ಸೈಕ್ಲಿಂಗಿನಿಂದ ಆರೋಗ್ಯ ಗಳಿಸಿದ ಸವಾರನಿಂದ ಇತರರಿಗೂ ಪ್ರೇರಣೆ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ತಾನು ಗಳಿಸಿದ ಆರೋಗ್ಯವನ್ನು ಇತರರೂ ಗಳಿಸಬೇಕು ಎಂಬುದು ಈ ಸೈಕ್ಲಿಸ್ಟ್ ಬಯಕೆ. ಹೌದು, ಮಂಗಳೂರು ನಿವಾಸಿ ಮಂಗಳೂರು ಸೈಕ್ಲಿಂಗ್ ಕ್ಲಬ್ಬಿನ ವಾಟ್ಸಪ್ ಗ್ರೂಪಿನ ಸದಸ್ಯ ಅನಿಲ್ ಶೇಟ್ ಎಂಬವರೇ ಆ ವ್ಯಕ್ತಿ. ಸೈಕ್ಲಿಂಗಿನಿಂದ 20 ಕೇಜಿ ತೂಕ ಇಳಿಸಿಕೊಂಡಿರುವುದು ಮಾತ್ರವಲ್ಲ ರಕ್ತದೊತ್ತಡದ ಕಾಯಿಲೆಯಿಂದ ಹೊರಬಂದಿದ್ದಾರೆ. ತಾನು ಗಳಿಸಿದ ಈ ಆರೋಗ್ಯ ಲಾಭಗಳು ಇತರರಿಗೂ ಸಿಗಬೇಕು ಎಂಬುದು ಅವರ ಆಸೆಯಂತೆ. ಪ್ರಾರಂಭದ ದಿನಗಳಲ್ಲಿ ಅಂದರೆ 2014ರ ಫೆಬ್ರುವರಿ ತಿಂಗಳಿಂದ 2017ರ ಮೇ ತಿಂಗಳ ಅವಧಿಯಲ್ಲಿ ಸುಮಾರು 35,000 ಕಿ ಮೀ ಸೈಕ್ಲಿಂಗ್ ಮಾಡಿದ್ದಾರೆ.

ಅನಿಲ್ ತನ್ನ ಬಾಲ್ಯ ಜೀವನದಿಂದ ಹಿಡಿದು ಎಂಐಟಿ ಮಣಿಪಾಲದಲ್ಲಿ ಇಂಜಿನಿಯರಿಂಗ್ ಪದವಿ ಪಡೆಯುವ ತನಕ ಮಾತ್ರವಲ್ಲ ಆ ನಂತರವೂ ಜಡತ್ವದಿಂದ ಕಳೆದಿರುವುದಾಗಿ ಹೇಳಿದ್ದಾರೆ. ಅವರ ಕಳಪೆ ಹವ್ಯಾಸಗಳಿಂದಾಗಿ 33 ನೇ ವಯಸ್ಸಿಗೆ ರಕ್ತದೊತ್ತಡ ಕಾಯಿಲೆ ಅಂಟಿಸಿಕೊಂಡಿದ್ದರು. ದೇಹ ತೂಕ 100 ಕೇಜಿಗೆ ಏರಿತ್ತು. ಈ ಸಂದರ್ಭ ಅವರು ದೈಹಿಕ ಚಟುವಟಿಕೆ ಕೈಗೊಳ್ಳಲು ಯೋಚಿಸುತ್ತಾರೆ ಮತ್ತು ಸೈಕ್ಲಿಂಗನ್ನು ಆಯ್ಕೆ ಮಾಡುತ್ತಾರೆ.

ಸೈಕ್ಲಿಸ್ಟ್ ಶಬರಿ ಜೊತೆಯಲ್ಲಿ ಅವರ ಸೈಕ್ಲಿಂಗ್ ಸಾಹಸ ಆರಂಭಗೊಂಡಿತು. ಪ್ರಾರಂಭದಲ್ಲಿ ತಣ್ಣೀರು ಬಾವಿ ರಸ್ತೆಯಲ್ಲಿ ಸೈಕ್ಲಿಂಗ್ ಕೈಗೊಂಡಿದ್ದರು. ಮೊದಲ ದಿನ ಶೇಟ್ 4 ಕಿ ಮೀ ತುಳಿಯುವಷ್ಟರಲ್ಲಿ ಹಿಂತಿರುಗಬೇಕೆಂದು ಅನ್ನಿಸಿತ್ತು. ನಂತರ ಪ್ರತಿದಿನ ಅದೇ ರಸ್ತೆಯಲ್ಲಿ ಸೈಕ್ಲಿಂಗ್ ಮಾಡುತ್ತಿದ್ದರು. ಅಂದಿನಿಂದ ಇಂದಿನವರೆಗೆ ಹಿಂತಿರುಗಿ ನೋಡಿದವರಲ್ಲ. ಸೈಕ್ಲಿಸ್ಟ್ ಗಾಡ್ ಫ್ರೇ ಮಂಗಳೂರು ಸೈಕ್ಲಿಂಗ್ ಕ್ಲಬ್ಬಿಗೆ ಸೇರಿಸಿದರು. ಇದೀಗ ಅವರು ಕ್ಲಬ್ಬಿನ ವಾಟ್ಸಪ್ ಗ್ರೂಪಿನ ಸದಸ್ಯರಲ್ಲಿ ಒಬ್ಬರಾಗಿದ್ದು, ಪ್ರತಿದಿನ ಸೈಕ್ಲಿಸ್ಟುಗಳನ್ನು ಪ್ರೇರೇಪಿಸುತ್ತಿದ್ದಾರೆ.