ಬಡಹುಡುಗಿಯ ಮೇಲೆ ಸೆಳೆತ

ಒಂದು ಚೆಂದದ ವಸ್ತು ಕಣ್ಣಿಗೆ ಬಿತ್ತು ಅಂದಾಕ್ಷಣ ಅದನ್ನು ಶೋಕೇಸಿನಲ್ಲಿಡಲು ಖರೀದಿಸುತ್ತೇವಲ್ಲಾ ಆ ರೀತಿಯಾ ಮದುವೆಯೆಂದರೆ? ಜೀವನಸಂಗಾತಿಯೆಂದರೆ ಶೋಕೇಸ್ ಗೊಂಬೆಯಲ್ಲವಲ್ಲ. 

ಪ್ರ : ನಾನೊಬ್ಬ ಶ್ರೀಮಂತ ಬಿಸಿನೆಸ್‍ಮ್ಯಾನಿನ ಏಕೈಕ ಪುತ್ರ. ಹೊರಊರಿನಲ್ಲಿ ಓದು ಮುಗಿಸಿ ಈಗ ಕೆಲವು ಸಮಯಗಳಿಂದ ಅಪ್ಪನ ವ್ಯವಹಾರದಲ್ಲಿಯೇ ತೊಡಗಿಕೊಂಡಿದ್ದೇನೆ. ನಮ್ಮ ಜೊತೆ ಐವತ್ತಕ್ಕೂ ಹೆಚ್ಚು ನೌಕರರಿದ್ದಾರೆ. ಅರ್ಧಕ್ಕರ್ಧ ಹುಡುಗಿಯರು. ಅವರಲ್ಲಿ ಕೆಲವರು ನನ್ನನ್ನು ಆಕರ್ಷಿಸಲು ಅನೇಕ ಕಸರತ್ತುಗಳನ್ನು ಮಾಡುತ್ತಿದ್ದರೂ ಅವರ್ಯಾರೂ ನನ್ನ ಮನಸೆಳೆಯಲು ಯಶಸ್ವಿಯಾಗಿಲ್ಲ. ಆದರೆ ನನ್ನನ್ನು ನಿದ್ದೆಯಲ್ಲೂ ಕಾಡುತ್ತಿದ್ದುದು ಆ ಅಪರಿಚಿತ ಹುಡುಗಿ. ಪ್ರತೀದಿನ ಬೆಳಿಗ್ಗೆ ಆರು ಘಂಟೆಗೆ ನಾನು ಜಾಗಿಂಗಿಗೆ ಹೋಗುವಾಗ ಅವಳು ನಮ್ಮ ರಸ್ತೆಯ ತಿರುವಿನಲ್ಲಿ ನಡೆದುಕೊಂಡು ಹೋಗುತ್ತಿರುತ್ತಾಳೆ. ಹಾಲುಬಿಳುಪಿನ ಆ ಬಳುಕುವ ಬಳ್ಳಿಯ ಕಣ್ಣಿನ ಮಿಂಚಿಗೆ ಮನಸೋತಿದ್ದೇನೆ. ಅವಳು ಪ್ರತೀದಿನ ಒಂದು ಫ್ಯಾಕ್ಟರಿಗೆ ಕೆಲಸಕ್ಕೆ ಹೋಗುವ ವಿಷಯ ತಿಳಿದುಕೊಂಡೆ. ಮನೆಯಲ್ಲಿ ಕಡುಬಡತನವಿರಬಹುದು ಅಂತ ಅವಳ ಡ್ರೆಸ್ಸಿನಿಂದಲೇ ಅರ್ಥವಾಗುತ್ತದೆ. ಆ ಸರಳ ಉಡುಪಿನಲ್ಲೂ ಅವಳ ಸೌಂದರ್ಯ ಮಿಂಚುತ್ತದೆ. ದಿನಾ ಸಿಗುವುದರಿಂದ ಒಬ್ಬರನ್ನೊಬ್ಬರು ನೋಡಿ ಮುಗುಳ್ನಗುವಷ್ಟು ಆತ್ಮೀಯತೆ ಬೆಳೆದಿದೆ. ಆದಷ್ಟು ಬೇಗ ಅವಳ ಹತ್ತಿರ ನನ್ನ ಪ್ರೇಮನಿವೇದನೆ ಮಾಡಿಕೊಳ್ಳಬೇಕೆಂದೂ ಇದ್ದೇನೆ. ನಮ್ಮ ಮನೆಯಲ್ಲಿ ಇಂತಹ ಸಂಬಂಧಕ್ಕೆ ವಿರೋಧ ವ್ಯಕ್ತವಾಗುವುದು ಗ್ಯಾರೆಂಟಿಯಾದರೂ ಎಲ್ಲರನ್ನೂ ಎದುರಿಸಿ ಮದುವೆಯಾಗಲೂ ಸಿದ್ಧನಿದ್ದೇನೆ. ನಿಮ್ಮ ಅಭಿಪ್ರಾಯವೇನು ಈ ವಿಷಯದಲ್ಲಿ?

: ಬರೀ ಬಾಹ್ಯಸೌಂದರ್ಯ ನೋಡಿ ಮರುಳಾಗಿ ಮದುವೆಂiÀi ಕನಸು ಕಾಣುವುದು ಖಂಡಿತಾ ಸಲ್ಲ. ಅವಳನ್ನು ನೀವಿನ್ನೂ ಮಾತಾಡಿಸಿಯೇ ಇಲ್ಲ. ಅವಳ ಮೆಂಟಾಲಿಟಿಗೂ ನಿಮ್ಮದಕ್ಕೂ ಹೊಂದಿಕೆಯಾಗುತ್ತಾ ಅಂತಲೂ ನೀವಿನ್ನೂ ತಿಳಿದುಕೊಂಡಿಲ್ಲ. ಒಂದು ಚೆಂದದ ವಸ್ತು ಕಣ್ಣಿಗೆ ಬಿತ್ತು ಅಂದಾಕ್ಷಣ ಅದನ್ನು ಶೋಕೇಸಿನಲ್ಲಿಡಲು ಖರೀದಿಸುತ್ತೇವಲ್ಲಾ ಆ ರೀತಿಯಾ ಮದುವೆಯೆಂದರೆ? ಜೀವನಸಂಗಾತಿಯೆಂದರೆ ಶೋಕೇಸ್ ಗೊಂಬೆಯಲ್ಲವಲ್ಲ.  ಪ್ರತೀ ವಿಷಯದಲ್ಲೂ ಒಬ್ಬರಿಗೊಬ್ಬರು ಪೂರಕವಾಗಿ ಕಷ್ಟಸುಖವನ್ನು ಹಂಚಿಕೊಳ್ಳಲಾಗದಿದ್ದರೆ ಅದೆಂತಹ ದಾಂಪತ್ಯ? ಬಡ ಹುಡುಗಿಯನ್ನು ಮದುವೆಯಾಗಬಾರದಂತಲ್ಲ. ಆದರೆ ಸೌಂದರ್ಯದ ಜೊತೆಗೆ ಅವಳಲ್ಲಿ ನಿಮಗೆ ಸಹಧರ್ಮಿಣಿಯಾಗಬಲ್ಲ ಇತರ ಗುಣಗಳಿವೆಯಾ ಅನ್ನುವುದನ್ನೂ ಗಮನ ದಲ್ಲಿಟ್ಟುಕೊಂಡು ಮುಂದುವರಿಯುವುದು ಒಳ್ಳೆಯದು. ಅದೂ ಅಲ್ಲದೇ ಈ ವಿಷಯದಲ್ಲಿ ಅವಳ ಅಭಿಪ್ರಾಯವೂ ಅಷ್ಟೇ ಮುಖ್ಯ. ಯಾವುದಕ್ಕೂ ಗಡಿಬಿಡಿ ಮಾಡದೇ ಮೊದಲು ಆ ಹುಡುಗಿಯ ಸ್ನೇಹ ಸಂಪಾದಿಸಿ. ಅವಳನ್ನು ಮೊದಲು ಅರಿಯಿರಿ. ನಿಜವಾಗಿ ಅವಳು ಕೆಸರಿನಲ್ಲಿ ಹುಟ್ಟಿದ ಕಮಲವೇ ಆಗಿದ್ದರೆ ನೀವು ನಿಮ್ಮ ಹೃದಯರಾಣಿಯನ್ನಾಗಿ ಮಾಡಿಕೊಳ್ಳಲು ಯಾರ ಅಡ್ಡಿಆತಂಕಗಳಿದ್ದರೂ ನಿವಾರಿಸಿಕೊಳ್ಳಿ.