ಬ್ಯಾಂಕಿಗೆ ಸತತ 3 ದಿನ ರಜೆ ; ದುಡ್ಡಿಲ್ಲದ ಗ್ರಾಹಕನಿಗೆ ಮತ್ತೆ ಬರೆ

ನಮ್ಮ ಪ್ರತಿನಿಧಿ ವರದಿ

ಮಂಗಳೂರು: ಕೇಂದ್ರ ಸರಕಾರ 500 ಮತ್ತು 1000 ರೂ ಮುಖಬೆಲೆಯ ನೋಟುಗಳನ್ನು ಅಮಾನ್ಯ ಮಾಡಿದ ಬಳಿಕ ದೇಶದ ಜನರ ಕೈಯಲ್ಲಿ ಇದೀಗ ದುಡ್ಡಿಲ್ಲ. ಸರಕಾರ ಕ್ಯಾಶ್ ಲೆಸ್ ಮನಿ ಸಿಸ್ಟಂ ದೇಶದಲ್ಲಿ ತರಲು ಉತ್ಸುಕತೆಯಲ್ಲಿದೆ. ಆದರೆ ಏಕಾಏಕಿ ಈ ವ್ಯವಸ್ಥೆಯನ್ನು ಜಾರಿಗೆ ತರುವುದಕ್ಕೆ ಸಾಧ್ಯವಿಲ್ಲ. ಅದರಲ್ಲೂ ಮಧ್ಯಮ, ಬಡ ವರ್ಗದ ಮಂದಿ ಇದೀಗ ಚಿಲ್ಲರೆ ಸಮಸ್ಯೆ ಇಲ್ಲದೆ ಕಂಗೆಟ್ಟಿರುವಾಗಲೇ ಇದೀಗ ಸತತ ಮೂರು ದಿನಗಳ ಬ್ಯಾಂಕ್ ಜನರನ್ನು ಇನ್ನಷ್ಟು ಹೈರಾಣಾಗಿಸಿದೆ.

ಎರಡನೇ ಶನಿವಾರ ರಜೆ, ಮತ್ತೆ ಭಾನುವಾರ, ಸೋಮವಾರ ಈದ್ ಮಿಲಾದ್ ಹೀಗೆ ಸತತ ಮೂರು ದಿನಗಳು ಬ್ಯಾಂಕಿನ ರಜೆ ಜನರಲ್ಲಿ ಇನ್ನಷ್ಟು ಆಕ್ರೋಶವನ್ನು ಮೂಡಿಸಿದೆ. ಹಬ್ಬಹರಿದಿನ, ಶುಭಸಮಾರಂಭಗಳ ಸಂದರ್ಭದಲ್ಲಿ ಬ್ಯಾಂಕುಗಳ ಸಾಲು ಸಾಲು ರಜೆ, ಎಟಿಎಂನಲ್ಲಿ ದುಡ್ಡಿಲ್ಲದೇ ಇರುವುದು ಒಟ್ಟು ಜನರಲ್ಲಿ ಆಕ್ರೋಶಕ್ಕೆ ಕಾರಣವಾಗುತ್ತಿದೆ.

ಈ ಹಿಂದೆ ಸತತ ರಜೆ ಇದ್ದರೂ ಜನ ಅಷ್ಟೊಂದು ಕಂಗೆಡುತ್ತಿರಲಿಲ್ಲ. ಬ್ಯಾಂಕಿನ ಎಟಿಎಂ ಮೂಲಕ ದುಡ್ಡು ಸ್ವೀಕರಿಸಲು ಅವಕಾಶವಿತ್ತು. ಆದರೆ ಇದೀಗ ಎಟಿಎಂಗಳು ಸಂಪೂರ್ಣ ಸ್ಥಗಿತವಾಗಿದ್ದರೆ, ಇನ್ನು ಕೆಲವು ಎಟಿಎಂಗಳಲ್ಲಿ ಬರುವುದು ಕೇವಲ 2000 ರೂ ಮಾತ್ರ. ಮತ್ತೆ ಹೆಚ್ಚು ಹಣದ ಅಗತ್ಯವಿದ್ದವರು ಇದೀಗ ದುಡ್ಡಿಲ್ಲದೆ ಕಂಗಾಲಾಗುವ ಸ್ಥಿತಿ ನಿರ್ಮಾಣವಾಗಿದೆ. ತುರ್ತು ಕೆಲಸದ ಅಗತ್ಯಗಳಿಗೆ ಹಣದ ಅಗತ್ಯವಿರುವವರು ಇನ್ನು ಮಂಗಳವಾರದವರೆಗೂ ಕಾಯಬೇಕಾಗಿದೆ.