ದೇಶದಲ್ಲಿ ಕಸ್ಟಡಿ ಸಾವು, ಹಿಂಸೆ ಪ್ರಕರಣ ಹೆಚ್ಚಳ

ನವದೆಹಲಿ : ದೇಶದಲ್ಲಿ ಪೊಲೀಸ್ ಕಸ್ಟಡಿಯಲ್ಲಿ ಹಿಂಸೆ ಮತ್ತು ಸಾವು ಪ್ರಕರಣಗಳು ಹೆಚ್ಚುತ್ತಿದ್ದು, ಈ ಆರ್ಥಿಕ ವರ್ಷದ ಅಕ್ಟೋಬರ್ ತಿಂಗಳವರೆಗೆ ರಾಷ್ಟ್ರೀಯ ಮಾನವ ಹಕ್ಕು ಆಯೋಗದಲ್ಲಿ  88 ಕಸ್ಟಡಿ ಸಾವು ಹಾಗೂ 293 ಕಸ್ಟಡಿ ಹಿಂಸೆ ಪ್ರಕರಣಗಳು ದಾಖಲಾಗಿವೆ. ಇದೇ ರೀತಿ ಮುಂದುವರಿದಿದ್ದೇ ಆದಲ್ಲಿ ಈ ವರ್ಷದಲ್ಲಿ ನಡೆದಿರುವ ಕಸ್ಟಡಿ ಸಾವು ಮತ್ತು ಹಿಂಸೆ ಪ್ರಕರಣಗಳು ಹಿಂದಿನ ಮೂರು ವರ್ಷಗಳಲ್ಲಿಯೇ ಅಧಿಕವಾಗಲಿದೆ.

ಅಧಿಕೃತ ಅಂಕಿಅಂಶಗಳ ಪ್ರಕಾರ, 2013-14 ಅವಧಿಯಲ್ಲಿ 140 ಪೊಲೀಸ್ ಕಸ್ಟಡಿ ಸಾವು ಪ್ರಕರಣಗಳು ವರದಿಯಾಗಿದ್ದರೆ, ಮುಂದಿನ ವರ್ಷದಲ್ಲಿ ಇದು 130ಗೆ ಇಳಿದರೆ, ಕಳೆದ ವರ್ಷ ಈ ಸಂಖ್ಯೆ 153 ಆಗಿತ್ತು.

ಅಂತೆಯೇ ಕಸ್ಟಡಿ ಹಿಂಸೆ ಪ್ರಕರಣಗಳು 2013-14 ರಲ್ಲಿ 303 ಆಗಿದ್ದರೆ, ಮುಂದಿನ ಎರಡು ಆರ್ಥಿಕ ವರ್ಷಗಳಲ್ಲಿ ಇವುಗಳ ಸಂಖ್ಯೆ ಕ್ರಮವಾಗಿ 431 ಹಾಗೂ 493 ಆಗಿತ್ತು.

ಅಂಕಿಅಂಶಗಳಲ್ಲಿ ಕಂಡುಕೊಂಡಂತೆ ಮಹಾರಾಷ್ಟ್ರ, ಉತ್ತರ ಪ್ರದೇಶ ಹಾಗೂ ಗುಜರಾತ್ ರಾಜ್ಯಗಳಲ್ಲಿ ಅತೀ ಹೆಚ್ಚು ಕಸ್ಟಡಿ ಸಾವುಗಳು ಸಂಭವಿಸಿದ್ದರೆ, ಕಸ್ಟಡಿ ದೌರ್ಜನ್ಯ ಪ್ರಕರಣಗಳಲ್ಲಿ ಉತ್ತರ ಪ್ರದೇಶ, ದೆಹಲಿ ಮತ್ತು ಹರ್ಯಾಣ ಮುಂದಿವೆ.

ಪ್ರಸಕ್ತ ಆರ್ಥಿಕ ವರ್ಷದಲ್ಲಿ ಮಹಾರಾಷ್ಟ್ರದಲ್ಲಿ ಅತ್ಯಧಿಕ, ಅಂದರೆ 14 ಕಸ್ಟಡಿ ಸಾವು ಪ್ರಕರಣಗಳು ವರದಿಯಾಗಿದ್ದರೆ, ತಲಾ ಎಂಟು ಕಸ್ಟಡಿ ಸಾವುಗಳು ಸಂಭವಿಸಿದ ಗುಜರಾತ್ ಹಾಗೂ ಅಸ್ಸಾಂ ಎರಡನೇ ಸ್ಥಾನದಲ್ಲಿವೆ.

ಎಲ್ಲಾ ಕಸ್ಟಡಿ ಸಾವು ಪ್ರಕರಣಗಳು ಪೊಲೀಸರ ಹಿಂಸೆಯಿಂದಲೇ ಸಂಭವಿಸಿದೆಯೆಂದು ಹೇಳಲು ಅಸಾಧ್ಯವಾಗಿದ್ದು  ಕೆಲವೊಮ್ಮೆ ಬಂಧಿತರು ನೈಸರ್ಗಿಕ ಕಾರಣಗಳಿಂದ ಸಾವನ್ನಪ್ಪಿರುವ ಸಾಧ್ಯತೆಯಿದೆ. ಅವರಿಗೆ ಸರಿಯಾದ ಸಮಯದಲ್ಲಿ ಚಿಕಿತ್ಸೆ ನೀಡಿದ್ದರೆ ಅವರಲ್ಲಿ ಹಲವರು ಬದುಕುಳಿಯುತ್ತಿದ್ದರು ಎಂಬುದು ಹಕ್ಕು ಕಾರ್ಯಕರ್ತರ ಅಭಿಪ್ರಾಯ.