ಕ್ರಶರ್ ಬಂಕರ್ ಕುಸಿದು ಇಬ್ಬರ ದುರ್ಮರಣ

ಮಾಲಿಕನ ನಿರ್ಲಕ್ಷ ್ಯಕ್ಕೆ ಲಾರಿ ಚಾಲಕ, ಕಾರ್ಮಿಕ ಬಲಿ

ನಮ್ಮ ಪ್ರತಿನಿಧಿ ವರದಿ

ಕಾರ್ಕಳ : ಕ್ರಶರಿನಲ್ಲಿ ಜಲ್ಲಿ ಸಂಗ್ರಹಿಸುವ ಬಂಕರ್ ಕುಸಿದ ಪರಿಣಾಮ ಲಾರಿಯಲ್ಲಿದ್ದ ಚಾಲಕ ಹಾಗೂ ಕ್ರಶರ್ ಕಾರ್ಮಿಕ ಇಬ್ಬರು ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿದ್ದಾರೆ.

ತಾಲೂಕಿನ ಶಿವಪುರ ಗ್ರಾಮದ ಕಲ್ಮುಂಡ ಎಂಬಲ್ಲಿ ಶನಿವಾರ ಬೆಳಗ್ಗೆ ಈ ದಾರುಣ ಘಟನೆ ನಡೆದಿದೆ. ಶಿವಪುರ ನಿವಾಸಿ ಪ್ರಸನ್ನ ಶೆಟ್ಟಿ ಮಾಲಕತ್ವದ ಶಿವಪುರ ಕಲ್ಮುಂಡದಲ್ಲಿನ ಮುಕಾಂಬಿಕಾ ಕ್ರಶರಿನಲ್ಲಿ ಈ ದುರಂತ ಸಂಭವಿಸಿದ್ದು, ಉತ್ತರಪ್ರದೇಶ ಮೂಲದ ಜಗದೀಶ್ ಹಾಗೂ ಟಿಪ್ಪರ್ ಚಾಲಕ ಗದಗ ಮೂಲದ ಸಂಜೀವ ಮೃತಪಟ್ಟವರು ಎಂದು ಗುರುತಿಸಲಾಗಿದೆ. ಶನಿವಾರ ಮುಂಜಾನೆ 9ರ ಸುಮಾರಿಗೆ ಟಿಪ್ಪರ್ ಚಾಲಕ ಸಂಜೀವ ತನ್ನ ಲಾರಿಯನ್ನು ಜಲ್ಲಿ ತುಂಬಿದ್ದ ಬಂಕರ್ ಒಳಗೆ ತಂದು ನಿಲ್ಲಿಸಿದ ಬಳಿಕ ಅಲ್ಲಿನ ಕಾರ್ಮಿಕ ಜಗದೀಶ ಬಂಕರಿನ ಬಾಗಿಲು ತೆಗೆದು ಜಲ್ಲಿ ತುಂಬಿಸುತ್ತಿದ್ದ. ಅರ್ಧ ಜಲ್ಲಿ ತುಂಬಿ ಜಲ್ಲಿಯನ್ನು ಸಮತಟ್ಟು ಮಾಡುತ್ತಿದ್ದ ವೇಳೆ ಜಲ್ಲಿ ತುಂಬಿದ್ದ ಇಡೀ ಬಂಕರ್ ಲಾರಿಯ ಮೇಲೆ ಬಿದ್ದ ಪರಿಣಾಮ ಟಿಪ್ಪರ್ ಲಾರಿ ಸಂಪೂರ್ಣ ಅಪ್ಪಚ್ಚಿಯಾಗಿ ಅದರ ಹಿಂಬದಿಯಲ್ಲಿ ಜಲ್ಲಿ ತುಂಬಿಸುತ್ತಿದ್ದ ಜಗದೀಶ್ ಹಾಗೂ ಚಾಲಕ ಸಂಜೀವ ಬಂಕರಿನ ಅಡಿಗೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಪೈಕಿ ಜಗದೀಶ್ ಮೃತದೇಹ ಸಂಪೂರ್ಣ ಛಿದ್ರವಾಗಿದೆ.

“ಈ ದುರ್ಘಟನೆಗೆ ಕ್ರಶರ್ ಮಾಲಕ ಪ್ರಸನ್ನ ಶೆಟ್ಟಿಯವರ ನಿರ್ಲಕ್ಷ್ಯವೇ ಪ್ರಮುಖ ಕಾರಣವಾಗಿದೆ. ಯಾಕೆಂದರೆ ಬಂಕರಿನ ಕಂಬಗಳು ದುರ್ಬಲವಾಗಿದ್ದು, ಭಾರೀ ಪ್ರಮಾಣದಲ್ಲಿ ಜಲ್ಲಿಯನ್ನು ತುಂಬಿಸಿದ್ದರ ಪರಿಣಾಮ ಭಾರ ತಡೆಯಲಾರದೇ ಬಂಕರ್ ಕುಸಿದು ಈ ದುರ್ಘಟನೆ ನಡೆದಿದೆ. ದುರ್ಘಟನೆಯಂದ ಟಿಪ್ಪರ್ ಸಂಪೂರ್ಣ ಛಿದ್ರವಾಗಿದೆ. ಟಿಪ್ಪರ್ ಚಾಲಕ ತನ್ನ ಸೀಟಿನಲ್ಲಿ ಕುಳಿತಲ್ಲೇ ಅಪ್ಪಚ್ಚಿಯಾಗಿದ್ದು ಘಟನೆಯ ಭೀಕರತೆಗೆ ಸಾಕ್ಷಿಯಾಗಿದೆ” ಎಂದು ಸ್ಥಳೀಯರು ತಿಳಿಸಿದ್ದಾರೆ.

ಬಳಿಕ ಬೃಹತ್ ಯಂತ್ರಗಳನ್ನು ಬಳಸಿ ಬಂಕರ್ ತೆರವುಗೊಳಿಸಿ ಟಿಪ್ಪರಿನೊಳಗೆ ಸಿಲುಕಿದ್ದ ಮೃತದೇಹಗಳನ್ನು ಗ್ಯಾಸ್ ಕಟ್ಟರ್ ಬಳಸಿ ಹೊರತೆಗೆಯಲಾಯಿತು. “ಘಟನೆ ನಡೆದ ಜಲ್ಲಿ ಕ್ರಶರಿನಲ್ಲಿ ಕಾರ್ಮಿಕರ ಸುರಕ್ಷತೆಗೆ ಮಾಲಿಕರು ಸೂಕ್ತ ಕ್ರಮಕೈಗೊಂಡಿಲ್ಲ ಹಾಗೂ ಗಣಿ ಇಲಾಖೆಯ ಅಧಿಕಾರಿಗಳು ನಿಯಮಾವಳಿಗಳನ್ನು ಉಲ್ಲಂಘಿಸಿ ಕಾರ್ಯಾಚರಿಸುವ ಕ್ರಶರುಗಳ ವಿರುದ್ಧ ಸೂಕ್ತ ಕ್ರಮಕೈಗೊಂಡಿಲ್ಲ” ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಈ ಕುರಿತು ಕ್ರಶರ್ ಮಾಲಿಕ ಪ್ರಸನ್ನ ಶೆಟ್ಟಿ ವಿರುದ್ಧ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಯ ಬಳಿ ಮಾಲಕ ನಾಪತ್ತೆಯಾಗಿದ್ದಾನೆ.