ತಂತ್ರಜ್ಞಾನದ ಮೂಲಕ ಜನರ ಸ್ವಾತಂತ್ರ್ಯಹರಣ

ಜನತೆಯ ಗೋಪ್ಯತೆಯ ಹಕ್ಕನ್ನೇ ಕಸಿದುಕೊಳ್ಳುವ ಸರ್ಕಾರದ ಧಾವಂತ ಆತಂಕ ಮೂಡಿಸುತ್ತದೆ. ತಮ್ಮ ಬೆರಳಚ್ಚು ತಾಳೆಯಾಗದ ಕಾರಣಕ್ಕೆ ಪಿಂಚಣಿ ಕಳೆದುಕೊಳ್ಳುವ ಹಿರಿಯ ನಾಗರಿಕರ ಬವಣೆ ಆತಂಕ ಮೂಡಿಸುತ್ತದೆ. ದುರಂತ ಎಂದರೆ ಸರ್ಕಾರದ ಮುಂದೆ ಪ್ರಶ್ನೆಗಳ, ಸಮಸ್ಯೆಗಳ ಮಳೆಗರೆಯಬೇಕಾದ ಪತ್ರಕರ್ತರು, ಮಾಧ್ಯಮ ಮಿತ್ರರು ಮೌನಕ್ಕೆ ಶರಣಾಗಿದ್ದಾರೆ.

ತಂತ್ರಜ್ಞಾನದ ಮೂಲಕ ಜನತೆಗೆ ಆಯ್ಕೆ ಸ್ವಾತಂತ್ರ್ಯ ನೀಡುವ ಬದಲು ನಾವು ಜನರ ಆಯ್ಕೆಗಳನ್ನು ಕದಿಯುತ್ತಿದ್ದೇವೆ. ತಂತ್ರಜ್ಞಾನ ಬಳಕೆಯನ್ನು ಹೇರುವ ಮೂಲಕ ಜನರ ಸ್ವಾತಂತ್ರ್ಯಹರಣವಾಗುತ್ತಿದೆ.

  • ನಿಖಿಲ್ ಪಹ್ವಾ

ಭಾರತದ ಅತಿ ದೊಡ್ಡ ಹಣಕಾಸು ತಂತ್ರಜ್ಞಾನದ ಕಂಪನಿಯ ಮುಖ್ಯಸ್ಥ ವೇದಿಕೆಯ ಮೇಲೆ ನಿಂತು ತಮ್ಮ ಉದ್ಯಮದ ಮೂಲ ಉದ್ದೇಶ ಭಾರತವನ್ನು ನಗದುರಹಿತ ದೇಶವನ್ನಾಗಿ ಮಾಡುವುದು ಎಂದು ಘಂಟಾಘೋಷವಾಗಿ ಹೇಳುವಾಗ ಆತಂಕವಾಗುತ್ತದೆ. ಕಳೆದ ಹಲವು ದಿನಗಳಿಂದ ದೇಶದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ದೇಶದ ಜನರನ್ನು ಡಿಜಿಟಲ್ ವಹಿವಾಟಿನ ಕಡೆಗೆ ಕೊಂಡೊಯ್ಯಲು ನಡೆಯುತ್ತಿರುವ ಪ್ರಯತ್ನಗಳು ಸ್ಪಷ್ಟವಾಗುತ್ತದೆ. ನಗದು ವಾಪಸಾತಿ, ಅಗ್ಗದ ಪದಾರ್ಥಗಳು, ಉಚಿತ ಕರೆಗಳು… ಇವೆಲ್ಲವೂ ಅಂತರ್ಜಾಲದ ಬಳಕೆಯನ್ನು ಹೆಚ್ಚಿಸುವುದೇ ಅಲ್ಲದೆ ಗ್ರಾಹಕರಿಗೆ ಅಲ್ಪಕಾಲಿಕ ಆಯ್ಕೆಗಳನ್ನೂ ನೀಡುತ್ತದೆ. ಡಿಜಿಟಲ್ ಆಗುವ ಆಯ್ಕೆಯನ್ನು ಜನತೆಗೆ ನೀಡಲಾಗುತ್ತಿದೆ. ಆದರೆ  ಮುಂದಿನ ದಿನಗಳಲ್ಲಿ ಡಿಜಿಟಲ್ ಆಗುವುದು ಕಡ್ಡಾಯವಾಗುತ್ತದೆ. ಆಗ ಜನರ ಎದುರು ಆಯ್ಕೆಯೇ ಇರುವುದಿಲ್ಲ.

ಈ ಡಿಜಿಟಲ್ ಪರಿವರ್ತನೆ ಎರಡು ರೀತಿಯಲ್ಲಿ ಸಂಭವಿಸುತ್ತಿದೆ. ಮೊದಲನೆಯದಾಗಿ ಆಧಾರ್ ಕಾರ್ಡ್ ಜಾರಿಗೊಳಿಸುವಲ್ಲಿ ಬಡ ಜನತೆಗೆ ತೀವ್ರ ಸಂಕಷ್ಟಗಳು ಎದುರಾಗುತ್ತಿದ್ದು ಸುಪ್ರೀಂ ಕೋರ್ಟ್ ಆಧಾರ್ ವಿರುದ್ಧ ಸ್ಪಷ್ಟ ತೀರ್ಪು ನೀಡಿದ್ದರೂ ಆಧಾರ್ ಕಡ್ಡಾಯ ಮಾಡಲಾಗುತ್ತಿದೆ. ಎರಡನೆಯದಾಗಿ ದೇಶದಲ್ಲಿ ಚಾಲ್ತಿಯಲ್ಲಿದ್ದ ಶೇ 86ರಷ್ಟು ಹಣವನ್ನು ರದ್ದುಪಡಿಸಿದ ನಂತರ ಜನರು ದುಬಾರಿ ತಂತ್ರಜ್ಞಾನಕ್ಕೆ ಬಲಿಯಾಗುತ್ತಿದ್ದಾರೆ.

ಈ ಸಂದರ್ಭದಲ್ಲಿ ಜನರು ಎದುರಿಸುತ್ತಿರುವ ಸಂಕಷ್ಟಗಳ ಬಗ್ಗೆ ಕೊಂಚವೂ ಕಳಕಳಿ ಇಲ್ಲದ ಸರ್ಕಾರ ಮತ್ತು ತಂತ್ರಜ್ಞಾನ ಉದ್ಯಮಗಳು ಜನರ ಬವಣೆಯನ್ನು ತಾತ್ಕಾಲಿಕ ಅನಾನುಕೂಲತೆ ಎಂದೇ ಪರಿಗಣಿಸುತ್ತಿವೆ. ಆದರೆ ದುರದೃಷ್ಟವಶಾತ್ ಆರ್ಥಿಕತೆ ಎನ್ನುವುದು ಸಾಫ್ಟವೇರ್ ಅಥವಾ ಉತ್ಪನ್ನಗಳಂತೆ ಅಲ್ಲ. ಫೇಸ್ಬುಕ್ಕಿನಲ್ಲಿ  ಮಾಹಿತಿ ಒದಗದಿದ್ದರೆ ಜನರು ಹಸಿವಿನಿಂದ ಬಳಲುವುದಿಲ್ಲ.  ಶೀಘ್ರಗತಿಯ ಪಯಣ ಮತ್ತು ದಾಖಲೆ ನಿರ್ಮಿಸುವ ಧಾವಂತ ವಾಸ್ತವ ಜಗತ್ತಿಗೆ ಅನ್ವಯಿಸುವುದಿಲ್ಲ. ಹಾಗಾಗಿಯೇ ಅಮಾಯಕ ಜನರು ಸಾಯುತ್ತಿದ್ದಾರೆ. ತಂತ್ರಜ್ಞಾನದ ಮೂಲಕ ಜನತೆಗೆ ಆಯ್ಕೆ ಸ್ವಾತಂತ್ರ್ಯ ನೀಡುವ ಬದಲು ನಾವು ಜನರ ಆಯ್ಕೆಗಳನ್ನು ಕದಿಯುತ್ತಿದ್ದೇವೆ. ತಂತ್ರಜ್ಞಾನ ಬಳಕೆಯನ್ನು ಹೇರುವ ಮೂಲಕ ಜನರ ಸ್ವಾತಂತ್ರ್ಯಹರಣವಾಗುತ್ತಿದೆ.

ಡಿಜಿಟಲ್ ವಸಾಹತೀಕರಣ ಪ್ರಕ್ರಿಯೆ ಜಾರಿಯಲ್ಲಿದೆ. ಇನ್ನು ಕೆಲವೇ ವರ್ಷಗಳಲ್ಲಿ ನಮ್ಮ ಜನಸಾಮಾನ್ಯರ ಅಸ್ತಿತ್ವವನ್ನು ನಿರೂಪಿಸಲು ಗೂಗಲ್ ಅಥವಾ ಆಪಲ್ ತಂತ್ರಜ್ಞಾನದ ಮೂಲಕ ನಮ್ಮ ಬೆರಳಿನ ಅಚ್ಚು ಕಡ್ಡಾಯವಾಗುತ್ತದೆ. ಭಾರತದ ಸಾರ್ವಭೌಮತ್ವವನ್ನು ಉಳಿಸಿಕೊಳ್ಳಲು ನಾವು ನಮ್ಮ ಬೆರಳಿನ ಗುರುತನ್ನು ಸಮರ್ಥಿಸಿಕೊಳ್ಳಬೇಕಾಗುತ್ತದೆ. ಆದರೆ ಗೂಗಲ್ ಅಥವಾ ಆಪಲ್ ಬಳಕೆ ನಿಮ್ಮ ಆಯ್ಕೆಯ ಪ್ರಶ್ನೆ, ಕಡ್ಡಾಯವಲ್ಲ ಎಂದು ಹೇಳಿದಾಗ ಮತ್ತು ಅಮಾನ್ಯೀಕರಣ ಪ್ರಕ್ರಿಯೆ ನಿರೂಪಿಸಿರುವಂತೆ,  ಪ್ರಜೆಗಳಿಗೆ ರಕ್ಷಣೆ ಇಲ್ಲವಾದಾಗ, ಮಾಹಿತಿ ಕದಿಯುವ ಪ್ರಕ್ರಿಯೆಯಿಂದ ರಕ್ಷಣೆ ಇಲ್ಲವಾದಾಗ ಸ್ಪಂದಿಸಲು ಯಾರೂ ಇರುವುದಿಲ್ಲ.

ಈ ಹಿನ್ನೆಲೆಯಲ್ಲೇ ತಂತ್ರಜ್ಞಾನ ಉದ್ಯಮಗಳು ಸರ್ಕಾರದ ರಕ್ಷಣೆಗಾಗಿ ಹಾತೊರೆಯುತ್ತಿವೆ. ಫ್ಲಿಪ್ ಕಾರ್ಟ್ ಮುಖ್ಯಸ್ಥ ಸಚಿನ್ ಬನ್ಸಾಲ್ ಹೇಳಿದಂತೆ ಚೀನಾದ ನೀತಿಯನ್ನು ಭಾರತ ಅನುಸರಿಸಬೇಕಾಗುತ್ತದೆ. ಚೀನಾದಲ್ಲಿ ವಿದೇಶಿ ಬಂಡವಾಳಕ್ಕೆ ಸ್ವಾಗತವಿದೆ, ಆದರೆ ಕಂಪನಿಗಳಿಗೆ ಅಸ್ತಿತ್ವ ಇರುವುದಿಲ್ಲ.

ಭಾರತದಲ್ಲಿ ಪ್ರಪ್ರಥಮ ಬಾರಿಗೆ ತಂತ್ರಜ್ಞಾನಕ್ಕೆ ರಾಜಕೀಯ ಸ್ವರೂಪ ನೀಡಲಾಗಿದೆ. ತಂತ್ರಜ್ಞಾನ ಕ್ಷೇತ್ರದಲ್ಲಿನ ಪರಸ್ಪರ ಕಿತ್ತು ತಿನ್ನುವ ಪೈಪೋಟಿಯಲ್ಲಿ ರಾಜಕೀಯ ಪ್ರವೇಶಿಸಿದಾಗ ತೋಳ ಕುರಿಗಳನ್ನು ಬೇಟೆಯಾಡಿದಂತಾಗುತ್ತದೆ.

ಕೆಲವು ದಿನಗಳ ಹಿಂದೆ ನಂದನ್ ನಿಲೇಕಣಿ ಭಾರತದ ಆರ್ಥಿಕತೆಯಲ್ಲಿ ಭಂಗ ಉಂಟಾಗುವುದಾಗಿಯೂ ಆಗ ಉದ್ಯಮಿಗಳು ತಮ್ಮ ವ್ಯಕ್ತಿಗತ ನೆಲೆಯಲ್ಲಿ ಇದರ ಲಾಭ ಪಡೆಯಬಹುದು ಎಂದು ಹೇಳಿದ್ದರು. ಬಹುಶಃ ಭಾರತದಲ್ಲಿ ಇಂದು ಈ ಪರಿಸ್ಥಿತಿ ಎದುರಾಗಿದೆ.

ಭಾರತವನ್ನು ಡಿಜಿಟಲೀಕರಣಗೊಳಿಸುವ ಭರವಸೆ ನೀಡಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ಸರ್ಕಾರ ಸಾಗುತ್ತಿರುವ ದಿಕ್ಕು ಆತಂಕ ಮೂಡಿಸುತ್ತದೆ. ಜನರ ಮೇಲೆ ಡಿಜಿಟಲೀಕರಣದಿಂದಾಗುವ ಪ್ರಭಾವವನ್ನು ನಿರ್ಲಕ್ಷಿಸಲಾಗುತ್ತಿದೆ. ಜನತೆಯ ಗೋಪ್ಯತೆಯ ಹಕ್ಕನ್ನೇ ಕಸಿದುಕೊಳ್ಳುವ ಸರ್ಕಾರದ ಧಾವಂತ ಆತಂಕ ಮೂಡಿಸುತ್ತದೆ. ತಮ್ಮ ಬೆರಳಚ್ಚು ತಾಳೆಯಾಗದ ಕಾರಣಕ್ಕೆ ಪಿಂಚಣಿ ಕಳೆದುಕೊಳ್ಳುವ ಹಿರಿಯ ನಾಗರಿಕರ ಬವಣೆ ಆತಂಕ ಮೂಡಿಸುತ್ತದೆ. ದುರಂತ ಎಂದರೆ ಸರ್ಕಾರದ ಮುಂದೆ ಪ್ರಶ್ನೆಗಳ, ಸಮಸ್ಯೆಗಳ ಮಳೆಗರೆಯಬೇಕಾದ ಪತ್ರಕರ್ತರು, ಮಾಧ್ಯಮ ಮಿತ್ರರು ಮೌನಕ್ಕೆ ಶರಣಾಗಿದ್ದಾರೆ.