ಇಲಾಖೆ ಜೀಪು, ಲಾರಿಗೆ ಹಾನಿ : 50 ಮಂದಿ ವಿರುದ್ಧ ಕೇಸು

ಪೊಲೀಸ್ ವಶದಲ್ಲಿದ್ದ ಯುವಕ ಸಾವು ಪ್ರಕರಣ

ಕಾಸರಗೋಡು : ನಗರದ ರಿಕ್ಷಾ ಚಾಲಕ ಚೌಕಿ ನಿವಾಸಿ ಸಂದೀಪನನ್ನು ಪೊಲೀಸರು ವಶಕ್ಕೆ ಪಡೆಯುವ ಮಧ್ಯೆ ಕುಸಿದು ಬಿದ್ದು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿ ಪ್ರತಿಭಟನೆಗಿಳಿದ ಆರೆಸ್ಸೆಸ್, ಬಿಜೆಪಿ ಕಾರ್ಯಕರ್ತರು ಪೊಲೀಸ್ ಜೀಪು ಹಾಗೂ ನಿಲ್ಲಿಸಲಾಗಿದ್ದ ಲಾರಿಯನ್ನು ಹಾನಿಗೊಳಿಸಿದ್ದಾರೆ. ಈ ಸಂಬಂಧ ಬಿಜೆಪಿ ಜಿಲ್ಲಾಧ್ಯಕ್ಷ ಕೆ ಶ್ರೀಕಾಂತ್ ಸಹಿತ 50 ಮಂದಿ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದಾರೆ.

ಶುಕ್ರವಾರ ರಾತ್ರಿ 8.30ರ ಸುಮಾರಿಗೆ ಈ ಘಟನೆ ನಡೆದಿತ್ತು. ಪೊಲೀಸರ ಹಲ್ಲೆಯಿಂದ ಸಂದೀಪ್ ಸಾವನ್ನಪ್ಪಿರುವುದಾಗಿ ಆರೋಪಿಸಿ ಸುಮಾರು 200 ಕಾರ್ಯಕರ್ತರು ನಗರ ಠಾಣಾ ಎದುರು ಜಮಾಯಿಸಿದ್ದರು. ಈ ಮಧ್ಯೆ ಠಾಣಾ ಆವರಣದಲ್ಲಿ ನಿಲ್ಲಿಸಲಾಗಿದ್ದ ಪೊಲೀಸ್ ಜೀಪು ಹಾಗೂ ಪೊಲೀಸರು ವಶಕ್ಕೆ ಪಡೆದಿದ್ದ ಕೆ ಎ 19 ಎ 5849 ನೋಂದಾವಣೆಯ ಲಾರಿಯನ್ನು ಹಾನಿಗೊಳಿಸಲಾಗಿದೆ. ಈ ಕಾರಣದಿಂದ ಸುಮಾರು 50 ಸಾವಿರ ರೂ ನಷ್ಟ ಅಂದಾಜಿಸಲಾಗಿದೆ. ಮುಖಂಡ ಶ್ರೀಕಾಂತ್, ಬಾಬು, ವೇಲಾಯುಧನ್, ರಾಜೇಶ್, ಪ್ರದೀಪ್ ಮಾವುಕೋಲ್ ಸೇರಿದಂತೆ 50 ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.