ಅರಬ್ಬೀ ಸಮುದ್ರದಲ್ಲಿ ಗಾಳಿ, ಅಲೆ ಆರ್ಭಟ ಮುಂದರಿಕೆ : ಮೀನುಗಾರಿಕೆ ಸ್ಥಗಿತ

ಸಾಂದರ್ಭಿಕ ಚಿತ್ರ

 ನಮ್ಮ ಪ್ರತಿನಿಧಿ ವರದಿ

ಕಾರವಾರ : ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾದ ಓಖಿ ಚಂಡಮಾರುತದ ಪ್ರಭಾವದಿಂದ ಪಶ್ಚಿಮ ಕರಾವಳಿಯ ಅರಬ್ಬೀ ಸಮುದ್ರದಲ್ಲಿ ಗಾಳಿ ಮತ್ತು ಅಲೆಗಳ ಆರ್ಭಟ ರವಿವಾರವೂ ಮುಂದುವರೆದಿದ್ದರಿಂದ ಜಿಲ್ಲೆಯಲ್ಲಿ ಮೀನುಗಾರಿಕೆಯನ್ನು ಸ್ಥಗಿತಗೊಳಿಸಲಾಗಿದೆ.

ಪಶ್ಚಿಮದಲ್ಲಿ ಓಖಿ ಚಂಡಮಾರುತ ಅಪ್ಪಳಿಸುವ ಸಾಧ್ಯತೆ ಇರುವುದರಿಂದ ಮೀನುಗಾರಿಕೆ ಇಲಾಖೆ ಡಿಸೆಂಬರ್ 4ರ ತನಕ ಜಿಲ್ಲೆಯ ಮೀನುಗಾರರು ಕಡಲಿಗೆ ಇಳಿಯದಂತೆ ಮುನ್ನೆಚ್ಚರಿಕೆ ಸಂದೇಶ ನೀಡಿದೆ. ಹಾಗಾಗಿ ಜಿಲ್ಲೆಯ ಬಹುತೇಕ ಮೀನುಗಾರಿಕಾ ಬೋಟುಗಳು ಮೀನುಗಾರಿಕೆಯನ್ನು ಸ್ಥಗಿತಗೊಳಿಸಿವೆ. ನೆರೆ ಜಿಲ್ಲೆಯ ಮಂಗಳೂರು, ಉಡುಪಿ ಜಿಲ್ಲೆಯ ಹಾಗೂ ಪಕ್ಕದ ಗೋವಾ, ಕೇರಳ ರಾಜ್ಯಗಳ ನೂರಾರು ಆಳ ಸಮುದ್ರ ಮೀನುಗಾರಿಕಾ ದೋಣಿಗಳು ಕೂಡ ಸುರಕ್ಷತಾ ದೃಷ್ಟಿಯಿಂದ ಬೈತಖೋಲ್ ಬಂದರಿನ ಬ್ರೇಕ್ ವಾಟರ್ ಬಳಿ ಲಂಗರು ಹಾಕಿ ಆಶ್ರಯ ಪಡೆದಿವೆ. ಕೆಲವು ಬಂದರುಗಳಲ್ಲಿ ಅಲೆಗಳ ರಭಸಕ್ಕೆ ಕೆಲವು ಬೋಟ್ ಮತ್ತು ದೋಣಿಗಳಿಗೆ ಹಾನಿಯಾಗಿದೆ. ಅಲ್ಲದೆ ಮೀನುಗಾರಿಕೆ ಸ್ಥಗಿತಗೊಂಡಿದ್ದರಿಂದ ಮೀನುಪ್ರಿಯರಿಗೆ ಮೀನಿನ ಅಭಾವ ಉಂಟಾಗಿ, ಮಾರುಕಟ್ಟೆಯಲ್ಲಿ ಮೀನಿನ ದರ ಗಗನಕ್ಕೇರಿದೆ.