ಸೈನೈಡ್ ಮೋಹನಗೆ ಸಾಯೋವರೆಗೂ ಜೈಲು

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಯುವತಿಯರ ಸರಣಿ ಹಂತಕ ಆರೋಪಿ ಸೈನೈಡ್ ಮೋಹನಗೆ ದಕ್ಷಿಣ ಕನ್ನಡ ಜಿಲ್ಲಾ ಸೆಷನ್ಸ್ ಕೋರ್ಟ್ ವಿಧಿಸಿದ್ದ ಮರಣದಂಡನೆ ಶಿಕ್ಷೆಯನ್ನು ಹೈಕೋರ್ಟ್ ವಿಭಾಗೀಯ ಮಾರ್ಪಾಡು ಮಾಡಿ ಆದೇಶ ಹೊರಡಿಸಿದೆ. ಸರಣಿ ಅತ್ಯಾಚಾರಿ, ಕೊಲೆಗಾರ ಸೈನೈಡ್ ಮೋಹನ್ 4ನೇ ಕೇಸಿನಲ್ಲೂ ದೋಷಿಯಾಗಿದ್ದು, ಅನಿತಾ ಬರಿಮಾರ್ ಎನ್ನುವ ಯುವತಿಯ ಕೊಲೆ ಪ್ರಕರಣದಲ್ಲಿ ಮೋಹನಗೆ ಮರಣದಂಡನೆ ಬದಲಾಗಿ ಸಾಯುವವರೆಗೆ ಸಾಧಾರಣ ಜೈಲು ಶಿಕ್ಷೆ ವಿಧಿಸಿ ಗುರುವಾರದಂದು ನ್ಯಾಯಾಲಯ ಆದೇಶ ನೀಡಿದೆ.

ನ್ಯಾಯಮೂರ್ತಿ ರವಿ ಮಳೀಮಠ್ ಹಾಗೂ ಜಾನ್ ಮೈಕೆಲ್ ಖುನ್ಹಾ ಅವರಿದ್ದ ವಿಭಾಗೀಯ ಪೀಠ ತೀರ್ಪು ನೀಡಿದೆ. ಅನಿತಾ ಎಂಬ ಯುವತಿಯನ್ನು 17-9-2009ರಂದು ಪುತ್ತೂರಿನ ಬಸ್ ನಿಲ್ದಾಣಕ್ಕೆ ಒಡವೆ ಹಾಕಿಕೊಂಡು ಬಾ ಎಂದು ನಂಬಿಸಿ ಇಬ್ಬರೂ ಮಡಿಕೇರಿಗೆ ಹೋಗಿ ಅಲ್ಲಿನ ವಸತಿ ನಿಲಯದಲ್ಲಿ ತಂಗಿದ್ದರು. ಯುವತಿಯೊಡನೆ ದೈಹಿಕ ಸುಖ ಅನುಭವಿಸಿ ಉಪಾಯವಾಗಿ ಸೈನೈಡ್ ನೀಡಿ ಕೊಲೆಮಾಡಿದ್ದ. ಬಳಿಕ ಆಕೆಯ ಬಳಿ ಇದ್ದ ಚಿನ್ನ, ಮೊಬೈಲ್ ದೋಚಿ ಪರಾರಿಯಾಗಿದ್ದ.

ಈ ಪ್ರಕರಣದಲ್ಲಿ ಮೋಹನಗೆ ದಕ್ಷಿಣ ಕನ್ನಡ ಜಿಲ್ಲಾ ಸೆಷನ್ಸ್ ಕೋರ್ಟ್ ಮರಣ ದಂಡನೆ ಶಿಕ್ಷೆ ನೀಡಿ ಆದೇಶ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಮೋಹನ್ ಹೈಕೋರ್ಟ್ ಮೊರೆ ಹೋಗಿದ್ದ.