ಸೈನೈಡ್ ಮೋಹನ ಕೊಲೆಗಾರ ಎಂದು ಮತ್ತೊಮ್ಮೆ ಸಾಬೀತು

ಮಂಗಳೂರು : ಯುವತಿಯರನ್ನು ಪ್ರೀತಿಸಿ ಬಳಿಕ ಅತ್ಯಾಚಾರಗೈದು ಅವರಿಗೆ ಸೈನೈಡ್ ಕೊಟ್ಟು ಕೊಲೆ ಮಾಡಿದ ಬಳಿಕ ಚಿನ್ನಾಭರಣದೊಂದಿಗೆ ಪರಾರಿಯಾಗುತ್ತಿದ್ದ ಆರೋಪಿ ಮೋಹನನ ಇನ್ನೊಂದು ಕೃತ್ಯ ಸಾಬೀತಾಗಿದೆ. ನಗರದ ಆರನೇ ಹೆಚ್ಚುವರಿ ನ್ಯಾಯಾಲಯ ಈತನನ್ನು ಅಪರಾಧಿ ಎಂದು ಘೋಷಿಸಿದ್ದು, ಶಿಕ್ಷೆಯ ಪ್ರಮಾಣ ಶುಕ್ರವಾರದಂದು ಪ್ರಕಟ ಮಾಡಲಿದೆ.

ಶಾಲಾ ಶಿಕ್ಷಕ ಮೋಹನ್ ಸರಿಸುಮಾರು 20 ಯುವತಿಯರನ್ನು ಪ್ರೀತಿಸಿ ಅವರಿಗೆ ಸನೈಡ್ ನೀಡಿ ಕೊಲೆ ಮಾಡಿದ ಆರೋಪ ಎದುರಿಸುತ್ತಿದ್ದಾನೆ. ಹೀಗಾಗಿ ಈತನಿಗೆ ಸನೈಡ್ ಮೋಹನ ಎಂದು ಹೆಸರು ಬಂದಿತ್ತು.

ಪುತ್ತೂರು ತಾಲೂಕಿನ ಪಟ್ಟೆಮಜಲು ಗ್ರಾಮದ ಯುವತಿಯ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಈತನನ್ನು ತಪ್ಪಿತಸ್ಥನೆಂದು ಆರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ  ತೀರ್ಪು ನೀಡಿದೆ.

ಮೋಹನ್ ತನ್ನನ್ನು ಆನಂದ ಎಂದು ಪರಿಚಯಿಸಿಕೊಂಡು ಮದುವೆಯಾಗುವುದಾಗಿ ಯುವತಿಯನ್ನು ನಂಬಿಸಿ ಭರವಸೆ ನೀಡಿದ್ದ. 2009ರ ಸೆಪ್ಟೆಂಬರ್ 17ರಂದು ಆಕೆಯನ್ನು ಮಡಿಕೇರಿಗೆ ಕರೆದೊಯ್ದು ಲೈಂಗಿಕ ಸಂಪರ್ಕ ಬೆಳೆಸಿದ್ದ. ಬಳಿಕ ಅಲ್ಲಿನ ಬಸ್ಸು ನಿಲ್ದಾಣದಲ್ಲಿ ಸೈನೈಡ್  ನೀಡಿ ಕೊಲೆ ಮಾಡಿ ಪರಾರಿಯಾಗಿದ್ದ.

44 ಸಾಕ್ಷಿಗಳನ್ನು ವಿಚಾರಿಸಿ 60 ದಾಖಲೆಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಅನಿತಾ, ಲೀಲಾವತಿ ಮತ್ತು ಸುನಂದಾರನ್ನು ಕೊಲೆಗೈದ ಪ್ರಕರಣದ ವಿಚಾರಣೆ 2013ರಲ್ಲಿ ಪೂರ್ಣಗೊಂಡು ಆತನಿಗೆ ಈಗಾಗಲೇ ಮರಣದಂಡನೆ ಶಿಕ್ಷೆ ವಿಧಿಸಲಾಗಿದೆ.