ ಬಿಡುವಂತೆ ಬೆದರಿಕೆ

ಸಾಂದರ್ಭಿಕ ಚಿತ್ರ

ಜಬಲ್ಪುರ (ಮ ಪ್ರ) : ತಮ್ಮ ಮನೆಯೊಳಗೆ ಟಾಯ್ಲೆಟ್ ನಿರ್ಮಿಸಿದ ವಿಷಯವೇ ದಲಿತ ಕುಟುಂಬವೊಂದಕ್ಕೆ ದುಬಾರಿಯಾಗಿ ಪರಿಣಮಿಸಿದ್ದು ಸಮುದಾಯವೇ ಅವರಿಗೆ ಜಾಗ ಖಾಲಿ ಮಾಡುವಂತೆ ಸೂಚಿಸಿ, ಸಾಮಾಜಿಕ ಬಹಿಷ್ಕಾರ ಹಾಕಿದ ವಿಲಕ್ಷಣ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ಒಂದು ವೇಳೆ ಕಾಲೊನಿ ಬಿಡದಿದ್ದರೆ ಪರಿಸ್ಥಿತಿ ನೆಟ್ಟಗಾಗಲಿಕ್ಕಿಲ್ಲ ಎಂದು ದಲಿತ ಕುಟುಂಬಕ್ಕೆ ಸಮುದಾಯದ ಸದಸ್ಯರು ಬೆದರಿಕೆಯೊಡ್ಡಿದ್ದಾರೆ.

ಜಬಲ್ಪುರದ ಪ್ರೇಮಸಾಗರ ಕಾಲೊನಿಯ ನಿವಾಸಿ ಸೀತಾರಾಂ ವನಶಂಕರ್ ಇತ್ತೀಚೆಗೆ ತನ್ನ ಮನೆಯೊಳಗೆ ಟಾಯ್ಲೆಟ್ ನಿರ್ಮಿಸಿದ್ದರು. ಈ ವಿಷಯ ತಿಳಿದು ಬರುತ್ತಲೇ ಸಮುದಾಯದ ಪ್ರಮುಖ ಮುಕೇಶ್ ವನಶಂಕರ್ ತನ್ನವರೊಂದಿಗೆ ಕೂಡಿಕೊಂಡು ಸೀತಾರಾಂ ಮನೆಗೆ ಬಂದು, ಕಾಲೊನಿ ಬಿಡುವಂತೆ ಸೂಚಿಸಿದ.

ಮನೆಯೊಳಗೆ ಟಾಯ್ಲೆಟ್ ನಿರ್ಮಿಸುವುದು ಸಮುದಾಯದ ಸಂಪ್ರದಾಯಕ್ಕೆ ವಿರುದ್ಧವಾಗಿದ್ದು, ಈ ಸಂಪ್ರದಾಯ ಉಲ್ಲಂಘಿಸಿದ ಸೀತಾರಾಂ ಈ ಊರಲ್ಲಿ ನಿಲ್ಲುವಂತಿಲ್ಲ ಎಂದು ಮುಕೇಶ್ ಎಚ್ಚರಿಸಿದ್ದಾನೆ.

ಸಂಪ್ರದಾಯ ಉಲ್ಲಂಘಿಸಿದಕ್ಕಾಗಿ ಸೀತಾರಾಂ ಕುಟುಂಬಕ್ಕೆ ಬಹಿಷ್ಕಾರ ಹಾಕಲಾಗಿದೆ ಎಂದಿರುವ ಮುಕೇಶ್, ಅವರೊಂದಿಗೆ ನೆರೆಹೊರೆಯವರು ವ್ಯವಹರಿಸುವಂತಿಲ್ಲ ಎಂದು ಹೇಳಿದ್ದಾನೆ.

ಕೂಲಿ ಕಾರ್ಮಿಕನಾಗಿರುವ ಸೀತಾರಾಂ ಪ್ರಗತಿಪರ ಮನಸ್ಥಿತಿಯ ವ್ಯಕ್ತಿಯಾಗಿದ್ದಾರೆ. ಈತನ ಮೂವರ ಪುತ್ರಿಯರು ಮತ್ತು ಪುತ್ರನೊಬ್ಬ ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ. ಕಾರಣ, ಈ ಕುಟುಂಬದತ್ತ ಸಮುದಾಯದವರೇ ವಕ್ರದೃಷ್ಟಿ ಬೀರುವಂತಾಗಿದೆ.

ಕುಟುಂಬದ ಮೇಲೆ ಸಮುದಾಯ ಹೇರಿರುವ ಬಹಿಷ್ಕಾರ, ಬೆದರಿಕೆ ಮತ್ತು ಸಾಮಾಜಿಕ ತಾರತಮ್ಯದ ಬಗ್ಗೆ ಸೀತಾರಾಂ ಪುತ್ರಿಯರು ಜಿಲ್ಲಾಡಳಿತಕ್ಕೆ ದೂರಿಕೊಂಡಿದ್ದು, ದೂರನ್ನು ಗಂಭೀರವಾಗಿ ಪರಿಗಣಿಸಿದ ಹೆಚ್ಚುವರಿ ಜಿಲ್ಲಾಧಿಕಾರಿ ಸುರೇಂದ್ರ ಕಠಾರಿಯಾ, ಪ್ರಕರಣದ ತನಿಖೆ ನಡೆಸುವಂತೆ ಸೂಚಿಸಿದ್ದಾರೆ. “ಒಂದೊಮ್ಮೆ ಈ ದೂರು ಸತ್ಯಾಂಶ ಕಂಡು ಬಂದಲ್ಲಿ ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು” ಎಂದವರು ಹೇಳಿದರು.