ದರೋಡೆಕೋರರು ಮನೆಗೆ ನುಗ್ಗಿ ಚಿನ್ನಾಭರಣ ಕಳವು

ಮಂಗಳೂರು : ದರೋಡೆಕೋರರ ತಂಡವೊಂದು ಮನೆಯೊಳಗೆ ನುಗ್ಗಿ ಮಾಲಕನಿಗೆ ಹಲ್ಲೆ ನಡೆಸಿ ಚಿನ್ನಾಭರಣ ಹಾಗೂ ನಗದು ದೋಚಿ ಪರಾರಿಯಾದ ಘಟನೆ ಪಡೀಲ್ ಕ್ಯಾಂಪ್ಕೋ ಕ್ವಾಟ್ರಸ್ ಬಳಿ ಭಾನುವಾರ ಮುಂಜಾನೆ ನಡೆದಿದೆ.

ಹಲ್ಲೆಗೊಳಗಾದ ಮನೆಮಾಲಕನನ್ನು ಭರತ್ ಆಳ್ವ ಎಂದು ಗುರುತಿಸಲಾಗಿದೆ.

ತನ್ನ ಪತ್ನಿ ಜೊತೆಗೆ ಭರತ್ ಆಳ್ವಾ ಪಡೀಲ್ ಬಳಿ ಇರುವ ಕ್ವಾಟ್ರರ್ಸನಲ್ಲಿ ವಾಸ ಮಾಡಿಕೊಂಡಿದ್ದರು. ಶನಿವಾರ ಇವರ ಪತ್ನಿ ತವರು ಮನೆಗೆ ಹೋಗಿದ್ದರು. ಭರತ್ ರಾತ್ರಿ ಕಾರ್ಯಕ್ರಮವೊಂದಕ್ಕೆ ತೆರಳಿ 10 ಗಂಟೆಗೆ ಮನೆಗೆ ಬಂದು ಮಲಗಿದ್ದರು. ತಡರಾತ್ರಿ 3 ಗಂಟೆಯ ವೇಳೆಗೆ ಬಾಗಿಲು ಬಡಿದ ಶಬ್ದ ಕೇಳಿಸಿದ್ದು, ಹೊರಗಡೆ ಬಂದು ನೋಡಿದಾಗ ಮೂರು ಮಂದಿಯ ಪೈಕಿ ಇಬ್ಬರ ಕೈಯಲ್ಲಿ ತಲವಾರುಗಳಿದ್ದು, ಇನ್ನೊಬ್ಬನ ಕೈಯಲ್ಲಿ ರಾಡ್ ಇತ್ತು. ಇದನ್ನು ಕಂಡು ಭಯಗೊಂಡ ಭರತ್ ಆಳ್ವ ಬಾಗಿಲು ತೆರೆಯಲಿಲ್ಲ. ದರೋಡೆಕೋರರು ಮನೆ ಮುಂಭಾಗದಲ್ಲಿ

ಬಾಗಿಲನ್ನು ಒಡೆಯುವ ಪ್ರಯತ್ನ ಮಾಡುತ್ತಿದ್ದಂತೆ ಮನೆ ಹಿಂಬಾಗಿಲಿನಿಂದ ಹೊರ ಬಂದ ಭರತ್ ಬೊಬ್ಬೆ ಹಾಕಿದ್ದಾರೆ.

ಇದನ್ನು ಕಂಡು ಆತಂಕಗೊಂಡ ದರೋಡೆಕೋರರ ತಂಡದಲ್ಲಿದ್ದ ಒಬ್ಬ ಭರತ್‍ರ ಮೇಲೆ ಹಲ್ಲೆ ನಡೆಸಿದ್ದಾನೆ. ಈ ವೇಳೆ ಭರತ್ ಮೊಣಗಂಟಿಗೆ ಗಾಯವಾಗಿದೆ. ಒಬ್ಬ ಭರತನನ್ನು ದಿಗ್ಬಂಧನದಲ್ಲಿರಿಸಿದರೆ, ಇನ್ನಿಬ್ಬರು ಮನೆಯೊಳಗೆ ಹೋಗಿ ಕಳವು ಕೃತ್ಯ ನಡೆಸಿದ್ದಾರೆ.

ಬಳಿಕ ಭರತ್ ನೆರೆಮನೆಯವರ ಸಹಕಾರ ಪಡೆದು ಕೋಣೆಯೊಳಗೆ ಹೋಗಿ ನೋಡಿದಾಗ 8 ಗ್ರಾಂ ಚಿನ್ನದ ಸರ, 9 ಗ್ರಾಂನ ಚಿನ್ನದ ಕಡಗ, 2 ಸಾವಿರ ರೂ ನಗದು, ಡ್ರೈವಿಂಗ್ ಲೈಸನ್ಸ್ , ಪಾನ್‍ಕಾರ್ಡ್, ಎಟಿಎಂ ಕಾರ್ಡ್, ಪರ್ಸನ್ನು ದರೋಡೆಕೋರರು ಕಳವು ಮಾಡಿದ್ದಾರೆ. ಸುಮಾರು 50,000 ರೂ ಮೌಲ್ಯದ ಸೊತ್ತುಗಳು ಕಳವಾಗಿವೆ.

ಮಂಗಳೂರು ಗ್ರಾಮಾಂತರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಕೆ ನಡೆಸುತ್ತಿದ್ದಾರೆ.