ದೈವ ನರ್ತಕರು ಉದ್ದೇಶಪೂರ್ವಕವಾಗಿ ಕೊರಗರನ್ನು ಅವಮಾನಿಸುತ್ತಿದ್ದುದೇ ?

  • ಬಿ ಎಸ್ ಹೃದಯ

ಶತಶತಮಾನಗಳಿಂದ ಅವಮಾನವನ್ನೇ ಉಂಡು, ಈ ನಾಡಿನ ಮೇಲ್ವರ್ಗದ ಜನರ ವೈಭವೋಪಿತ ಜೀವನಕ್ಕೆ ತಮ್ಮ ಜೀವಮಾನವನ್ನೇ `ಅಜಲು ಚಾಕರಿ’ (ಊಳಿಗಮಾನ್ಯ ವ್ಯವಸ್ಥೆ) ಮೂಲಕ ದಾರೆಯೆರೆದ ಸಮುದಾಯವೇ ಈ ಕೊರಗ ಸಮುದಾಯ. ಇಂತಹ ಸಮುದಾಯದಲ್ಲಿ ಹುಟ್ಟಿ ವ್ಯವಸ್ಥೆಯ ವಿರುದ್ಧ ಬಂಡಾಯವೆದ್ದು ಮಡಿದಾತ – ಕೊರಗ ತನಿಯ. ಈತ ಕೊರಗ ಸಮುದಾಯದ ಕುಲಪುರುಷ. ಕೊರಗರ ಕುಲದೈವ. ಸಮುದಾಯದ ಹಿರಿಯ. ಹಾಗಾಗಿ ಈತ ಕೊರಗಜ್ಜ. ಈತ ಸಮುದಾಯದ ರಕ್ಷಕನೆಂಬ ನಂಬಿಕೆ ಕೊರಗರದ್ದು. ಕೊರಗರು ಕುಲದೈವ ಕೊರಗಜ್ಜನನ್ನು ಮರದಡಿಯಲ್ಲಿಕಲ್ಲನಿಟ್ಟು, ತಮ್ಮದೇ ಆದ ಆಚರಣೆಗಳ ಮೂಲಕ ನಂಬಿಕೊಂಡು ಬಂದಿದ್ದಾರೆ.

ಈತನನ್ನು `ಕೊರಗಜ್ಜ’ನೆಂದೇ ಇಲ್ಲಿನ ಇತರ ಜನವರ್ಗದವರು ಕೂಡಾ ನಂಬಿಕೊಂಡು ಬಂದಿದ್ದಾರೆ. ಈತನಿಗೆ ಗುಡಿ ಕಟ್ಟೆಗಳನ್ನು ಕಟ್ಟಿ ಕೋಲ ನೇಮೋತ್ಸವಗಳನ್ನು ಮಾಡುತ್ತಾ ಕೊರಗ ತನಿಯನನ್ನೇ ಸಂಸ್ಕೃತಿಕರಣಗೊಳಿಸುತ್ತಿದ್ದಾರೆ.

ಈಚೆಗೆ ಕೊರಗಜ್ಜನ ಕೋಲ/ನೇಮೋತ್ಸವವೆಂಬುದು ಫ್ಯಾಷನ್ ಆಗಿಬಿಟ್ಟಿದೆ. ನಂಬಿಕೆಯ ಪರಾಕಷ್ಟೆಯೋ ಅಥವಾ ಅಂತಸ್ತಿನ ಅಹಮಿಕೆಯೋ ಗೊತ್ತಿಲ್ಲ.  ಅಂತೂ ಕೊರಗಜ್ಜನಿಗೆ ವಿಶೇಷ ಮಾನ್ಯತೆ ಇತರ ಜನವರ್ಗದವರಿಂದ ದೊರೆಯುತ್ತದೆ. ಇವರೆಲ್ಲ ಹೊಸ ಹೊಸ ಸಂಪ್ರದಾಯಗಳನ್ನೇ ಹುಟ್ಟು ಹಾಕುತ್ತಿದ್ದಾರೆ. ಇದರ ಮುಂದುವರಿದ ಭಾಗವೆಂಬಂತೆ – ಮಂಗಳೂರು ಕುಳಾಯಿಯಲ್ಲಿ ಮಾರ್ಚ್ 18ರಂದು ನಡೆದ `ಕೊರಗಜ್ಜ ಮತ್ತು ಏಳು ಕೊರಪೆÇಳುಗಳ ಕೋಲ’.

ಹಿಂದೆಂದೂ ಎಲ್ಲಿಯೂ ನಡೆದಿರದ ‘ಅಸಹ್ಯ’ವೊಂದು ಕೊರಗ ಸಮುದಾಯದ ಭಾರೀ ವಿರೋಧದ ನಡುವೆಯೂ ಬಹಳ ವಿಜ್ರಂಭನೆಯಿಂದ `ಕೊರಗಜ್ಜ ಮತ್ತು ಏಳು ಸ್ತ್ರೀ ಸ್ವರೂಪಿಣಿ ದೈವಗಳ ಕೋಲ’ ಎಂಬ ಹೊಸ ಹೆಸರಿನೊಂದಿಗೆ ನಡೆಯಿತು. ಇದೀಗ ಈ ಕುರಿತಾದ ಕೊರಗರ ಹೋರಾಟದ ಹಾದಿ ಕಾನೂನಿನ ಕಟಕಟೆಗೆ ಬಂದು ನಿಂತಿದೆ.

ಒಂದು ಕಡೆ ಕೊರಗರನ್ನು ಗೌರವಿಸುವ, ಮತ್ತೊಂದು ಕಡೆ ಕೊರಗರನ್ನು ಅವಮಾನಿಸುವ ಜಾಣ ನಡೆ ಇಂದು ನಿನ್ನೆಯದಲ್ಲ. ಅದು ಶತಮಾನಗಳಿಂದಲೂ ನಡೆದುಕೊಂಡು ಬಂದಿದೆ. ಅದು ಕೊರಗರ ಮೇಲೆ ಗುಪ್ತಗಾಮಿನಿಯಾಗಿ ದಾಳಿ ನಡೆಸುತ್ತಿದೆ. ಅದೂ ಕೂಡಾ ಕೊರಗಜ್ಜನ ಮುಖಾಂತರವೇ ನಡೆಸುತ್ತಿದ್ದಾರೆ. ಭಯ ಭಕ್ತಿಯಿಂದ ಕೊರಗಜ್ಜನನ್ನು ಆರಾಧಿಸುತ್ತಾ, ಅಲ್ಲಿಯೇ ಕೊರಗರನ್ನು ಅವಮಾನಿಸಲಾಗುತ್ತಿದೆ. ಕುಲದೈವ ಕೊರಗಜ್ಜನ ಮುಖಾಂತರವೇ ಕೊರಗರನ್ನು ಹೀಯಾಳಿಸುತ್ತಾರೆ. ಪರಿಶಿಷ್ಟ ಜಾತಿಯ ದೈವನರ್ತಕರ ಮೂಲಕ – ಪರಿಶಿಷ್ಟ ಪಂಗಡದ ಕುಲದೈವದ ಮಾನಹಾನಿಗೈಲಾಗುವ ನಡೆಯನ್ನು ಪ್ರಶ್ನಿಸಲಾಗದ ಸಂಧಿಗ್ದ ಸ್ಥಿತಿಯಲ್ಲಿ ಕೊರಗರಿದ್ದಾರೆ.

ನೇಮೋತ್ಸವ/ಕೋಲಗಳಲ್ಲಿ ಕೊರಗಜ್ಜನ ಪಾತ್ರಧಾರಿಯಾಗಿ ಕುಣಿಯುವ ಪರಿಶಿಷ್ಟ ಜಾತಿಯ ವೇಷಧಾರಿಯು ಅಂಕೆ ಇಲ್ಲದ ಮಾತು ಮತ್ತು ಕುಣಿತಗಳ ಮೂಲಕ ಕಚೇಷ್ಠೆ ಮಾಡುತ್ತಿರುತ್ತಾನೆ. ಸೊಂಟದ ಕೆಳಗಿನ ಮಾತುಗಳನ್ನು ಆಡುತ್ತಾನೆ. ಆ ಮೂಲಕ ಕೊಗರಗರ ಕುಲದೈವ ಮತ್ತು ಕೊರಗ ಸಮುದಾಯವನ್ನು ಅಣಕಿಸುತ್ತಾ – ಈ ಸಮಾಜಕ್ಕೆ ಕೊರಗರ ಕುರಿತಾಗಿ ಕೆಟ್ಟ ಸಂದೇಶವನ್ನು ರವಾನಿಸುತ್ತಾನೆ. ತುಳುನಾಡಿನ ಯಾವುದೇ ದೈವ – ದೇವರುಗಳಿಗೆ ಅವಮಾನಿಸಿದರೂ, ಅವಮಾನಗೈದರೂ ಹೊತ್ತಿ ಉರಿದು ಬೀಳುವ ಇಲ್ಲಿನ ಬುದ್ಧಿವಂತರು ಕೊರಗಜ್ಜನ ಕೋಲ ಕಂಡರೆ ಮಾತ್ರ ಮುಸಿಮುಸಿ ನಗುತ್ತಾರೆ !

ದಾಖಲಾದದ್ದು ಒಂದೇ ಒಂದು ಕೇಸು ! ಕೊರಗಜ್ಜನ `ದೈವ ನರ್ತಕರು’ ನೆಟ್ಟಗಾದರು!

ಕುಳಾಯಿಯಲ್ಲಿ ನಡೆದ ಕೋಲದ ನಂತರ ಠಾಣೆಯಲ್ಲಿ ಕೇಸು ದಾಖಲಾದದ್ದೇ ತಡ ದೈವನರ್ತಕರು ನೆಟ್ಟಗಾಗಿ ಬಿಟ್ಟರು. ತದನಂತರ ನಡೆದ ಅಷ್ಟೂ ಕೊರಗಜ್ಜನ ಕೋಲಗಳೂ ನೀಟಾಗಿ ನಡೆದವು. ಕುಚೇಷ್ಟೆಯ ಮಾತುಗಳಿಲ್ಲ. ತಿಕ ಅಲ್ಲಾಡಿಸುವ ಕುಣಿತಗಳಿಲ್ಲ. ಹಾಗಾದರೆ ಈ ಹಿಂದೆಲ್ಲಾ ಇವರು ಮಾಡುತ್ತಿದ್ದ ವಿಕೃತಿಗಳು ಉದ್ದೇಶಪೂರ್ವಕವೇ ? ಕೊರಗರನ್ನು ಹೀಯಾಸುವುದೇ ಇವರ ಉದ್ದೇಶವಾಗಿತ್ತೇ ?

ಇದೀಗ ಇದರ ವಿರುದ್ಧವೂ ಕಾನೂನಾತ್ಮಕ ಹೋರಾಟ ಸಿದ್ಧವಾಗುತ್ತಿದೆ. ಕುಲಗೆಟ್ಟ ವ್ಯವಸ್ಥೆ ಬದಲಾಗದಿದ್ದರೆ  ಅವಮಾನವೇ ಬದುಕಾದೀತು ಕೊರಗರಿಗೆ.