ದೈಹಿಕ ಊನತೆ ಇರುವವರಿಗೆ ಲೈಂಗಿಕ ಸುಖ ಪ್ರಾಪ್ತಿಗೆ ಸಹಾಯ

ದೈಹಿಕ ಊನತೆಯು ಯಾರಿಗೇ ಆಗಿದ್ದರೂ ನಿತ್ಯ ಜೀವನವನ್ನು ಒಂದು ಹೋರಾಟವನ್ನಾಗಿ ಬದಲಾಯಿಸುತ್ತದೆ. ಸಮಾಜದ ಸಂವೇದನಾರಹಿತ ನಡವಳಿಕೆ ಮತ್ತು ಆಡಳಿತವು ಅವರ ಸಮಸ್ಯೆಯನ್ನು ಪರಿಗಣಿಸಲು ವಿಫಲವಾಗಿರುವುದು ಕಷ್ಟವನ್ನು ಇನ್ನಷ್ಟು ಹೆಚ್ಚಿಸಿದೆ. ಹಾಗೆಯೇ ದೈಹಿಕ ಊನತೆ ಇರುವ ವ್ಯಕ್ತಿಗಳ ಜೊತೆಗೆ ದೈಹಿಕ ಸಂಪರ್ಕ ಬೆಳೆಸುವ ವಿಚಾರದ ಮಾತುಕತೆಗೂ ಸಮಾಜ ಹಿಂಜರಿಯುತ್ತದೆ.

ಈಗ ಝೆಕ್ ರಿಪಬ್ಲಿಕ್ ದೇಶದಲ್ಲಿ ಭಿನ್ನಚೇತನರಿಗೆಂದೇ ಲೈಂಗಿಕ ಹಕ್ಕು ಎಂದು ವಿವರಿಸಲಾದ ಯೋಜನೆಯೊಂದು ಜಾರಿಗೆ ಬರುತ್ತಿದೆ. ಬಹಳ ಮುಕ್ತ ಸ್ವಭಾವದ ಸಮಾಜ ಎಂದು ಪರಿಗಣಿತವಾಗಿರುವ ಝೆಕ್ ದೇಶದಲ್ಲಿ ಹೊಸ ಯೋಜನೆ ವಿವಾದಕ್ಕೀಡಾಗಿದ್ದರೂ, ಭಿನ್ನಚೇತನರಿಗೆ ಲೈಂಗಿಕ ಹಕ್ಕನ್ನು ನೀಡುವ ನಿಟ್ಟಿನಲ್ಲಿ ಸಿದ್ಧತೆ ನಡೆಯುತ್ತಿದೆ.

ಅಪಾಯವಿಲ್ಲದ ಸಂತೋಷ ಅಥವಾ ರೊಜೊಕೋಸ್ ಬೆಜ್ ರಿಜಿಕಾ ಎನ್ನುವ ಸಂಸ್ಥೆ ಐದು ಮಹಿಳೆಯರನ್ನು ಈ ನಿಟ್ಟಿನಲ್ಲಿ ತರಬೇತುಗೊಳಿಸುತ್ತಿದೆ. ಅವರಲ್ಲಿ ಬಹುತೇಕರು ಲೈಂಗಿಕ ಕಾರ್ಯಕರ್ತೆಯರು. ಈ ಲೈಂಗಿಕ ಸಹಾಯಕಿಯರು ಲೈಂಗಿಕವಾಗಿಯೇ ಆಪ್ತರಾಗುತ್ತಾರೆ ಎಂದೇನಲ್ಲ. ಸ್ಪರ್ಶ, ಅಪ್ಪುಗೆ ಮತ್ತು ಮಸಾಜ್‍ನಂತಹ ಕ್ರಮಗಳಿಂದ ಭಿನ್ನಚೇತನ ಗ್ರಾಹಕರಲ್ಲಿ ಲೈಂಗಿಕ ಶಕ್ತಿಯನ್ನು ತುಂಬಲು ಪ್ರಯತ್ನಿಸುತ್ತಾರೆ.

ಭಿನ್ನಚೇತನರಿಗೆ ಲೈಂಗಿಕ ಸಂತೋಷದ ಹಕ್ಕು ಎನ್ನುವ ವಿಷಯ ಈಗ ಜರ್ಮನಿ, ಡೆನ್ಮಾರ್ಕ್, ಸ್ವಿಜರ್ಲೆಂಡ್ ಮತ್ತು ನೆದರ್ಲೆಂಡಗಳಂತಹ ಐರೋಪ್ಯ ರಾಷ್ಟ್ರಗಳಲ್ಲಿ ಗಂಭೀರವಾಗಿ ಚರ್ಚೆಯಾಗುತ್ತಿದೆ. ಕೆಲವು ಸರ್ಕಾರಗಳು ಭಿನ್ನಚೇತನರಿಗೆ ಲೈಂಗಿಕ ಸಂಪರ್ಕ ಬೆಳೆಸಿಕೊಳ್ಳಲು ಹಣಕಾಸು ನೆರವನ್ನೂ ನೀಡುತ್ತಿವೆ.

ಝೆಕ್ ದೇಶದ 44 ವರ್ಷ ವಯಸ್ಸಿನ ಭಿನ್ನಚೇತನ ವ್ಯಕ್ತಿಯೊಬ್ಬರ ಪ್ರಕಾರ ಹೊಸ ಲೈಂಗಿಕ ಹಕ್ಕು ಯೋಜನೆಯಿಂದಾಗಿ ಅವರು ತಮ್ಮ ಜೀವನದಲ್ಲಿ ಮೊತ್ತ ಮೊದಲ ಬಾರಿಗೆ ಮಹಿಳೆಯ ಸ್ಪರ್ಶ ಪಡೆಯಲು ಸಾಧ್ಯವಾಗಿದೆ.